More

    ಕೈ ನಾಯಕರಿಗೆ ಕೃತಜ್ಞತೆ ಇಲ್ಲ: ಎಚ್‌ಡಿಕೆ ವಾಗ್ದಾಳಿ, ಜೆಡಿಎಸ್‌ನ 6 ಮಂದಿಗೂ ಜಯದ ವಿಶ್ವಾಸ

    ಚನ್ನಪಟ್ಟಣ:  ಬೆಂಬಲ ಕೊಟ್ಟಂತೆ ನಾಟಕವಾಡಿ ಕತ್ತು ಕುಯ್ಯುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಮತ ಚಲಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹತಾಶೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೋರಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನನ್ನನ್ನು ಪ್ರಧಾನಿ ಮಾಡಿ ಎಂದು ದೇವೇಗೌಡರು ಏನಾದರೂ ಅರ್ಜಿ ಹಿಡಿದುಕೊಂಡು ಕಾಂಗ್ರೆಸ್ ನಾಯಕರ ಬಳಿ ಹೋಗಿದ್ದರಾ.. ಅಥವಾ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನೇನಾದರೂ ಅರ್ಜಿ ಹಿಡಿದುಕೊಂಡು ಅವರ ಬಳಿ ಹೋಗಿದ್ದೆನಾ.. ಎಂದು ಹರಿಹಾಯ್ದರು.

    ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದ್ದು, ಆಗ ಯಾರು ಶಕ್ತಿವಂತರು, ಯಾರ ಶಕ್ತಿ ಎಷ್ಟಿದೆ ಎಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಏನೇನು ಬದಲಾವಣೆಗಳು ಆಗುತ್ತದೊ ಯಾರಿಗೆ ಗೊತ್ತು? ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪ ವೈಯಕ್ತಿಕವಾಗಿ ನನಗೆ ಮನವಿ ಮಾಡಿದ್ದರು. ಇದು ಯಡಿಯೂರಪ್ಪ ಅವರ ದೊಡ್ಡತನ ತೋರಿಸುತ್ತದೆ. ಇನ್ನೊಂದೆಡೆ ಕಾಂಗ್ರೆಸ್‌ನವರ ಮಾತುಗಳು ಅವರ ದುರಹಂಕಾರ ತೋರಿಸುತ್ತದೆ. ಕೃತಜ್ಞತೆ-ಔದಾರ್ಯ ಗುಣಗಳಿಲ್ಲದ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಟೀಕಿಸಿದರು.

    ಈ ಚುನಾವಣೆಯಲ್ಲಿ ಕೆಲವು ಕಡೆ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ್ದರೆ, ಮತ್ತೆ ಕೆಲವು ಕಡೆ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಜೆಡಿಎಸ್ ಬಗ್ಗೆ ಕನಿಷ್ಠ ಸೌಜನ್ಯವಿಲ್ಲ. ಜಾತ್ಯತೀತ ಬದ್ಧತೆಯ ಪಕ್ಷ ಎಂದು ಹೇಳಿಕೊಳ್ಳುವ ಅವರು, ಜಾತ್ಯತೀತತೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ನಡುವಳಿಕೆಯನ್ನು ತೋರುತ್ತಿದ್ದಾರೆ ಎಂದರು.

    ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಆರು ಅಭ್ಯರ್ಥಿಗಳೂ ಸಹ ಜಯ ಸಾಧಿಸಲಿದ್ದಾರೆ ಎಂದು ಎಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಅಧ್ಯಕ್ಷ ಪ್ರಶಾಂತ್, ನಗರಸಭೆ ಸದಸ್ಯರಾದ ಸತೀಶ್‌ಬಾಬು, ಮಂಜುನಾಥ್, ನಾಗೇಶ್, ಮಹದೇವ, ಕಂಠಿ ಮತ್ತಿತರರು ಇದ್ದರು.

    ಯಾವುದೇ ಆತಂಕವಿಲ್ಲ :   ನಮ್ಮ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಕೆಲವರು ಕೇಳುತ್ತಾರೆ. ನಮ್ಮ ಜಿಲ್ಲೆಯಲ್ಲೂ ಸಹ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡುತ್ತಿದ್ದಾರೆ. ಬಹಳ ಹಿಂದಿನಿಂದಲೂ ಜೆಡಿಎಸ್ ಮುಖಂಡರನ್ನು ಹೈಜಾಕ್ ಮಾಡುವ ಕಾರ್ಯ ನಡೆಯುತ್ತಿದೆ. ಜೆಡಿಎಸ್ ಬಲಿಷ್ಠವಾಗಿದೆ ಎನ್ನುವ ಕಾರಣಕ್ಕೆ ಅವರು ಎಲ್ಲ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ. ಪಕ್ಷ್ವನ್ನು ದುರ್ಬಲಗೊಳಿಸಬೇಕೆನ್ನುವ ಕಾರಣಕ್ಕೆ ಜೆಡಿಎಸ್‌ನಲ್ಲಿ ಬೆಳೆದವರು ರಾಮನಗರದ ಹಲವು ಮಂದಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಜಿಲ್ಲೆಯಾದ್ಯಂತ ನಿಷ್ಠಾವಂತ ಕಾರ್ಯಕರ್ತರು ಪಕ್ಷದಲ್ಲಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿರ್ನಾಮ ಮಾಡುತ್ತಾರೋ ಅಥವಾ ಕನಕಪುರವೂ ಸೇರಿ ಕಾಂಗ್ರೆಸ್ ಪಕ್ಷವನ್ನೇ ನಿರ್ನಾಮ ಮಾಡುತ್ತಾರೋ ನೋಡೋಣ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts