More

    ಗದಗ-ವಾಡಿ ರೈಲ್ವೆ ಹೋರಾಟ ಮುನ್ನೆಲೆಗೆ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸಂರ್ಪಸುವ ಗದಗ-ವಾಡಿ ರೈಲ್ವೆ ಯೋಜನೆ ಜಾರಿಗಾಗಿ ಹೋರಾಟ ನಡೆಸುವ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ನರೇಗಲ್ಲನ ಗದಗ-ವಾಡಿ ಹೋರಾಟ ಸಮಿತಿ ಪಟ್ಟಣದ ಗಜೇಂದ್ರಗಡ ರಸ್ತೆಯ ಬಸವೇಶ್ವರ ಇಂಜಿನಿಯರಿಂಗ್ ವರ್ಕ್ಸ್​ನಲ್ಲಿ ಜು. 25ರಂದು ಪೂರ್ವಭಾವಿ ಸಭೆ ಆಯೋಜಿಸಿದೆ.

    ಶತಮಾನಗಳಷ್ಟು ಹಳೆಯ ಗದಗ-ವಾಡಿ ರೈಲ್ವೆ ಯೋಜನೆಯು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೈತಪ್ಪಿ ಹೋಗಿ ವರ್ಷಗಳೇ ಕಳೆದವು. ಯೋಜನೆ ವ್ಯಾಪ್ತಿಯ ಕೋಟುಮಚಗಿ, ನರೇಗಲ್ಲ, ನಿಡಗುಂದಿ, ಗಜೇಂದ್ರಗಡ, ಹನುಮಸಾಗರ, ಇಲಕಲ್ಲ, ಮುದಗಲ್ಲ ಮೊದಲಾದ ಗ್ರಾಮ, ಪಟ್ಟಣಗಳ ಜನರು ಹೋರಾಟ ಪ್ರಾರಂಭಿಸಿದ್ದರು. ಕಳೆದ ಲೋಕಸಭೆ ಚುನಾವಣೆಯ ಹಾವೇರಿ ಹಾಗೂ ಬಾಗಲಕೋಟೆ ಮತಕ್ಷೇತ್ರಗಳಲ್ಲಿ ಗದಗ-ವಾಡಿ ರೈಲ್ವೆ ಯೋಜನೆ ಬಹಳಷ್ಟು ಸದ್ದು ಮಾಡಿತು. ಆಗ ಗದಗ-ವಾಡಿ ಬದಲಾಗಿ ಗದಗ-ಕೃಷ್ಣಾವರ್ ನೂತನ ರೈಲ್ವೆ ಯೋಜನೆ ಕೈಗೊಳ್ಳಲಾಗುವುದು ಎಂದು ಹೋರಾಟಗಾರರ ಮೂಗಿಗೆ ತುಪ್ಪ ಸವರಲಾಯಿತು. ಆದರೀಗ ಗದಗ-ಕೃಷ್ಣಾವರ್ ಯೋಜನೆಯನ್ನು ರೈಲ್ವೆ ಇಲಾಖೆ ಕೈ ಬಿಟ್ಟಿದೆ ಎಂಬ ಮಾಹಿತಿ ಈ ಭಾಗದ ಹೋರಾಟಗಾರರು ಹಾಗೂ ಸಾರ್ವಜನಿಕರ ಕಣ್ಣು ಕೆಂಪಗಾಗಿಸಿದೆ. ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

    ಏನಿದು ಯೋಜನೆ?: ಬ್ರಿಟಿಷ್ ಸರ್ಕಾರವು 1910ರಲ್ಲಿ ಗದಗ- ಕಣಗಿನಹಾಳ- ಕೋಟುಮಚಗಿ- ನರೇಗಲ್ಲ- ಗಜೇಂದ್ರಗಡ -ಹನುಮಸಾಗರ- ಇಳಕಲ್ಲ- ಮುದಗಲ್ಲ (252 ಕಿ.ಮೀ.) ಮಾರ್ಗವಾಗಿ ವಾಡಿ ಸಂರ್ಪಸುವ ಯೋಜನೆಗೆ ಸರ್ವೆ ಕೈಗೊಂಡಿತ್ತು. ಬ್ರಿಟಿಷ್ ಸರ್ಕಾರ, ಹೈದರಾಬಾದ ನಿಜಾಮರ ಸಮನ್ವಯತೆ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. 1954ರಲ್ಲಿ ಅಂದಿನ ರೈಲ್ವೆ ಸಚಿವ ಲಾಲ್ ಬಹದ್ದೂರ ಶಾಸ್ತ್ರಿ ಅವರು ಮತ್ತೆ ಯೋಜನೆ ರೂಪಿಸಿ, ಅಡಿಗಲ್ಲು ಹಾಕಿದ್ದರು. ನಂತರ ಪಾಕಿಸ್ತಾನ, ಚೀನಾದೊಂದಿಗೆ ಯುದ್ಧ ನಡೆದ ಪರಿಣಾಮ ಯೋಜನೆ ಕಡತದಲ್ಲೇ ಉಳಿಯುವಂತಾಯಿತು. 2013-14ರಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವಧಿಯಲ್ಲಿ ಮತ್ತೆ ಯೋಜನೆಗೆ ಗ್ರೀನ್ ಸಿಗ್ನಲ್ ದೊರಕಿತು. ಆದರೆ, ಮೂಲ ಯೋಜನೆಯನ್ನು ತಿದ್ದುಪಡಿ ಮಾಡಿ ಗದಗ ಜಿಲ್ಲೆಯಿಂದ ಯೋಜನೆಯನ್ನು ಗದಗ-ವಾಡಿ (ತಳಕಲ್ಲ- ಕುಕನೂರ- ಯಲಬುರ್ಗಾ -ಕುಷ್ಟಗಿ -ಲಿಂಗಸ್ಗೂರ – ಗುರಗುಂಟ – ದೇವಪುರ – ಸೋಂಪುರ) 345 ಕಿ.ಮೀ. ಮಾರ್ಗವಾಗಿ ವಾಡಿ ಸಂರ್ಪಸುವ ಯೋಜನೆಗೆ ಭೂಮಿ ಪೂಜೆ ಕೈಗೊಳ್ಳಲಾಯಿತು. ಹೆಸರು ಮಾತ್ರ ಗದಗ-ವಾಡಿ ರೈಲ್ವೆ ಯೋಜನೆ. ಆದರೆ, ಯೋಜನೆಯಲ್ಲಿ ಗದಗ ಜಿಲ್ಲೆಯ ಯಾವುದೇ ಗ್ರಾಮವೂ ಒಳಪಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಗದಗ, ಬಾಗಲಕೋಟೆ ಜಿಲ್ಲೆಯ ಜನರು 2017ರಲ್ಲಿ ಹೋರಾಟಕ್ಕೆ ಮುಂದಾಗಿದ್ದರು. ಮುಂದೆ ಲೋಕಸಭೆ ಚುನಾವಣೆ ವೇಳೆಯಲ್ಲಿ ಎರಡೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಗದಗ-ವಾಡಿ ಬದಲಾಗಿ ಗದಗ- ಕೃಷ್ಣಾವರ್ ನೂತನ ಯೋಜನೆಯ ಸರ್ವೆ ಕಾರ್ಯ ಪ್ರಾರಂಭಿಸಲಾಗುತ್ತಿದೆ ಎಂದು ಹೋರಾಟವನ್ನು ಹತ್ತಿಕ್ಕುವ ಕಾರ್ಯವನ್ನು ಬಹಳ ಚಾಣಾಕ್ಷತನದಿಂದ ಮಾಡಿದರು. ಗದಗ-ಕೃಷ್ಣಾವರ ರೈಲು ಮಾರ್ಗದ ಸರ್ವೆ ಕಾರ್ಯವೂ ಪ್ರಾರಂಭವಾಗಿದೆ ಎಂದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದವು. ಇದರಿಂದಾಗಿ ಎರಡೂ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತದೊಂದಿಗೆ ಆಯ್ಕೆಯಾಗಲು ಅನುಕೂಲವಾಯಿತು. ಆದರೆ, ಈಗ ಗದಗ-ಕೃಷ್ಣಾವರ್ ಯೋಜನೆಯನ್ನು ಕೇಂದ್ರ ರೈಲ್ವೆ ಇಲಾಖೆ ತಿರಸ್ಕರಿಸಿದೆ ಎನ್ನಲಾಗುತ್ತಿದೆ. ಇದರಿಂದ ಗದಗ-ಬಾಗಲಕೋಟೆ ಭಾಗದ ಹೋರಾಟಗಾರರಿಗೆ ನಿರಾಸೆಯಾಗಿದ್ದು, ಮತ್ತೊಮ್ಮೆ ಹೋರಾಟ ಮೂಲಕವೇ ಯೋಜನೆ ಪಡೆಯಬೇಕು ಎಂದು ಸಜ್ಜಾಗಿದ್ದಾರೆ.

    ಗದಗ-ಕೃಷ್ನಾವರ್ ಯೋಜನೆಯು ಗದಗ-ವಾಡಿ ಯೋಜನೆಯ ಪ್ಯಾರಲಲ್ ಲೈನ್ ಆಗಿರುವುದರಿಂದ ಕೇಂದ್ರವು ರೈಲ್ವೆ ಯೋಜನೆಯನ್ನು ತಿರಸ್ಕರಿಸಿದೆ ಎಂದಾದರೆ, ಈಗಾಗಲೇ ಕೊಪ್ಪಳ- ಬಳ್ಳಾರಿ- ಗುಂತಕಲ್- ವಾಡಿ (375 ಕಿಮೀ), ಕೊಪ್ಪಳ- ಗಿಣಿಗೇರಾ – ಗಂಗಾವತಿ – ರಾಯಚೂರ- ವಾಡಿ (270ಕಿಮೀ) ಇದ್ದರೂ ಗದಗ- ವಾಡಿ (2900 ಕೋಟಿ) ತಳಕಲ್ಲ- ಕುಕನೂರ- ಯಲಬುರ್ಗಾ- ಕುಷ್ಟಗಿ- ಲಿಂಗಸ್ಗೂರು- ಗುರಗುಂಟ- ದೇವಪುರ- ಸೋಂಪುರ (345 ಕಿಮೀ) ಯೋಜನೆಗೆ ಒಪ್ಪಿಗೆ ಹೇಗೆ ಸಿಕ್ಕಿದೆ ಎಂಬುದು ಹೋರಾಟಗಾರರ ಪ್ರಶ್ನೆಯಾಗಿದೆ.

    ಇಂದು ಸಭೆ: ನರೇಗಲ್ಲನ ಗದಗ-ವಾಡಿ ಹೋರಾಟ ಸಮಿತಿಯು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ರ್ಚಚಿಸುವ ಉದ್ದೇಶದಿಂದ ಜು. 25ರಂದು ಸಭೆ ಆಯೋಜಿಸಿದ್ದು, ಹೋರಾಟದ ಮಾರ್ಗಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಹೋರಾಟಗಾರ ಬಸವರಾಜ ವಂಕಲಕುಂಟಿ ತಿಳಿಸಿದ್ದಾರೆ.

    ಚುನಾವಣೆ ಸಮಯದಲ್ಲಿ ಗದಗ-ವಾಡಿ ಬದಲಾಗಿ ಗದಗ-ಕೃಷ್ಣಾವರ್ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಈಗ ಯೋಜನೆ ತಿರಸ್ಕೃತಗೊಂಡಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು.

    | ಅಶೋಕ ಬೇವಿನಕಟ್ಟಿ ಗದಗ-ವಾಡಿ ರೈಲ್ವೆ ಹೋರಾಟ ಸಮಿತಿ ಸಂಚಾಲಕ

    2018ರಲ್ಲಿ ಗದಗ-ಕೃಷ್ನಾವರ್ ರೈಲು ಮಾರ್ಗವನ್ನು ಸರ್ವೆ ಮಾಡಿಸಲಾಗಿತ್ತು. ಆದರೆ, ಕೇಂದ್ರ ರೈಲ್ವೆಯು ಸದ್ಯ ಪ್ರಗತಿಯಲ್ಲಿರುವ ಗದಗ-ವಾಡಿ ಹಾಗೂ ನೂತನ ಗದಗ-ಕೃಷ್ಣಾವರ್ ಎರಡೂ ಸಮನಾಂತರದ ಮಾರ್ಗವಾಗಿವೆ ಎಂದು ತಿರಸ್ಕರಿಸಿದೆ. ಇದರ ಬಗ್ಗೆ ಈಗಾಗಲೇ ಕೇಂದ್ರದ ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ನರೇಗಲ್ಲ, ಗಜೇಂದ್ರಗಡ ಪಟ್ಟಣಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದಷ್ಟು ಬೇಗ ಇದಕ್ಕೆ ಒಂದು ರ್ತಾಕ ಅಂತ್ಯ ಕಾಣಿಸಲಾಗುವುದು.

    | ಶಿವಕುಮಾರ ಉದಾಸಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts