More

    ‘ಕೈ’ ಪಾಳಯದಲ್ಲಿ ಬಿರುಸಿನ ಚಟುವಟಿಕೆ

    ಗದಗ: ಸಿದ್ದಲಿಂಗೇಶ್ವರ ಪಾಟೀಲ ಅವರ ರಾಜೀನಾಮೆಯಿಂದ ತೆರವಾದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಜೂ. 19ರಂದು ಚುನಾವಣೆ ನಡೆಯಲಿದೆ.

    ಐದು ವರ್ಷಗಳ ಅಧಿಕಾರಾವಧಿಯಲ್ಲಿ ನಾಲ್ಕು ವರ್ಷ ಒಂದು ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಮೂವರು ಜಿಪಂ ಸದಸ್ಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಉಳಿದ 11 ತಿಂಗಳ ಅವಧಿಗಾಗಿ ಮತ್ತೊಬ್ಬ ಸದಸ್ಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆದಿವೆ.

    ಕೊಣ್ಣೂರು ಜಿಪಂ ಕ್ಷೇತ್ರದ ಸದಸ್ಯ ರಾಜುಗೌಡ ಕೆಂಚನಗೌಡ ಹಾಗೂ ಹಿರೇವಡ್ಡಟ್ಟಿ ಜಿಪಂ ಕ್ಷೇತ್ರದ ಸದಸ್ಯ ಈರಪ್ಪ ನಾಡಗೌಡ ಅವರು ಜಿಪಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಮುಖಂಡರ ನಿಲುವಾಗಿದೆ.

    ಕಾಂಗ್ರೆಸ್ ವಶ:

    2016ರ ಫೆಬ್ರವರಿಯಲ್ಲಿ ಜರುಗಿದ ಜಿಪಂ ಚುನಾವಣೆಯಲ್ಲಿ 19 ಸ್ಥಾನಗಳ ಪೈಕಿ 11ರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಯಿತು. ಸೊರಟೂರು ಜಿಪಂ ಕ್ಷೇತ್ರದ ಸದಸ್ಯ ವಾಸಣ್ಣ ಕುರಡಗಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಶಿಗ್ಲಿ ಜಿಪಂ ಕ್ಷೇತ್ರದ ಸದಸ್ಯ ಎಸ್.ಪಿ. ಬಳಿಗಾರ, ಲಕ್ಕುಂಡಿ ಜಿಪಂ ಕ್ಷೇತ್ರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಜಿಪಂ ಸದಸ್ಯರಾದ ರೂಪಾ ಅಂಗಡಿ, ಶಕುಂತಲಾ ಮೂಲಿಮನಿ ಅವರು ಈಗಾಗಲೇ ಜಿಪಂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಮಲ್ಲವ್ವ ಬಿಚ್ಚೂರ ಅವರು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ನರಗುಂದ ಜಿಪಂ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ (ರಾಜುಗೌಡ ಪಾಟೀಲ) ಹಾಗೂ ಶಿರಹಟ್ಟಿ ಕ್ಷೇತ್ರದ ಮುಂಡರಗಿ ತಾಲೂಕಿಗೆ ಉಪಾಧ್ಯಕ್ಷ ಸ್ಥಾನ (ಶೋಭಾ ಮೇಟಿ) ನೀಡಿದರೆ ಹೇಗೆಂಬ ಚರ್ಚೆಯನ್ನು ಮುಖಂಡರು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸ್ಥಾಯಿ ಸಮಿತಿ ಅಧ್ಯಕ್ಷರಾದರೆ ಇಲ್ಲ…

    ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವ ಕುರಿತು ಚರ್ಚೆಯೂ ನಡೆಯಿತು. ಅಲ್ಲದೆ, ಸ್ಥಾಯಿ ಸಮಿತಿ ಅಧ್ಯಕ್ಷರಾದರೆ ಜಿಪಂ ಅಧ್ಯಕ್ಷ ಸ್ಥಾನ ಕೇಳುವಂತಿಲ್ಲ ಎಂಬ ಷರತ್ತು ವಿಧಿಸಿ ಪರಿಹಾರ ಸೂತ್ರ ಕಂಡುಕೊಳ್ಳಲಾಯಿತು. ಜಿಪಂ ಅಧ್ಯಕ್ಷರಾಗಬೇಕೆಂಬ ಆಸೆಯಿಂದ ಕೆಲವರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನಿರಾಕರಿಸಿದರು. ಹೀಗಿದ್ದರೂ ಈಗಾಗಲೇ ಜಿಪಂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಶಿಗ್ಲಿ ಜಿಪಂ ಕ್ಷೇತ್ರದ ಸದಸ್ಯ ಎಸ್.ಪಿ. ಬಳಿಗಾರ ಅವರು ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಸಲ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವ ಯುವ ಸದಸ್ಯರು ಈ ಸಲ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಪರಿಹಾರ ಸೂತ್ರ ಕಂಡುಹಿಡಿದ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ನಡೆದುಕೊಳ್ಳಬೇಕು ಎಂದು ಇತರ ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಸಲ ಜಿಪಂ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ. ಕಳೆದ ಸಲವೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮುಖಂಡರಲ್ಲಿ ವಿನಂತಿಸಲಾಗಿತ್ತು. ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದರು. ಹೀಗಾಗಿ ಅಪಾರ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ. ಈ ಕುರಿತು ಈಗಾಗಲೇ ಮುಖಂಡರನ್ನು ಭೇಟಿ ಮಾಡಲಾಗಿದೆ.

    | ರಾಜುಗೌಡ ಕೆಂಚನಗೌಡ, ಜಿಪಂ ಸದಸ್ಯ, ಕೊಣ್ಣೂರು ಕ್ಷೇತ್ರ

    ಯುವಕರಿಗೆ ಆದ್ಯತೆ?

    ಸಿದ್ದಲಿಂಗೇಶ್ವರ ಪಾಟೀಲ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಾರಿಗೆ ತಂದಿರುವ ಅನೇಕ ಕಾರ್ಯಕ್ರಮಗಳು ಜನರನ್ನು ತಲುಪಿವೆ. ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಆರಂಭಿಸಿದ ಓದಿನಮನೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ. ಅಲ್ಲದೆ, ಶಾಲೆಗಳಲ್ಲಿ ಬಾಲಕಿಯರಿಗೆ ಪಿಂಕ್ ಟಾಯ್ಲೆಟ್ ನಿರ್ವಣ, ಉದ್ಯಾನ ನಿರ್ಮಾಣ ಹೀಗೆ ಹಲವಾರು ಯೋಜನೆಗಳ ಮೂಲಕ ಅಲ್ಪ ಅವಧಿಯಲ್ಲಿ ಅವರು ವಿಶಿಷ್ಟ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಜತೆಗೆ ಮುಂಬರುವ ಚುನಾವಣೆಗೂ ಅನುಕೂಲವಾಗಬೇಕು ಎಂಬ ಯೋಚನೆ ಇರುವುದರಿಂದ ಮುಖಂಡರು ಯುವಕರಿಗೆ ಆದ್ಯತೆ ನೀಡಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts