More

    ಗಂಟಲ ದ್ರವದ ಮಾದರಿ ನೀಡಲು ಹಿಂದೇಟು

    ಕಾರವಾರ ಕರೊನಾ ಪರೀಕ್ಷೆಗೊಳಪಟ್ಟರೆ ಆಸ್ಪತ್ರೆ, ಕೇರ್ ಸೆಂಟರ್​ನಲ್ಲಿ ದಿನದೂಡಬೇಕು ಎಂಬ ಕಾರಣಕ್ಕೆ ಜನ ಗಂಟಲ ದ್ರವದ ಮಾದರಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

    ಸರ್ಕಾರದ ಸೂಚನೆಯಂತೆ ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಯಾಂಪ್ ಹಾಕಿ ಕರೊನಾ ಪರೀಕ್ಷೆ ನಡೆಸುತ್ತಿದ್ದಾರೆ. ರ್ಯಾಪಿಡ್ ಟೆಸ್ಟ್ ಹಾಗೂ ಆರ್​ಟಿಪಿಸಿಆರ್ ಎರಡೂ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ನಡೆಯುವ ಕ್ಯಾಂಪ್​ಗಳಲ್ಲಿ ಐದು, ಹತ್ತು ಜನರೂ ಸ್ವಯಂ ಪ್ರೇರಿತವಾಗಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.

    ಒಂದು ಊರಿನಲ್ಲಿ ಆದ ಸಭೆಯಲ್ಲಿ ಕನಿಷ್ಠ 20 ಜನರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ತಪಾಸಣೆ ಮಾಡಿಸಲು ಬರುವಂತೆ ಆಶಾ ಕಾರ್ಯಕರ್ತೆಯರು ಗಂಟು ಬೀಳುವ ಪರಿಸ್ಥಿತಿ ಎದುರಾಗಿದೆ. ದಾಂಡೇಲಿ, ಅಂಕೋಲಾ ಸೇರಿ ವಿವಿಧೆಡೆ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಗಲಾಟೆಯೂ ನಡೆದಿದ್ದಿದೆ.

    ಜನರೇಕೆ ಹಿಂದೇಟು..? ಕರೊನಾ ಒಂದು ಸಾಧಾರಣ ಜ್ವರ. ಆರೋಗ್ಯ ಉತ್ತಮವಾಗಿದ್ದವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಎಲ್ಲೆಡೆ ಪ್ರಚಾರವಾಗಿದೆ. ಕರೊನಾಕ್ಕೆ ಯಾವುದೇ ಔಷಧ ಇಲ್ಲ. ಅಲ್ಲಿ ವಿಶೇಷ ಚಿಕಿತ್ಸೆಯನ್ನೂ ನೀಡುವುದಿಲ್ಲ ಎಂದು ಸೋಂಕಿನಿಂದ ಗುಣವಾಗಿ ಬಂದವರ ಅಭಿಪ್ರಾಯ. ಹೀಗಿರುವಾಗ ಸುಮ್ಮನೇ ಪರೀಕ್ಷೆ ಮಾಡಿಸಿ ಸಂಕಷ್ಟಕ್ಕೆ ಸಿಲುಕುವುದೇಕೆ..? ಔಷಧಿಯೇ ಇಲ್ಲ ಎಂದಾದಮೇಲೆ ಪರೀಕ್ಷೆ ಮಾಡಿಸಿ ಕೇರ್ ಸೆಂಟರ್​ಗೆ ಕರೆದೊಯ್ಯುವುದೇಕೆ ಎಂಬುದು ಜನರ ಪ್ರಶ್ನೆ. ಹಣ ಹೊಡೆಯುವ ಸಲುವಾಗಿ ಅಧಿಕಾರಿಗಳು ಕರೊನಾ ಪರೀಕ್ಷೆ ಹೆಚ್ಚು ಮಾಡಿಸಿ ಎಂದು ಹೇಳುತ್ತಿದ್ದಾರೆ ಎಂಬುದು ಬಹುತೇಕ ಜನರ ಮನಸ್ಸಲ್ಲಿ ಕುಳಿತಿದೆ. ಇನ್ನು ಕೋವಿಡ್ ಕೇರ್ ಸೆಂಟರ್​ಗಳಿಗೆ ಹೋದರೂ ಅಲ್ಲಿ ಸಮರ್ಪಕ ಸೌಲಭ್ಯ ಸಿಗುವುದಿಲ್ಲ ಎಂಬ ದೂರು ಜನರನ್ನು ಇನ್ನಷ್ಟು ಭಯಭೀತರನ್ನಾಗಿಸುತ್ತಿದೆ.

    ಶಿವಪುರದಲ್ಲಿ ಪ್ರತಿಭಟನೆ ಕರೊನಾ ಸೋಂಕಿತ ಮಹಿಳೆ ಕೇರ್ ಸೆಂಟರ್​ಗೆ ಬರುವುದಿಲ್ಲ ಎಂದು ಪಟ್ಟು ಹಿಡಿದ ಘಟನೆ ಮಂಗಳವಾರ ಅಂಕೋಲಾ ಶಿವಪುರದಲ್ಲಿ ನಡೆದಿದೆ. ಆಗಸ್ಟ್ 20ರಂದು ಗ್ರಾಮದ ಶಾಲೆಯಲ್ಲಿ ಕ್ಯಾಂಪ್ ನಡೆಸಿ ಗಂಟಲ ದ್ರವದ ಮಾದರಿ ಪಡೆಯಲಾಗಿತ್ತು. ಐದು ದಿನದ ನಂತರ 8 ಜನರಿಗೆ ಕರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಅದರಲ್ಲಿ ಇಬ್ಬರು ಮಾತ್ರ ಆಸ್ಪತ್ರೆಗೆ ಬರಲು ಒಪ್ಪಿದ್ದರು. ಇನ್ನಿಬ್ಬರು ಮನೆಯಲ್ಲೇ ಇರುವುದಾಗಿ ತಿಳಿಸಿದ್ದರು. ಮತ್ತೊಬ್ಬ ಕೆಲಸಕ್ಕೆ ಬೇರೆ ಊರಿಗೆ ತೆರಳಿದ್ದಾನೆ ಎನ್ನಲಾಗಿತ್ತು. ಮಹಿಳೆಯೊಬ್ಬಳು ತಾನು ಕೇರ್ ಸೆಂಟರ್​ಗೆ ಬಿಲ್​ಕುಲ್ ಬರುವುದೇ ಇಲ್ಲ ಎಂದು ಪಟ್ಟು ಹಿಡಿದರು. ಗ್ರಾಮಸ್ಥರೂ ಆಕೆಯ ಪರ ನಿಂತು ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರೆಲ್ಲರನ್ನೂ ಕರೆದೊಯ್ಯಿರಿ ಎಂದು ಪಟ್ಟು ಹಿಡಿದರು. ಹಿರಿಯ ಅಧಿಕಾರಿಗಳು ಬಂದು ಮನವೊಲಿಸಬೇಕಾಯಿತು.

    ಎಂಎಲ್​ಸಿ ಘೊಟ್ನೇಕರ್​ಗೆ ಕರೊನಾ ಎಂಎಲ್​ಸಿ ಶ್ರೀಕಾಂತ ಘೊಟ್ನೇಕರ್ ಅವರಿಗೆ ಕರೊನಾ ಬಂದಿರುವುದು ಖಚಿತವಾಗಿದೆ. ಹಳಿಯಾಳದಲ್ಲಿ ಅವರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗಿತ್ತು. ಭಟ್ಕಳ ತಾಲೂಕು ಪಂಚಾಯಿತಿ ಅಧ್ಯಕ್ಷ ಈಶ್ವರ ನಾಯ್ಕ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ಮಾಡಿದ್ದು, ಸೋಂಕಿರುವುದು ದೃಢವಾಗಿದೆ.

    ಜಿಲ್ಲೆಯಲ್ಲಿ ಸಾವಿರ ದಾಟಿದ ಸಕ್ರಿಯ ಪ್ರಕರಣ ಜಿಲ್ಲೆಯ 139 ಜನರಿಗೆ ಕರೊನಾ ಸೋಂಕು ಇರುವುದು ಬುಧವಾರದ ತಪಾಸಣೆಯಲ್ಲಿ ಖಚಿತವಾಗಿದೆ. ಕಾರವಾರದ 40, ಅಂಕೋಲಾದ 4, ಕುಮಟಾದ 16, ಹೊನ್ನಾವರದ 5, ಮುಂಡಗೋಡ, ಭಟ್ಕಳ ಮತ್ತು ಶಿರಸಿಯಲ್ಲಿ ತಲಾ 3, ಯಲ್ಲಾಪುರದಲ್ಲಿ 43, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 22 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಕಾರವಾರದ 16, ಅಂಕೋಲಾದ 4, ಹಳಿಯಾಳ ಹಾಗೂ ಕುಮಟಾದ 5, ಹೊನ್ನಾವರದ 1, ಭಟ್ಕಳದ 7 ಸೇರಿ 38 ಜನ ಕರೊನಾದಿಂದ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಹಳಿಯಾಳದ 40 ವರ್ಷದ ವ್ಯಕ್ತಿ ಕ್ರಿಮ್್ಸ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 4319 ಕ್ಕೆ ತಲುಪಿದೆ. 3235 ಜನ ಸೋಂಕಿನಿಂದ ಗುಣ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. 1039 ಜನರು ವಿವಿಧ ಆಸ್ಪತ್ರೆ ಹಾಗೂ ಕರೊನಾ ಕೇರ್ ಸೆಂಟರ್​ಗಳಲ್ಲಿದ್ದಾರೆ. ಒಟ್ಟಾರೆ ಸಾವಿಗೀಡಾದವರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts