More

    ಕೋಟೆನಾಡಲ್ಲಿ ಸಂಭ್ರಮಕ್ಕೆ ಸಾಕ್ಷಿಯಾದ ಯುಗಾದಿ

    ಚಿತ್ರದುರ್ಗ: ಹಿಂದುಗಳ ನೂತನ ವರ್ಷಾರಂಭದ ಪವಿತ್ರ ಹಬ್ಬವಾದ ಯುಗಾದಿ ಸಂಭ್ರಮ ಹಲವೆಡೆ ಮನೆಮಾಡಿತ್ತು. ಇದರಲ್ಲಿ ಚಂದ್ರದರ್ಶನ ಪ್ರಮುಖ ಭಾಗವಾಗಿದ್ದು, ಹೊಸ ಜೀವನೋತ್ಸಾಹದೊಂದಿಗೆ ಕೋಟೆನಗರಿ ಸೇರಿ ಜಿಲ್ಲೆಯ ಜನ ಬುಧವಾರ ಚಂದ್ರನನ್ನು ಕಣ್ತುಂಬಿಕೊಂಡರು. ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.

    ಪ್ರತಿ ಹಬ್ಬ ಎಲ್ಲರಲ್ಲೂ ಸಂಭ್ರಮ ತರುವುದು ಸಹಜ. ಅದರ ಜೊತೆಗೆ ಶುಭ ಉಂಟು ಮಾಡುತ್ತದೆ ಎಂಬ ನಂಬಿಕೆ ಈಗಲೂ ಅನೇಕರಲ್ಲಿದ್ದು, ಅದರಂತೆ ಕ್ರೋಧಿ ನಾಮ ಸಂವತ್ಸರದ ಈ ಬಾರಿಯ ಯುಗಾದಿಯನ್ನು ಅಭ್ಯಂಜನ ಸ್ನಾನ, ಬೇವು-ಬೆಲ್ಲ ಸವಿಯುವುದರೊಂದಿಗೆ ಸ್ವಾಗತಿಸಿ, ಆಚರಿಸಲು ಮುಂದಾದರು.

    ಸಂಜೆ ಮೋಡದ ಮರೆಯಲ್ಲಿ ಕಣ್ಣಾ-ಮುಚ್ಚಾಲೆ ಆಟದಂತೆ ಗೆರೆಯಂತೆ ಗೋಚರಿಸಿದ ಚಂದ್ರನ ದರ್ಶನ ಪಡೆಯಲು ಹಲವರು ಉತ್ಸುಕರಾದರು. ಅನೇಕರು ಹರಸಾಹಸ ಪಟ್ಟು ಕೊನೆಗೂ ನೋಡಿ ಪುನೀತರಾದರು. ಕಾಣದವರು ದೇಗುಲಕ್ಕೆ ತೆರಳಿ ಮಹಾದೇವನ ಮೂರ್ತಿಯ ತಲೆಯ ಮೇಲಿರುವ ಚಂದ್ರನ ದರ್ಶನ ಪಡೆದರು.

    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಲ್ಲಿದ್ದ ಹಲವು ದೇಗುಲಗಳನ್ನು ಮಂಗಳವಾರದಿಂದಲೇ ಕಣ್ಮನ ಸೆಳೆಯುವಂತೆ ವಿವಿಧ ಬಗೆಯ ಪುಷ್ಪ, ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗಳು ಕೂಡ ಕಂಗೊಳಿಸಿದವು.

    ನಗರದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ಸ್ವಾಮಿ ಸನ್ನಿಧಾನ ಬೆಳಗ್ಗೆಯಿಂದ ರಾತ್ರಿ 12ರವರೆಗೂ ತೆರೆದಿತ್ತು. ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಮೇಲುದುರ್ಗದ ಹಿಂಡಭೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ಗೌರಸಂದ್ರ ಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಕಾಳಿಕಮಠೇಶ್ವರಿ, ಚೌಡೇಶ್ವರಿ, ಬನ್ನಿ ಮಹಾಕಾಳಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಮ್ಮ ದೇವಿ ಒಳಗೊಂಡು ಹಲವು ದೇಗುಲಗಳಲ್ಲಿ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ಸೇರಿ ವಿಶೇಷ ಪೂಜೆ ನೆರವೇರಿದವು. ಭೇಟಿ ನೀಡಿದ ಭಕ್ತರು ಆರೋಗ್ಯ, ಸಮೃದ್ಧಿ ಸೇರಿ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.

    ಈ ಹಬ್ಬದಲ್ಲಿ ಚಂದ್ರ ದರ್ಶನಕ್ಕೂ ಮುನ್ನ ಸಿಹಿ ತಿನಿಸನ್ನು ಸ್ವೀಕರಿಸಬೇಕು. ಹೀಗಾಗಿ ಬಹುತೇಕರ ಮನೆಗಳಲ್ಲಿ ಹೋಳಿಗೆ ತಯಾರಿಸಲಾಗಿತ್ತು. ಅದರ ಜತೆಗೆ ತರಹೇವಾರಿ ಖಾದ್ಯಗಳನ್ನು ಕುಟುಂಬ ಸಮೇತರಾಗಿ ಆಸ್ವಾದಿಸಿದರು.

    ಚಂದ್ರ ಮತ್ತು ದೇವರ ದರ್ಶನದ ನಂತರ ಗುರು-ಹಿರಿಯರ ಮನೆಗಳಿಗೆ ತೆರಳಿ ಅವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಸ್ನೇಹಿತರಿಗೆ, ಹಿತೈಷಿಗಳಿಗೆ, ಸಂಬಂಧಿಕರಿಗೆ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಟ್ಟಾರೆ ಯುಗಾದಿ ಹಬ್ಬವನ್ನು ಅತ್ಯುತ್ಸಾಹ, ಲವಲವಿಕೆಯಿಂದ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts