More

    ಕೈ ಕಾರ್ಯಕರ್ತರ ಸಭೆ: ಉಗ್ರ ರೂಪ ತೋರಿದ ಶಾಸಕಿ ರೂಪಕಲಾ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕಿ ಎಂ. ರೂಪಕಲಾ ಪ್ರತಿಪಕ್ಷದ ಮುಖಂಡರು ಹಾಗೂ ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರ ವಿರುದ್ಧ ಮತ್ತೊಮ್ಮೆ ತಮ್ಮ ಉಗ್ರ ರೂಪ ಪ್ರದರ್ಶಿಸಿದರು.
    ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಗೆ, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬಲಾಢ್ಯರು ಬಡವರ ವಿರುದ್ಧ ಷಡ್ಯಂತ್ರ ನಡೆಸಿದರು. ಅದರ ವಿರುದ್ಧ ಹೋರಾಟ ನಡೆಸಿದರೂ ಬಡವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದ್ದೇವೆ. ಸತ್ಯ ಗೆದ್ದೇ ಗೆಲ್ಲುತ್ತದೆ. ನಾನು ಈ ಮಣ್ಣಿನ ಮಗಳು. ನನ್ನ ರಕ್ತ ಇಲ್ಲಿ ಹರಿಯುವವರೆಗೆ ಬಲಾಢ್ಯರ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಅಶಕ್ತರಿಗೆ ಶಕ್ತಿ ನೀಡುತ್ತೇನೆ ಎಂದು ಗುಡುಗಿದರು.
    ನನ್ನ ಜತೆಯಲ್ಲಿದ್ದುಕೊಂಡೇ ನನಗೆ ಮತ್ತು ಪಕ್ಷಕ್ಕೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಅಂತಹವರನ್ನು ದೂರ ಇಟ್ಟು ಪಕ್ಷ ಸಂಘಟನೆ ಮಾಡುವುದು ಹೇಗೆಂದು ನನಗೂ ಗೊತ್ತು ಎಂದು ಅಬ್ಬರಿಸಿದ ರೂಪಕಲಾ ತಾಲೂಕು ಮಟ್ಟದ ಕೆಲ ಅಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಒಗಳು ಪರೋಕ್ಷವಾಗಿ ಟೀಕೆಗೆ ಗುರಿಯಾದರು.
    ಸ್ವ ಪಕ್ಷೀಯರಿಮದಲೇ ಸಿದ್ದತೆ
    ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ,ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಇಳಿಸಲು ಅವರ ಪಕ್ಷದವರೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
    ಭಾಷಣಕ್ಕೆ ಚಕ್ಕರ್ – ಬಿರಿಯಾನಿಗೆ ಹಾಜರ್
    ಸಮಾವೇಶಕ್ಕೆ ನಿರೀಕ್ಷಿಸಿದಷ್ಟು ಕಾರ್ಯಕರ್ತರು ಅಗಮಿಸದಿದ್ದರೂ ಶಿಸ್ತಿನಿಂದ ಕುಳಿತಿದ್ದ ಕಾರ್ಯಕರ್ತರನ್ನು ಕಂಡು ಶಾಸಕಿ ಎಂ. ರೂಪಕಲಾ ಸೇರಿದಂತೆ ಆಯೋಜಕರು ಸಮಾಧಾನ ಪಟ್ಟುಕೊಂಡಿದ್ದರು. 11 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಪ್ರಾರಂಭವಾಯಿತು.
    ಕನಿಷ್ಟ 5,000 ಮಂದಿ ಸೇರಬಹುದೆಂದು 1000 ಕೆ.ಜಿ.ಕುರಿ ಮಾಂಸದೊಂದಿಗೆ ಬಿರಿಯಾನಿ ಒಲೆಯಲ್ಲಿ ಬೇಯುತ್ತಾ ಘಮಲು ಎಲ್ಲೆಡೆ ಪಸರಿಸಿತ್ತು. ಸ್ಥಳೀಯ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಮುಖಂಡರು ಭಾಷಣ ಮುಗಿಸಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಭಾಷಣ ಆರಂಭಿಸಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು. ಹಸಿವು ತಡೆದುಕೊಳ್ಳಲಾರದ ಕಾರ್ಯಕರ್ತರು ಊಟದ ಕೌಂಟರ್ ಬಳಿಗೆ ತೆರಳಲು ಮುಂದಾಗಿದ್ದರು.
    ಕಾರ್ಯಕರ್ತರು ಶಿಸ್ತು ಕಲಿಸಬೇಕು, ಆಯೋಜಕರೂ ಸಹ ಅವರ ತಾಳ್ಮೆ ಪರೀಕ್ಷೆ ಮಾಡಬಾರದೆಂದು ಕೆ.ಎಚ್. ಮುನಿಯಪ್ಪ ಕಿವಿ ಮಾತು ಹೇಳಿದರು. ಕಡೇಯದಾಗಿ ಮಾತನಾಡಿದ ಶಾಸಕಿ ರೂಪಕಲಾ ಹಸಿವು ನಮ್ಮ ಸಮಯವನ್ನು ನೋಡುವುದಿಲ್ಲ, ಅದಕ್ಕೆ ಕೆಲವರು ಊಟಕ್ಕೆ ತೆರಳಿದ್ದಾರೆ. ಆದರೂ ಈ ಕಾರ್ಯಕ್ರಮದ ಉದ್ದೇಶ, ಕ್ಷೇತ್ರದ ಎಲ್ಲ ಕಾರ್ಯಕರ್ತರಿಗೂ ತಿಳಿಸಬೇಕಿದೆ ಎಂದು ಮಾತು ಆರಂಭಿಸಿ ಮುಕ್ಕಾಲು ಗಂಟೆ ಮಾತನಾಡಿ ಮಾತು ಮುಗಿಸುವಷ್ಟರಲ್ಲಿ ಶೇ 50ಕ್ಕಿಂತಲೂ ಹೆಚ್ಚು ಜನ ಬಾಡೂಟ ಉಂಡು ತಣ್ಣಗಾಗಿದ್ದರು.

    ಕೈ ಕಾರ್ಯಕರ್ತರ ಸಭೆ: ಉಗ್ರ ರೂಪ ತೋರಿದ ಶಾಸಕಿ ರೂಪಕಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts