More

    ಗಬ್ಬೂರ ಬೈಪಾಸ್​ನಲ್ಲಿ ಪ್ರತಿಭಟನೆ

    ಹುಬ್ಬಳ್ಳಿ: ತೈಲ, ಅಡುಗೆ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಮತ್ತು ಜಿಎಸ್​ಟಿ ಕಡಿಮೆ ಮಾಡಲು ಆಗ್ರಹಿಸಿ ನಗರದ ಹೊರವಲಯದ ಗಬ್ಬೂರ ಬೈಪಾಸ್ ಬಳಿ ರೈತ, ವಿವಿಧ ಕಾರ್ವಿುಕ, ಲಾರಿ ಮಾಲೀಕರ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.

    ಗಬ್ಬೂರು ಬೈಪಾಸ್​ನ ಟೋಲ್ ಪ್ಲಾಜಾ ಎದುರಿನಲ್ಲಿಯೇ ಟೆಂಟ್ ಹಾಕಿಕೊಂಡ ಪ್ರತಿಭಟನಾಕಾರರು, ಆರಂಭದಲ್ಲಿ ಕೆಲ ನಿಮಿಷ ಮಾನವ ಸರಪಳಿ ರಚಿಸಿದರು. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಸರಕು ಸಾಗಣೆ ತುಟ್ಟಿಯಾಗಿದ್ದು, ಸಾಮಾನ್ಯ ಜನರ ಬದುಕು ತೀವ್ರತರ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಳ ತಡೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಾಹನ ಸಂಚಾರ ತಡೆಗೆ ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ನಂತರ, ಟೋಲ್​ಗೇಟ್ ಎದುರು ಸಾಂಕೇತಿಕ ಧರಣಿ, ಪ್ರತಿಭಟನಾ ಸಭೆ ನಡೆಸಲಾಯಿತು. ಗೂಡ್ಸ್ ಟ್ರಾನ್ಸ್​ಪೋರ್ಟ್ ಅಸೋಸಿಯೇಷನ್ ಹು-ಧಾ ಶಾಖೆ ಉಪಾಧ್ಯಕ್ಷ ನಿರಂಜನ ಹಿರೇಮಠ, ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬಾಜಾನ ಮುಧೋಳ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ಮತ್ತಿತರರು ಮಾತನಾಡಿದರು.

    ಈ ಸಂದರ್ಭದಲ್ಲಿ ಸಿಲಿಂಡರ್ ದರ ಏರಿಕೆ ಖಂಡಿಸಿ ಮಹಿಳೆಯರು ಸ್ಥಳದಲ್ಲೇ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದರು. ಪಲಾವ್-ಕೋಸಂಬರಿ ಸವಿದ ನಂತರ ಪ್ರತಿಭಟನಾಕಾರರು ಕೆಲವು ನಿಮಿಷವಾದರೂ ವಾಹನ ಸಂಚಾರ ತಡೆಯುತ್ತೇವೆ. ಅನುಮತಿ ನೀಡಿ ಎಂದು ಪೊಲೀಸರನ್ನು ಕೋರಿದರು. ಆದರೆ, ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯುವುದು ಸಲ್ಲದು ಎಂದು ಬಂದೋಬಸ್ತ್​ನ ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಪಿ ರಾಮರಾಜನ್ ತಿಳಿಸಿದರು. ಶಾಂತಿಯುತವಾಗಿ ಧರಣಿ ಮುಂದುವರಿಸಲು ಇಲಾಖೆಯಿಂದ ಆಕ್ಷೇಪವಿಲ್ಲ ಎಂದೂ ತಿಳಿಸಿದರು. ದರ ಇಳಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದೆ ಗಂಭೀರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಹೋರಾಟವನ್ನು ಸಮಾರೋಪಗೊಳಿಸಿದರು.

    ಪ್ರಮುಖರಾದ ಗೈಬುಸಾಬ ಹೊನ್ಯಾಳ, ಐ.ಎಂ. ಜವಳಿ, ಮೈನುದ್ದೀನ್ ಮುಲ್ಲಾ, ಇಫ್ತಿಯಾಜ ಬಿಳಿಪಸಾರ, ರಮೇಶ ಬೋಸ್ಲೆ, ಬಸೀರ ಅಹ್ಮದ ಮುಧೋಳ, ಸಾಜಿದ್ ಹಾಲಭಾವಿ, ಎ.ಎಸ್. ಪೀರಜಾದೆ, ಎನ್.ಐ. ನದಾಫ, ಎಂ.ಎಚ್. ಮುಲ್ಲಾ, ಎಸ್.ಎಂ. ದೊಡಮನಿ, ಟ್ಯಾಕ್ಸಿ ಚಾಲಕರ ಸೇವಾ ಅಸೋಸಿಯೇಶನ್, ಸೌತ್ ಝೋನ್ ಮೋಟಾರ್ ಟ್ರಾನ್ಸ್​ಪೋರ್ಟರ್ಸ್ ವೆಲ್​ಫೇರ್ ಅಸೋಸಿಯೇಷನ್, ಕಳಸಾ-ಬಂಡೂರಿ ಹೋರಾಟ ಸಮಿತಿ, ಕಾರ್ವಿುಕ ಸಂಘಟನೆಗಳು, ಇತರ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

    ಯಂತ್ರೋಪಕರಣ ಬೆಲೆ ಇಳಿಸಲು ಆಗ್ರಹ

    ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಮಷಿನರಿ ಸಾಮಗ್ರಿಗಳ ದರ ಇಳಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ಜೆಸಿಬಿ ಮಾಲೀಕರ ಸಂಘದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

    ತೈಲ ಬೆಲೆ ಏರಿಕೆಯಿಂದ ಜೆಸಿಬಿ ಮಾಲೀಕರು ಮತ್ತು ಚಾಲಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೆಸಿಬಿ ಬೇಡಿಕೆ ಕಡಿಮೆಯಾಗಿದೆ. ಜತೆಗೆ ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆಗಳು ಉದ್ಭವಿಸಿವೆ. ಹೀಗಾಗಿ, ತೈಲ ಬೆಲೆ, ವಿದ್ಯುತ್ ಹಾಗೂ ಯಂತ್ರೋಪಕರಣಗಳ ಬೆಲೆ ಇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಅಧ್ಯಕ್ಷ ಅಮರನಾಥ ಜಿಗಳೂರ, ಉಪಾಧ್ಯಕ್ಷ ಶೇಖಪ್ಪ ಹಾಳಕೇರಿ, ಕಾರ್ಯದರ್ಶಿ ರಿಯಾಜ ಸವದತ್ತಿ, ಸಹ ಕಾರ್ಯದರ್ಶಿ ಸಂತೋಷ ಮಾನೆ, ಲಕ್ಷ್ಮಣ ಪೂಜಾರ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts