More

    ಗದಗದಲ್ಲಿ ಆಡಿದ್ದ ಹಾಕಿ ದಿಗ್ಗಜ!

    ಗದಗ: ಪಂಜಾಬ್​ನ ಪಟಿಯಾಲಾ ನಗರವು ಹಾಕಿ ತಾರೆಗಳ ತವರುಮನೆ ಎಂದೇ ಪ್ರಸಿದ್ಧಿಯಾಗಿದೆ. ಅದೇ ರೀತಿ ರಾಜ್ಯ ಮತ್ತು ರಾಷ್ಟ್ರಕ್ಕೆ ಹಲವಾರು ಪ್ರತಿಭಾವಂತ ಹಾಕಿ ಆಟಗಾರರನ್ನು ನೀಡಿರುವ ಗದಗ ಜಿಲ್ಲೆಯನ್ನು ‘ಜೂನಿಯರ್ ಪಟಿಯಾಲಾ’ ಎಂದೇ ಗುರುತಿಸಲಾಗುತ್ತದೆ. ಇತ್ತೀಚೆಗೆ ನಿಧನರಾದ ಕ್ರೀಡಾ ತಾರೆ ಹಾಗೂ ಮೂರು ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಸೀನಿಯರ್ ಅವರು ಗದಗ ನಗರದಲ್ಲಿ ಆಯೋಜಿಸಿದ್ದ ಹಾಕಿ ಟೂರ್ನಾಮೆಂಟ್​ನಲ್ಲಿ ಭಾಗವಹಿಸಿ ಕ್ರೀಡಾಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದರು.

    ಗದಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೆಟಗೇರಿ ಹಾಕಿ ಕ್ರೀಡಾಂಗಣದಲ್ಲಿ 1964ರಲ್ಲಿ ಆಲ್ ಇಂಡಿಯಾ ಇನ್ವಿಟೇಷನ್ ಹಾಕಿ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಈ ಟೂರ್ನಾಮೆಂಟ್​ನಲ್ಲಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್, ಪಂಜಾಬ್ ಪೊಲೀಸ್, ಪಂಜಾಬ್ ಎಲೆಕ್ಟ್ರಿಕಲ್ ಬೋರ್ಡ್, ಸದರ್ನ್ ರೈಲ್ವೆ, ಸೌಥ್ ಸೆಂಟ್ರಲ್ ರೈಲ್ವೆ ಸೇರಿ 12 ತಂಡಗಳು ಪಾಲ್ಗೊಂಡಿದ್ದವು. ಆಗ ಬಲ್ಬೀರ್ ಸಿಂಗ್ ಸೀನಿಯರ್ ಅವರು ಪಂಜಾಬ್ ಪೊಲೀಸ್ ತಂಡದ ಪರವಾಗಿ ಆಡಿದ್ದರು. ಇವರೊಂದಿಗೆ ಹೆಸರಾಂತ ಹಾಕಿ ಪಟು, ಒಲಿಂಪಿಯನ್ ಲೆಸ್ಲಿ ಕ್ಲಾಡಿಯಸ್ ಸಹ ಬೆಟಗೇರಿ ಹಾಕಿ ಕ್ರೀಡಾಂಗಣದಲ್ಲಿ ಆಡಿದ್ದನ್ನು ಸ್ಥಳೀಯ ಹಾಕಿ ಪಟುಗಳು ನೆನಪಿಸಿಕೊಳ್ಳುತ್ತಾರೆ.

    ಬಲ್ಬೀರ್ ಸಿಂಗ್ ಸೀನಿಯರ್ ಅವರು 60ರ ದಶಕದಲ್ಲಿಯೇ ಬಹುದೊಡ್ಡ ಹಾಕಿಪಟುವಾಗಿ ಹೊರಹೊಮ್ಮಿದ್ದರು. ಆದರೆ, ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾದರೂ ಗದಗದಂತಹ ಚಿಕ್ಕ ಪಟ್ಟಣದಲ್ಲಿ ಆಯೋಜಿಸಿದ ಟೂರ್ನಾಮೆಂಟ್​ನಲ್ಲಿ ಭಾಗವಹಿಸಿದ್ದು ವಿಶೇಷ. ಕಿರಿಯ ಕ್ರೀಡಾಪಟುಗಳಿಗೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದರು. ಟೂರ್ನಾಮೆಂಟ್ ನಡೆಯುತ್ತಿದ್ದಷ್ಟು ದಿನ ಇಲ್ಲಿಯೇ ಇರುತ್ತಿದ್ದರು. ಹಾಕಿ ಮೇಲೆ ಅವರಿಗಿದ್ದ ಆಸಕ್ತಿ ಮತ್ತು ಪ್ರೀತಿ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು ಎನ್ನುತ್ತಾರೆ ಇಲ್ಲಿನ ಮಾಜಿ ಹಾಕಿ ಆಟಗಾರರು.

    ಬಲ್ಬೀರ್ ಸಿಂಗ್ ಸೀನಿಯರ್ ಅವರಿಗೆ ಹಾಕಿ ಕ್ರೀಡೆ ಮೇಲೆ ಅಪಾರ ಪ್ರೀತಿ ಇತ್ತು. 15 ದಿನಗಳ ಕಾಲ ಗದಗ ನಗರದಲ್ಲಿ ನಡೆದಿದ್ದ ಟೂರ್ನಾಮೆಂಟ್​ನಲ್ಲಿ ಭಾಗವಹಿಸಿದ್ದರು. ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಅಂತಹ ಮಹಾನ್ ಆಟಗಾರನ ಅಗಲಿಕೆಯಿಂದ ಹಾಕಿ ಇಂಡಿಯಾ ನಿಜವಾಗಲೂ ಬಡವಾಗಿದೆ.

    ವೈ.ಬಿ. ಗಡಾದ, ಹಿರಿಯ ಹಾಕಿ ಆಟಗಾರ

    ಸ್ಥಳೀಯ ಪ್ರತಿಭೆಗಳು

    ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ಜೂನಿಯರ್ ಪಟಿಯಾಲಾ ಎನಿಸಿರುವ ಗದಗ ನಗರವು ದೇಶದ ಹಾಕಿ ಕ್ಷೇತ್ರಕ್ಕೆ ನೂರಾರು ಪ್ರತಿಭಾವಂತರನ್ನು ನೀಡಿದೆ. ಬೆಟಗೇರಿ ಹನುಮಾನ ಬ್ಲೆಸ್ಸಿಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತರಬೇತಿ ಪಡೆದ ಹಲವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಮುಖ್ಯವಾಗಿ ಬಲ್ಬೀರ್ ಸಿಂಗ್ ಸೀನಿಯರ್ ಅವರೊಂದಿಗೆ ಆಟವಾಡಿದ ಬೆನ್ನು ಬಾಟ, ಜಿ.ವಿ. ಬಾಗಡೆ, ವೈ.ಬಿ.ಕೊರವರ (ರೈಟ್ ಔಟ್ ಯಲ್ಲಪ್ಪ), ವೈ.ಜಿ.ಗಡಾದ, ರಮೇಶ ಗಾಗಡೆ, ಮಾಣಿಕ್ ಬಾತ, ಅನ್ವರ್ ಬಾತ, ಹುಸೇನಸಾಬ ಸಿಂಧಗಿ, ಸಯ್ಯದ್​ಸಾಬ ಸಿಂಧಗಿ, ಮಮ್ಮದ್​ಸಾಬ ಹುಲ್ಲೂರು, ಗೋಲ್ ಕೀಪರ್ ಕಾರ್ಲಟನ್ ಗೋಮ್್ಸ, ಹರೀಶ ಮುಟಗಾರ, ಚಂದ್ರಶೇಖರ ಕೊರವರ, ರವಿ ಮುಟಗಾರ ಸೇರಿ 250 ಕ್ಕೂ ಕ್ರೀಡಾಪಟುಗಳನ್ನು ಹಾಕಿ ಕ್ರೀಡೆಗೆ ನೀಡಿದ ಗರಿಮೆ ಗದಗ ನಗರಕ್ಕೆ ಸಲ್ಲುತ್ತದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts