More

    ಗಂಗಾಧರ ಶ್ರೀ ಪರಂಪರಾ ಪಾದಯಾತ್ರೆ ಆರಂಭ

    ಜೇವರ್ಗಿ (ಕಲಬುರಗಿ): ಸದ್ಗುರು ಶ್ರೀ ವಿಶ್ವಾರಾಧ್ಯರು ಕಾಶೀಘನ ಪಂಡಿತರಾಗಿ ತಾವು ಸಂಪಾದಿಸಿದ ಜ್ಞಾನವನ್ನು ಉಣಬಡಿಸಲು ಲೋಕ ಸಂಚಾರ ಕೈಗೊಂಡು ಆನೇಕ ಜನರನ್ನು ಉದ್ಧರಿಸುತ್ತಾರೆ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ ನುಡಿದರು.

    ಮಂಗಳವಾರ ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಲ್ಲಿ ಜಗದ್ಗುರು ಬನ್ನಿ ಬಸವೇಶ್ವರರ ಕರ್ತು ಗದ್ದುಗೆಗೆ ಮಹಾಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ಅಬ್ಬೆತುಮಕೂರಿನವರೆಗೆ ಪ್ರತಿವರ್ಷದಂತೆ ಪರಂಪರಾ ಪಾದಯಾತ್ರೆಯನ್ನು ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿದೆ ಎಂದರು.

    ವಿಶ್ವಾರಾಧ್ಯರು ಜನಿಸಿದ ಗಂವ್ಹಾರ ಅತ್ಯಂತ ಪವಿತ್ರ ಕ್ಷೇತ್ರ. ಶ್ರೀಗಳು ಕಿರಿಯರಿದ್ದಾಗಲೇ ಹಿರಿದಾದ ಭಾವ ತೋರಿ ಎಲ್ಲರನ್ನು ಒಂದೇ ಎಂದು ಕಾಣುವ ಗುಣವನ್ನು ಹೊಂದಿದ್ದರು. ನಂತರ ಮಾಲಿ ಸಕ್ರೆಪ್ಪಗೌಡನ ಭಕ್ತಿಗೆ ಒಲಿದು ಅಬ್ಬೆತುಮಕೂರಿಗೆ ಬಂದು ನೆಲೆ ನಿಲ್ಲುತ್ತಾರೆ. ಅವರು ನೆಲೆಸಿದ ಅಬ್ಬೆತಮಕೂರು ಇಂದು ಅವಿಮುಕ್ತ ಕ್ಷೇತ್ರವಾಗಿ ಲಕ್ಷಾಂತರ ಭಕ್ತರ ಭಕ್ತಿಯ ತಾಣವಾಗಿದೆ ಎಂದರು.

    ಮಧ್ಯಾಹ್ನ 1ಕ್ಕೆ ಮಂಗಲವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ ಪಡೆದು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಪಾದಯಾತ್ರೆ ಹೊರಟಿತು. ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರೆದಾರ ಹೊಲದಲ್ಲಿರುವ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿತು.

    ಅಣಬಿ ಗ್ರಾಮದ ಭಕ್ತರು ಪಾದಯಾತ್ರಿಗಳನ್ನು ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸಿದ ಬಳಿಕ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ ಮುಂದೆ ಸಾಗಿ ಶಹಾಪುರ ತಾಲೂಕಿನ ಶಿರವಾಳ ತಲುಪಿದ ಬಳಿಕ ಮಾಜಿ ಶಾಸಕ ಗುರು ಪಾಟೀಲ್ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗಿತು.

    ಅಲ್ಲಿಂದ ಹೊರಟ ಪಾದಯಾತ್ರೆ ಹುರಸಗುಂಡಗಿಯಲ್ಲಿ ಭಕ್ತರ ಸೇವೆಯನ್ನು ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಿತು. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡಿದರು.

    ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕುರಿ ಮತ್ತು ಉಣ್ಣೆ ಅಭಿವೃಧ್ದಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಪ್ರಮುಖರಾದ ಮಲ್ಲಿನಾಥಗೌಡ ಯಲಗೋಡ, ವಿಜಯಕುಮಾರ ಮಾಲಿಪಾಟೀಲ್, ವಿಜಯಕುಮಾರ ಪೊಲೀಸ್ ಪಾಟೀಲ್, ಕಲ್ಯಾಣಕುಮಾರ ಸಂಗಾವಿ, ಗುರುಲಿಂಗಪ್ಪ ದೊಡ್ಡಮನಿ, ದೊಡ್ಡಪ್ಪಗೌಡ ಮಾಲಿಪಾಟೀಲ್, ದೇವಿಂದ್ರ ರೂಗಿ, ರಾಮಶೆಟ್ಟಿ ಹುಗ್ಗಿ ಜೇವರ್ಗಿ, ನಾಗರಡ್ಡಿ ಸಾಹು, ವೀರಣ್ಣಗೌಡ ಮದಗುಂಡಿ, ಸಿದ್ದಣ್ಣಗೌಡ ಪಾಟೀಲ್ ಮಳಗಿ, ಸಾಯಬಣ್ಣ ಗುತ್ತೇದಾರ್, ವೀರಣ್ಣ ಸಾಹು ಹವಾಲ್ದಾರ ಜತೆಗೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

    ಸಮಾರೋಪ ನಾಳೆ: ಗುರುವಾರ ಬೆಳಗ್ಗೆ 8ಕ್ಕೆ ಹೆಡಗಿಮುದ್ರಾದಿಂದ ಯಾದಗಿರಿ ಜಿಲ್ಲೆ ಅಬ್ಬೆತುಮಕೂರಿಗೆ ಪಾದಯಾತ್ರೆ ತಲುಪಲಿದೆ. ರಾತ್ರಿ 8ಕ್ಕೆ ನಾಗರ ಅಮಾವಾಸ್ಯೆ ನಿಮಿತ್ತ ಶ್ರೀಮಠದಲ್ಲಿ ಶಿವಾನುಭವ ಗೋಷ್ಠಿ ಹಾಗೂ ಪರಂಪರಾ ಪಾದಯಾತ್ರೆ ಸಮಾರೋಪ ನಡೆಯಲಿದೆ. ವಿವಿಧ ಮಠಾಧೀಶರು, ಸಂಗೀತಗಾರರು, ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    ಲೋಕ ಕಲ್ಯಾಣಕ್ಕಾಗಿ ಮೂರು ದಿನ ಕೈಗೊಳ್ಳುವ ಈ ಪಾದಯಾತ್ರೆಯಲ್ಲಿ ಬಾಲಕರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಭಕ್ತಿಯಿಂದ ಪಾಲ್ಗೊಂಡು ಸದ್ಗುರು ಶ್ರೀ ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗುತ್ತಾರೆ.
    | ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ
    ಅಬ್ಬೆತುಮಕೂರು ಮಠದ ಪೀಠಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts