More

    ಕ್ರೀಡಾಂಗಣ ನಿರ್ಮಾಣ ನನೆಗುದಿಗೆ

    ಕಾರವಾರ: ಭಾರಿ ನಿರೀಕ್ಷೆ ಮೂಡಿಸಿದ್ದ ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

    ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಕಾರವಾರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಅಭಿವೃದ್ಧಿಗೆ ಆಸಕ್ತಿ ತೋರಿತ್ತು. ಅದಕ್ಕಾಗಿ ಸದಾಶಿವಗಡ ಕಣಸಗಿರಿಯಲ್ಲಿರುವ 14 ಎಕರೆ ಗೋಮಾಳ ಜಾಗದಲ್ಲಿ 12 ಎಕರೆಯನ್ನು ಕ್ರೀಡಾಂಗಣ ನಿರ್ವಣಕ್ಕೆ 30 ವರ್ಷ ಲೀಸ್ ನೀಡಲು ಸರ್ಕಾರ 2018ರಲ್ಲೇ ಒಪ್ಪಿಗೆ ನೀಡಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಕೆಎಸ್​ಸಿಎ ಒಡಂಬಡಿಕೆ ಮಾಡಿಕೊಳ್ಳುವುದು ಮಾತ್ರ ವರ್ಷದಿಂದ ಬಾಕಿ ಉಳಿದಿದೆ.

    ಈ ಮೊದಲು ಶಾಸಕರಾಗಿದ್ದ ಸತೀಶ ಸೈಲ್ ಕ್ರೀಡಾಂಗಣ ನಿರ್ವಣಕ್ಕೆ ಓಡಾಟ ನಡೆಸಿದ್ದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸಹ ಕೆಎಸ್​ಸಿಎ ಅಧ್ಯಕ್ಷ ರೋಜರ್ ಬಿನ್ನಿ ಅವರ ಜತೆ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ್ದರು. ಕೆಲ ತಿಂಗಳ ಹಿಂದೆ ಕೈಗಾರಿಕಾ ಜಗದೀಶ ಶೆಟ್ಟರ್ ಕಾರವಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು.

    ವಿಹಂಗಮ ನೋಟ: ಕಾಳಿ ನದಿಯ ಪಕ್ಕದಲ್ಲಿರುವ ಗುಡ್ಡ ಇದಾಗಿದ್ದು, ಅದನ್ನು ಸಮತಟ್ಟು ಮಾಡಿ ಕ್ರೀಡಾಂಗಣ ಮಾಡುವ ಯೋಜನೆ ರೂಪಿಸಲಾಗಿದೆ. ಸರ್ಕಾರಕ್ಕೆ ನಯಾಪೈಸೆ ಖರ್ಚಿಲ್ಲದೆ ಕೆಎಸ್​ಸಿಎ ಸ್ವತಃ ಹಣ ಹಾಕಿ ಕ್ರೀಡಾಂಗಣ ಅಭಿವೃದ್ಧಿ ಮಾಡಲಿದೆ. ಜಾಗದಿಂದ ಕಾಳಿ ನದಿಯ ಅತ್ಯಂತ ವಿಹಂಗಮ ನೋಟ ಇಡೀ ವಿಶ್ವದ ಜನರನ್ನು ಸೆಳೆಯುವಂತಿದೆ. ಆದರೆ, ಗೋಮಾಳ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು. ಸ್ಥಳೀಯ ದೇವಸ್ಥಾನಕ್ಕೆ ಹಾನಿಯಾಗುತ್ತದೆ ಇದರಿಂದ ಅಲ್ಲಿ ಕ್ರೀಡಾಂಗಣ ಮಾಡಬಾರದು ಎಂದು ಸ್ಥಳೀಯರು ಈ ಹಿಂದೆ ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.

    ಕ್ರಿಕೆಟ್ ಕ್ರೀಡಾಂಗಣ ನಿರ್ವಣಕ್ಕಾಗಿ ಬ್ಲಾಸ್ಟಿಂಗ್ ಮಾಡಿದರೆ ತಮ್ಮ ಮನೆಗಳಿಗೆ ಹಾನಿಯಾಗುತ್ತದೆ ಎಂಬ ಆತಂಕ ಜನರದ್ದು. ಮನೆಗಳಿಗೆ ಹಾನಿ ಮಾಡದೇ ಕಾಮಗಾರಿ ನಡೆಸುವುದಿದ್ದಲ್ಲಿ ನಮಗೆ ಕ್ರೀಡಾಂಗಣ ನಿರ್ವಣಕ್ಕೆ ಯಾವುದೇ ವಿರೋಧವಿಲ್ಲ. ನಾವದನ್ನು ಸ್ವಾಗತಿಸುತ್ತೇವೆ. | ದಿಲೀಪ ಗಜಿನಕರ್ ಗ್ರಾಪಂ ಸದಸ್ಯ

    ಕ್ರಿಕೆಟ್ ಕ್ರೀಡಾಂಗಣ ನಿರ್ವಣದಿಂದ ಯಾವುದೇ ಮನೆ ಹೋಗುವುದಿಲ್ಲ. ಹಾನಿಯೂ ಆಗುವುದಿಲ್ಲ. ಸ್ಥಳೀಯರು ಈ ಸಂಬಂಧ ಬೇಕಾದಲ್ಲಿ ಲಿಖಿತ ಪತ್ರ ಪಡೆಯಲಿ. ಕ್ರೀಡಾಂಗಣವಾದರೆ ಸ್ಥಳೀಯರಿಗೆ ಸಾಕಷ್ಟು ಉದ್ಯೋಗ ದೊರಕಲಿದೆ. ಕಾರವಾರದ ಚಿತ್ರಣವೇ ಬದಲಾಗಲಿದೆ. ಇದರ ಹಿಂದೆ ಯಾವುದೇ ರಾಜಕೀಯ ಅಥವಾ ಲಾಭದ ಉದ್ದೇಶವಿಲ್ಲ. ಶೀಘ್ರದಲ್ಲಿ ಜಿಲ್ಲಾಡಳಿತ ಕೆಎಸ್​ಸಿಎ ಜತೆ ಒಡಂಬಡಿಕೆ ಮಾಡಿಕೊಂಡು ಕ್ರೀಡಾಂಗಣ ಅಭಿವೃದ್ಧಿಗೆ ಮುಂದಾಗಬೇಕು. | ಸತೀಶ ಸೈಲ್ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts