More

    ಕ್ರಿಸ್‌ಮಸ್ ಸಂಭ್ರಮದಲ್ಲಿ ಕರಾವಳಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ, ಸರಳ ಆಚರಣೆಗೆ ಒತ್ತು

    ಮಂಗಳೂರು: ಏಸು ಕ್ರಿಸ್ತರ ಜನ್ಮದಿನ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಚಾಲನೆ ಸಿಕ್ಕಿದೆ. ಕ್ರೈಸ್ತ ಸಮುದಾಯ ಜಾಗರಣೆಯ ರಾತ್ರಿಯನ್ನು ಆಚರಿಸಿದ್ದು, ಶುಕ್ರವಾರ ಬೆಳಗ್ಗೆ ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆಗಳು ನೆರವೇರಲಿವೆ. ಆ ಪ್ರಯುಕ್ತ ಕ್ರೈಸ್ತ ದೇವಾಲಯಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಗರಿಗೆದರಿದೆ.

    ಬಹುತೇಕ ಎಲ್ಲ ಚರ್ಚ್‌ಗಳನ್ನು ವಿದ್ಯುತ್ ದೀಪ, ನಕ್ಷತ್ರಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಮತ್ತು ಕ್ರೈಸ್ತರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಗುರುವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸು ಸ್ವಾಮಿಯ ಜನನವನ್ನು ಸ್ವಾಗತಿಸಲಾಯಿತು.

    ಚರ್ಚ್‌ಗಳಲ್ಲಿ ಗುರುವಾರ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಲಿಪೂಜೆಗೂ ಮುನ್ನ ಕ್ರಿಸ್‌ಮಸ್ ಕ್ಯಾರಲ್‌ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಸ್ಮರಿಸಲಾಯಿತು.

    ಶುಕ್ರವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಮನೆಗಳಲ್ಲಿ ಕ್ರಿಸ್‌ಮಸ್ ವಿಶೇಷ ತಿಂಡಿ ತಿನಿಸು ‘ಕುಸ್ವಾರ್’ ವಿನಿಮಯ ಮತ್ತು ಹಬ್ಬದ ಭೋಜನದೊಂದಿಗೆ ಹಬ್ಬದ ಸಂಭ್ರಮ ನೆರವೇರಲಿದೆ.

    ಅಶಕ್ತರೊಡನೆ ಬೆರೆತು ಹಬ್ಬ: ಮಂಗಳೂರು ಬಿಷಪ್ ಡಾ.ಸಲ್ಡಾನ್ಹಾ ಕರೆ: ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಗುರುವಾರ ರಾತ್ರಿ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನಡೆಯಿತು. ಕೆಥೆಡ್ರಲ್‌ನ ರೆಕ್ಟರ್ ಆಲ್ಪ್ರೆಡ್ ಜೆ.ಪಿಂಟೊ, ಸಹಾಯಕ ಗುರು ವಿನೋದ್ ಲೋಬೊ, ರೊಸಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಕ್ಟರ್ ಡಿಸೋಜ ಭಾಗವಹಿಸಿದ್ದರು.
    ಈ ವೇಳೆ ಮಾತನಾಡಿದ ಬಿಷಪ್ ಡಾ.ಸಲ್ಡಾನ್ಹಾ, ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು. ಉದ್ಯೋಗ ಕಳೆದುಕೊಂಡು ತಮ್ಮ ಕುಟುಂಬಗಳನ್ನು ಸಾಕಲು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆ ಅರಿತವರು. ಕರೊನಾ ಮತ್ತು ಇತರ ರೋಗಗಳಿಂದ ಸೋಂಕಿತರಾಗಿ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಕಷ್ಟಪಡುತ್ತಿರುವ ಹೆತ್ತ್ತವರ ದುಖವನ್ನು ಅರಿತವರಾಗಿದ್ದು, ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್‌ಮಸ್ ಆಚರಿಸೋಣ ಎಂದರು.

    ಸಾಂತಾಕ್ಲಾಸ್ ಇಲ್ಲ: ಕರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಸರಳವಾಗಿ ಹಬ್ಬದ ಆಚರಣೆ ಆಯೋಜಿಸಲಾಗಿದೆ. ಬಹುತೇಕ ಎಲ್ಲ ಚರ್ಚುಗಳಲ್ಲಿ 10 ಗಂಟೆಗೆ ಮೊದಲೇ ರಾತ್ರಿ ಪೂಜೆಗಳನ್ನು ಕೊನೆಗೊಳಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮ, ಸಂತಾಕ್ಲಾಸ್ ವೇಷ ರದ್ದುಗೊಳಿಸಲಾಗಿತ್ತು. ಚರ್ಚುಗಳಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಿದ್ದು, ಹೆಚ್ಚಿನ ಚರ್ಚುಗಳಲ್ಲಿ ಬಲಿಪೂಜೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts