More

    ಖಿನ್ನ ಮನಸ್ಸುಗಳಿಗೆ ದಿವ್ಯಶಕ್ತಿ ಯಕ್ಷಗಾನ- ರಾಘವೇಂದ್ರ ಮಯ್ಯ

    ದಾವಣಗೆರೆ: ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿಸುವ ಶಕ್ತಿ ಯಕ್ಷಗಾನ ಕಲೆಗಿದೆ ಎಂದು ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹೇಳಿದರು.
    ಕಲಾಕುಂಚ ಅಂಗಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
    ಶೃತಿ, ರಾಗ, ಲಯ, ತಾಳ, ನಾಟ್ಯ, ಅಭಿನಯ, ಆಶು ಸಂಭಾಷಣೆ, ಚಿತ್ತಾಕರ್ಷಕ ವೇಷಭೂಷಣ ಮೊದಲಾದ ನವರಸ ಕಲಾಪ್ರಾಕಾರಗಳ ಗುಚ್ಛ ಯಕ್ಷಗಾನ. ಇದು ಕೇವಲ ಪ್ರದರ್ಶನ ಹಾಗೂ ಮನರಂಜನೆಗೆ ಸೀಮಿತವಲ್ಲ, ದೇವರ ಪೂಜಾ ಸೇವೆಯೂ ಹೌದು ಎಂದು ತಿಳಿಸಿದರು.
    ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಕರ್ನಾಟಕ ಕರಾವಳಿ ಜಿಲ್ಲೆಗಳ ಧರ್ಮಸ್ಥಳ ಸೇರಿ ಪುಣ್ಯ ಕ್ಷೇತ್ರಗಳ ಆಶ್ರಯದಲ್ಲಿ ಯಕ್ಷಗಾನ ಸಂಘಟನೆಗಳು ನಡೆಯುತ್ತಿವೆ. ಮಾನವನ ಎಲ್ಲ ಕಷ್ಟ-ನಷ್ಟ, ಸಮಸ್ಯೆಗಳ ಪರಿಹಾರಕ್ಕೆ ಯಕ್ಷಗಾನ ಪೂಜಾ ಸೇವಾ ಪ್ರದರ್ಶನಗಳು ಹರಕೆಯಾಗಿವೆ ಎಂದರು.
    ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು, ನುಡಿಯ ಐತಿಹಾಸಿಕ ಪರಂಪರೆಯನ್ನು ವಿಶ್ವವಿಖ್ಯಾತವಾಗಿ ವೈಭವೀಕರಿಸಿದ ಏಕೈಕ ಆರಾಧನಾ ಕಲೆ ಯಕ್ಷಗಾನ ಎಂದು ಹೇಳಿದರು.
    ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಇದ್ದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ ಪ್ರಾರ್ಥಿಸಿದರು. ಯಕ್ಷಗಾನ ಹವ್ಯಾಸಿ ಕಲಾವಿದ ಪ್ರದೀಪ್ ಕಾರಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
    ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯಕ್ಷಗಾನ ಕಲಾವಿದರು ಮಾಯಾಪುರಿ ಮಹಾತ್ಮೆ, ಶಿವಭಕ್ತ ವೀರಮಣಿ ಪೌರಾಣಿಕ ಕಥಾನಕದ ಯಕ್ಷಗಾನ ಪ್ರದರ್ಶನ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts