More

    ಕೋವಿಡ್ ವಿಶೇಷ ವಾರ್ಡ್ ಆರಂಭಿಸಿ  – ಗುಂಜನ್ ಕೃಷ್ಣ ಸೂಚನೆ – ಪ್ರಗತಿ ಪರಿಶೀಲನಾ ಸಭೆ 

    ದಾವಣಗೆರೆ: ವಿವಿಧೆಡೆ ಕೋವಿಡ್ ರೂಪಾಂತರಿ (ಜೆಎನ್-1) ತಳಿ ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯಲ್ಲಿ ಇದು ಹರಡದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ಹಾಗೂ ಆಮ್ಲಜನಕ ಘಟಕಗಳನ್ನು ಸಜ್ಜುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಚಿಗಟೇರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ಕಾಯ್ದಿರಿಸುವಂತೆ ಮತ್ತು ಪಿಎಂ ಕೇರ್ಸ್‌ನಡಿ ಪೂರೈಸಲಾದ ವೆಂಟಿಲೇಟರ್‌ಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆಯೂ ಹೇಳಿದರು.
    ಒಂದು ವಾರದಲ್ಲಿ 1019 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 22 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಆದರೆ ಇದು ಜೆಎನ್-1 ತಳಿ ಆಗಿರುವುದಿಲ್ಲ. ಇಬ್ಬರು ಇತರೆ ಕಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾರೆ ಎಂದುಯ ಡಿಎಚ್‌ಒ ಡಾ. ಷಣ್ಮುಖಪ್ಪ ತಿಳಿಸಿದರು.
    ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಅಗತ್ಯವಿದ್ದ ವೈದ್ಯರನ್ನು ನೇರ ಸಂದರ್ಶನದಡಿ ಭರ್ತಿ ಮಾಡಲಾಗಿದೆ. ತಜ್ಞ ವೈದ್ಯರು ನೇರ ಸಂದರ್ಶನಕ್ಕೆ ಹಾಜರಾಗದ್ದರಿಂದ ಕೆಲವು ಹುದ್ದೆಗಳು ಖಾಲಿ ಇವೆ. ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಹೆರಿಗೆ ಆಸ್ಪತ್ರೆಯಲ್ಲಿ ನಿಗಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಆರೋಗ್ಯ ಅಭಿಯಾನದಡಿ ನಿವೃತ್ತ ತಜ್ಞ ವೈದ್ಯರನ್ನು ನೇಮಿಸಲಾಗಿದೆ ಎಂದೂ ವಿವರ ನೀಡಿದರು.
    ತಾಯಿ-ಮಗುವಿನ ಮರಣ ಪ್ರಮಾಣ ಗಣನೀಯ ಇಳಿಕೆಯಾಗಬೇಕು. ಮರಣ ಹೊಂದಿದ ಪ್ರಕರಣಗಳನ್ನು ಕಡ್ಡಾಯವಾಗಿ ಆಡಿಟ್ ಮಾಡಿಸಬೇಕೆಂದು ಕಾರ್ಯದರ್ಶಿ ಸೂಚನೆ ನೀಡಿದರು.
    2.9 ಕೋಟಿ ಸ್ತ್ರೀಯರ ಪ್ರಯಾಣ
    ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಿಂದ 2.9 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಇದರ ಬಾಬ್ತು ದಾವಣಗೆರೆ ವಿಭಾಗಕ್ಕೆ 55.79 ಕೋಟಿ ವೆಚ್ಚ ಭರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಕರು ಸಭೆಗೆ ಮಾಹಿತಿ ನೀಡಿದರು.
    ಹಾಸ್ಟೆಲ್‌ಗಳಿಗೆ ಬಸ್‌ಗಳ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ದೊಡ್ಡ ಬಸ್‌ಗಳು ಸಂಚರಿಸದ ರಸ್ತೆಯಾಗಿದ್ದಲ್ಲಿ ಮಿನಿಬಸ್‌ಗಳನ್ನು ಓಡಿಸಲು ತಿಳಿಸಿದರು.
    ಗೃಹಲಕ್ಷ್ಮಿ ಯೋಜನೆಯಡಿ 3,84,319 ಗುರಿ ಪೈಕಿ 3,35,022 ಮಹಿಳೆಯರು ನೊಂದಣಿಯಾಗಿದ್ದು ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡದ 4254 ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಇದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಅಕ್ಟೋಬರ್‌ವರೆಗೆ ತಲಾ ಎರಡು ಸಾವಿರದಂತೆ ಪಾವತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಸಭೆಗೆ ತಿಳಿಸಿದರು. ಸಮಸ್ಯೆ ಇದ್ದಲ್ಲಿ ಸಂಪರ್ಕಿಸಲು ಕಚೇರಿಯಲ್ಲಿ ಜಿಲ್ಲಾ ಸಂಪರ್ಕ ಸಂಖ್ಯೆಯನ್ನು ಸಾರ್ವಜನಿಕರಿಗಾಗಿ ಆರಂಭಿಸಲು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
    ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 4.78 ಲಕ್ಷ ಗ್ರಾಹಕರಲ್ಲಿ ಗೃಹಜ್ಯೋತಿ ಯೋಜನೆಯಡಿ 4.20 ಲಕ್ಷ ಗ್ರಾಹಕರು ನೊಂದಾಯಿಸಿದ್ದು ಇವರಿಗೆ ನವೆಂಬರ್ ತಿಂಗಳಲ್ಲಿ 18.43 ಕೋಟಿ ಗೃಹಜ್ಯೋತಿಗಾಗಿ ವೆಚ್ಚ ಮಾಡಲಾಗಿದೆ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪಾಟೀಲ್ ತಿಳಿಸಿದರು.
    ಅನ್ನಭಾಗ್ಯ ಯೋಜನೆಯಡಿ 3,33,278 ಕಾರ್ಡ್‌ಗಳಿದ್ದು, 12,64,261 ಸದಸ್ಯರಿದ್ದಾರೆ. ಇವರಿಗೆ ತಲಾ 5 ಕೆ.ಜಿ. ಅಕ್ಕಿ ಜತೆಗೆ 5 ಕೆ.ಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ನೇರವಾಗಿ ಪಾವತಿಸಲಾಗಿದ್ದು ನವೆಂಬರ್ ತಿಂಗಳಲ್ಲಿ 19.95 ಕೋಟಿ ರೂ. ಪಾವತಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶಿದ್ರಾಮ ಮಾರಿಹಾಳ್ ತಿಳಿಸಿದರು.
    ನೀರು ನಿಲ್ಲಿಸುವ ಪದ್ದತಿಯಡಿ ಭತ್ತ ಬೆಳೆಯಲಾಗಿದ್ದು ಉತ್ತಮ ಇಳುವರಿ ಬಂದಿದೆ. ಮೊದಲ ಹಂತದ ಬೆಳೆ ಪರಿಹಾರ ಪಾವತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
    ಸಕಾಲದಡಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ, ಆದರೆ ಗ್ರಾಮ ಪಂಚಾಯಿತಿಯಲ್ಲಿ ಚರಂಡಿ, ಬೀದಿದೀಪ ದುರಸ್ತಿ ಕೋರಿದ ಅರ್ಜಿಗಳನ್ನು ಸಕಾಲದಲ್ಲಿ ದಾಖಲಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts