More

    ಖುಷಿಯಿಂದ ಖುಷಿಗಾಗಿ ಪಾಠ

    ಲಕ್ಷ್ಮೇಶ್ವರ: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದ್ದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ತಾಲೂಕಿನಲ್ಲಿ ಮಕ್ಕಳಿಗೆ ‘ಖುಷಿಯಿಂದ ಖುಷಿಗಾಗಿ’ ಎಂಬ ಶೈಕ್ಷಣಿಕ ಸಪ್ತಾಹ ವಿಶೇಷ ಕಾರ್ಯಕ್ರಮವನ್ನು ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

    ಇದು ರಾಜ್ಯ ಶಿಕ್ಷಣ ಇಲಾಖೆಯ ಆದೇಶ-ಸೂಚನೆಯಲ್ಲ. ಕೇವಲ ತಾಲೂಕಾಧಿಕಾರಿಗಳ ಆಸಕ್ತಿಯಿಂದ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮವಾಗಿದೆ.

    ಶಾಲೆಗಳ ಪುನರಾರಂಭದ ಬಗ್ಗೆ ಶಿಕ್ಷಣ ಇಲಾಖೆ ಆ. 31ರವರೆಗೆ ಕಾಯುವಂತೆ ಆದೇಶಿಸಿದೆ. ಕೋವಿಡ್ ಹಿನ್ನೆಲೆ ಶಾಲೆಗಳು ಬಂದ್ ಆಗಿ 5 ತಿಂಗಳುಗಳೇ ಕಳೆದಿವೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ಮತ್ತು ಚಂದನ ವಾಹಿನಿ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಜೂನ್ ತಿಂಗಳಲ್ಲಿ ಶಿಕ್ಷಕರು ಮಕ್ಕಳ ಮನೆ ಭೇಟಿ, ವ್ಯಾಟ್ಸಾಪ್ ಮೂಲಕ ಮಕ್ಕಳಿಗೆ ಶೈಕ್ಷಣಿಕ ಸಂದೇಶ ನೀಡಿದ್ದಾರೆ. ಈಗ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್​ಲೈನ್ ಪಾಠ ಇಲ್ಲದ್ದರಿಂದ ಮಕ್ಕಳು ತರಗತಿ ಪಾಠದಿಂದ ದೂರ ಉಳಿಯುತ್ತಾರೆ. ಇದರಿಂದ ಶಾಲೆ ಪ್ರಾರಂಭಗೊಂಡ ಬಳಿಕ ಮಕ್ಕಳಿಗೆ ಒತ್ತಡ ಉಂಟಾಗಬಹುದು. ಆದ್ದರಿಂದ ಶಾಲಾ ಪ್ರಾರಂಭದ ಮೊದಲೇ ಮಕ್ಕಳನ್ನು ಈ ನಿಟ್ಟಿನಲ್ಲಿ ಸಿದ್ಧತೆಗೊಳಿಸುವುದು ಜತೆಗೆ ಅವರನ್ನು ಶೈಕ್ಷಣಿಕ ಚಟುವಟಿಕೆಯತ್ತ ಕೇಂದ್ರೀಕರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೆ, ಮಕ್ಕಳು ಕೇವಲ ಟಿವಿ, ಮೊಬೈಲ್​ಫೋನ್, ಆಟದಲ್ಲಿ ಕಾಲ ಕಳೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆ. 3ರಿಂದಲೇ ಶಿಕ್ಷಕರು ಸ್ವಯಂಪ್ರೇರಣೆಯಿಂದ ಪಾಲಕರ, ಸಮುದಾಯದ ಸಹಕಾರದಿಂದ ಮಕ್ಕಳನ್ನು ಅವರ ವಾಸಸ್ಥಳದ ಹತ್ತಿರದ ದೇವಸ್ಥಾನ, ಸಮುದಾಯಭವನ, ಅಂಗನವಾಡಿ ಇತರ ಸೂಕ್ತ ಸ್ಥಳದಲ್ಲಿ ಮಕ್ಕಳನ್ನು ಸೇರಿಸಿ ಸುರಕ್ಷತೆಯಿಂದ ‘ಖುಷಿಯಿಂದ ಖುಷಿಗಾಗಿ’ ಪರಿಕಲ್ಪನೆಯಡಿ ಪಾಠ ಮಾಡಲು ಸೂಚಿಸಲಾಗಿದೆ.

    ಮಕ್ಕಳು ಮತ್ತು ಶಿಕ್ಷಕರ ನಡುವೆ ನಿರಂತರ ಸೇತುಬಂಧ ಮತ್ತು ಕಲಿಕಾ ವಾತಾವರಣ ಸೃಷ್ಟಿಸುವ ಈ ಸಾಪ್ತಾಹಿಕ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮೊದಲ ದಿನದಿಂದ ಕಥೆ ಕೇಳೋಣ-ಕಥೆ ಹೇಳೋಣ, ಸ್ವಾತಂತ್ರ್ಯ ಹೋರಾಟಗಾರರ ಜೀವನ-ಸಂದೇಶ, ಚಿತ್ರ ಬರೆಯೋಣ ಬಣ್ಣ ತುಂಬೋಣ, ಹಾಡು ಹೇಳೋಣ ಒಗಟು ಬಿಡಿಸೋಣ, ನಮ್ಮೂರು-ನಮ್ಮ ಜನ, ಪತ್ರ ಬರೆಯೋಣ ಉತ್ತರ ತಿಳಿಯೋಣ ಈ ರೀತಿಯ ಕಲ್ಪನೆಯೊಂದಿಗೆ ಬರಹ, ಓದು ಇತರೆ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪರಸ್ಪರ ಅಂತರ, ಮಾಸ್ಕ್ ಧರಿಸುವುದು ಮತ್ತು ಮನೆಯಲ್ಲಿ ಕರೊನಾ ಮುಂಜಾಗ್ರತೆ ಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ. ಶಿಕ್ಷಕರೂ ಸ್ವಯಂಆಸಕ್ತಿಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮತ್ತು ಪಾಲಕರು, ಮಕ್ಕಳು ಆಸಕ್ತಿ ತೋರುತ್ತಿರುವುದು ಸಂತಸ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ತಿಳಿಸಿದರು.

    ಈ ಕಾರ್ಯದಲ್ಲಿ ಶಿಕ್ಷಕರನ್ನು ಪ್ರೇರೇಪಿಸುವ, ಸಲಹೆ, ಸೂಚನೆ, ಸಹಕಾರ ನೀಡುವಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವೈ.ಎಚ್. ನದಾಫ್ ಅವರ ಮಾರ್ಗದರ್ಶನದಲ್ಲಿ ಸೋಮವಾರ ಹರದಗಟ್ಟಿ ತಾಂಡಾದಲ್ಲಿ ಮುಖ್ಯ ಶಿಕ್ಷಕ ಎಚ್.ವಿ. ಹಿರೇಮಠ ನೇತೃತ್ವದಲ್ಲಿ ಶಿಕ್ಷಕರಾದ ಸಿ.ಎಸ್. ಮರಿದೇವರಮಠ, ಎಸ್.ಆರ್. ನದಾಫ್, ಸಿ.ಎಸ್. ನೇಕಾರ ಮಕ್ಕಳಿಗೆ ಕರೊನಾ ಜಾಗೃತಿ, ಪರಿಸರ, ಸಾಮಾನ್ಯಜ್ಞಾನ, ಕಥೆ ಹೇಳೋಣ-ಕೇಳೋಣ ಹೀಗೆ ಹಲವಾರು ಆಯಾಮಗಳಲ್ಲಿ ಮಕ್ಕಳಿಗೆ ಪಾಠ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts