More

    ಕೊನೆಗೂ ಸೆರೆ ಸಿಕ್ಕ ಪುಂಡಾನೆ

    ಗುಂಡ್ಲುಪೇಟೆ: ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ರೈತರಿಗೆ ತೀವ್ರ ತೊಂದರೆ ನೀಡುತ್ತಿದ್ದ ಪುಂಡಾನೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆಯ ಸತತ ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದೆ.

    ತಮಿಳುನಾಡಿನ ಅರಣ್ಯದಿಂದ ಬಂಡೀಪುರಕ್ಕೆ ಆಗಮಿಸಿದ್ದ ಸುಮಾರು 20 ವರ್ಷ ವಯಸ್ಸಿನ ಪುಂಡಾನೆ ಕುಂದಕೆರೆ, ಗೋಪಾಲಸ್ವಾಮಿಬೆಟ್ಟ ಹಾಗೂ ಮದ್ದೂರು ವಲಯಗಳ ಕಾಡಂಚಿನ ಜಮೀನುಗಳಲ್ಲಿ ದಾಂಧಲೆ ನಡೆಸುವ ಜತೆಗೆ ಒಂಟಿ ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ನೇತೃತ್ವದಲ್ಲಿ ಮಹೇಂದ್ರ, ಭೀಮ ಹಾಗೂ ಗಣೇಶ ಆನೆಗಳನ್ನು ಬಳಸಿಕೊಂಡು ಶನಿವಾರದಿಂದ ಸತತ ಕಾರ್ಯಾಚರಣೆ ನಡೆಸಿತ್ತು. ಪುಂಡಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದರೂ ಅದು ಇರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
    ಮಂಗಳವಾರ ಬೆಳ್ಳಂಬೆಳಗ್ಗೆ ಪತ್ತೆ ಕಾರ್ಯಕ್ಕೆ ಮುಂದಾದ ಸಿಬ್ಬಂದಿಗೆ ಪುಂಡಾನೆಯು ಗೋಪಾಲಸ್ವಾಮಿ ಬೆಟ್ಟ ವಲಯದ ಕಡೈಕೋಟೆ ಪ್ರದೇಶದಲ್ಲಿರುವುದು ಕಂಡುಬಂದಿತು. ಕೂಡಲೇ ಕುಮ್ಕಿ ಆನೆಗಳೊಂದಿಗೆ ಪಶುವೈದ್ಯರಾದ ಡಾ.ರಮೇಶ್, ಡಾ.ಮಿರ್ಜಾವಾಸಿಂ, ಡಾ.ಮುಜೀಬ್ ರೆಹಮಾನ್ ಹಾಗೂ ತಂಡ ಸುತ್ತುವರಿದು ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
    ಸೆರೆಸಿಕ್ಕ ಆನೆಯನ್ನು ಕಲ್ಕೆರೆ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲದೇ, ಕಳೆದ ವಾರ ಬೆಟ್ಟದ ಮಾದಹಳ್ಳಿ ಗ್ರಾಮದಲ್ಲಿ ರೈತರನ್ನು ಗಾಯಗೊಳಿಸಿದ್ದ ಮತ್ತೊಂದು ಆನೆಯನ್ನೂ ಕೆಲವೇ ಗಂಟೆಗಳ ಆಪರೇಷನ್‌ನಲ್ಲಿ ಆನೆ ಸೆರೆ ಹಿಡಿಯಲಾಗಿದ್ದು, ಅದನ್ನೂ ರಾಂಪುರ ಶಿಬಿರಕ್ಕೆ ಕಳುಹಿಸಲಾಗಿದೆ. ಅಲ್ಲಿ ಎರಡೂ ಆನೆಗಳನ್ನು ಸಾಕಾನೆಗಳ ನೆರವಿನಿಂದ ಪಳಗಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts