More

    ಕೋವಿಡ್ ಸೆಂಟರ್ ಪರಿಶೀಲನೆ ಅವಶ್ಯ, ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಚನೆ, ಕೋವಿಡ್ ನಿಯಂತ್ರಣ ಸಭೆ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ನೋಡಲ್ ಅಧಿಕಾರಿಗಳಾಗಿ ನೇಮಕವಾದ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು, ಹೋಬಳಿ, ಗ್ರಾಮಗಳಿಗೆ ಭೇಟಿ ನೀಡಿ, ದಕ್ಷತೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು.

    ದೇವನಹಳ್ಳಿಯ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೋವಿಡ್-19 ನಿಯಂತ್ರಣ ಸಭೆಯಲ್ಲಿ ಮಾತನಾಡಿದರು.

    ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಹಾಸಿಗೆ, ಆಕ್ಸಿಜನ್, ಔಷಧ, ಆಹಾರ ಸಮಸ್ಯೆ ಪರಿಹರಿಸಬೇಕು ಎಂದರು.

    ನಿಗದಿಪಡಿಸಿರುವ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಬೇಕು. ಆಕ್ಸಿಜನ್ ಮತ್ತು ರೆಮ್‌ಡಿಸಿವರ್ ಔಷಧ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿರುವುದು ಗಮನಕ್ಕೆ ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ತಿಳಿಸಿದರು.

    ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿದ ಮಾಹಿತಿಯನ್ನು ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು ಎಂದರು.

    ಹಲವು ಹಂತಗಳಲ್ಲಿ ತಂಡ ರಚನೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಕೋವಿಡ್ 19 ಎರಡನೇ ಅಲೆ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರನ್ವಯ ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹಲವು ಹಂತಗಳಲ್ಲಿ ತಂಡ ರಚಿಸಲಾಗಿದ್ದು, ನೋಡಲ್ ಅಧಿಕಾರಿಗಳು ತಾಲೂಕು ಹಾಗೂ ಗ್ರಾಪಂಮಟ್ಟದ ತಂಡಗಳೊಂದಿಗೆ ಸಮನ್ವಯ ಸಾಧಿಸಿ, ಸೋಂಕನ್ನು ಹತೋಟಿ ತರಲು ಶ್ರಮಿಸಬೇಕು ಎಂದರು.

    ನಗರ ಪ್ರದೇಶಗಳಿಂದ ಹಲವಾರು ಮಂದಿ ಗ್ರಾಮಾಂತರ ಪ್ರದೇಶಕ್ಕೆ ಮರಳುತ್ತಿದ್ದು, ಗ್ರಾಪಂ ಮಟ್ಟದಲ್ಲಿನ ತಂಡಗಳು ಎಲ್ಲರನ್ನು ಗುರುತಿಸಿ, ಕೋವಿಡ್ ಪರೀಕ್ಷೆ ಮಾಡಿಸಬೇಕು. ಉದ್ಯೋಗ ಬಯಸುವವರಿಗೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ವಿತರಿಸಿ, ಉದ್ಯೋಗ ನೀಡಬೇಕು ಎಂದು ಎಂದು ತಿಳಿಸಿದರು.

    ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ವಾಹನಗಳನ್ನು ಅನವಶ್ಯಕವಾಗಿ ತಡೆ ಹಿಡಿಯಬಾರದು ಎಂದು ಸೂಚಿಸಿದರು.

    ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಕೈಗಾರಿಕೆಗಳು ತ್ಯಾಜ್ಯ, ವಿಷಪೂರಿತ ನೀರನ್ನು ಕೆರೆ, ಕುಂಟೆ, ಬಾವಿಗಳಿಗೆ ಬಿಡದಂತೆ ಸೂಕ್ತ ಕ್ರಮ ವಹಿಸಬೇಕು ಎಂದರು.

    ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುಳಾದೇವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts