More

    ಕೇಂದ್ರದ ಪ್ಯಾಕೇಜ್ ಉತ್ತೇಜನಕಾರಿ

    ಹುಬ್ಬಳ್ಳಿ: ಕರೊನಾ ಹಿಮ್ಮೆಟ್ಟಿಸಲು ಆದೇಶಿಸಲಾದ ಲಾಕ್​ಡೌನ್​ನಿಂದಾಗಿ ತೊಂದರೆಗೆ ಸಿಲುಕಿರುವ ಪ್ರತಿಯೊಂದು ಕ್ಷೇತ್ರವೂ ಪುನಃ ಚೇತರಿಸಿಕೊಳ್ಳಲು ಬೆಂಬಲವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ಅನ್ನು ಇಲ್ಲಿಯ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ (ಎಚ್​ಡಿಡಿಎಫ್) ಸ್ವಾಗತಿಸಿದೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆ ಕಾರ್ಯದರ್ಶಿ ಜಗದೀಶ ಹಿರೇಮಠ, ಕೇಂದ್ರ ಸರ್ಕಾರದ ಪ್ಯಾಕೇಜ್ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಪೂರಕವಾಗಿದೆ. ಹಣಕಾಸಿನ ಹರಿವನ್ನು ಹೆಚ್ಚಿಸಲಿದೆ. ಇದು ಉದ್ಯಮಗಳಿಗೆ, ವಿಶೇಷವಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್​ಎಂಇ) ಕೈಗಾರಿಕೆಗಳಿಗೆ ಉತ್ತೇಜನಕಾರಿಯಾಗಿದೆ. ಅವುಗಳು ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಪುನಃ ಪ್ರಾರಂಭಿಸಲು ಪ್ರೇರಣಾದಾಯಕವಾಗಿದೆ ಎಂದು ಹೇಳಿದೆ.

    ಇದುವರೆಗೆ ಸರ್ಕಾರ ಘೊಷಿಸಿರುವ ಎಂಎಸ್​ಎಂಇಗಳಿಗೆ 3 ಲಕ್ಷ ಕೋಟಿ ರೂ. ಗ್ಯಾರಂಟಿ ರಹಿತ ಸಾಲ, 3 ತಿಂಗಳ ಕಾಲ ಪಿಎಫ್ ಕಂತನ್ನು ಶೇ. 12ರಿಂದ 10ಕ್ಕೆ ಇಳಿಸುವುದು, ಹಂಚಿಕೆದಾರ ಕಂಪನಿಗಳಿಗೆ 90 ಸಾವಿರ ಕೋಟಿ ರೂ. ಲಿಕ್ವಿಡಿಟಿ ನೆರವು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರೇರಾ ಕಾಯ್ದೆಯಡಿ ನೋಂದಾಯಿಸಿಕೊಳ್ಳುವ ಮತ್ತು ಪೂರ್ಣಗೊಳಿಸುವ ಅವಧಿಯನ್ನು 6 ತಿಂಗಳು ವಿಸ್ತರಿಸಿರುವುದು, ಟಿಡಿಎಸ್ ಮತ್ತು ಟಿಸಿಎಸ್​ಅನ್ನು ಶೇ. 25 ಇಳಿಸಿರುವುದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ನೆರವು ಹಾಗೂ ಗ್ರಾಮೀಣ ಆರ್ಥಿಕತೆ ಬಲಪಡಿಸುವುದು ಸೇರಿ ವಿವಿಧ ಕ್ರಮಗಳು ಪ್ರಶಸ್ತವಾಗಿವೆ.

    ಪುನಶ್ಚೇತನದ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಶಿಫಾರಸು ಮಾಡಿ ಎಚ್​ಡಿಡಿಎಫ್ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ರಾಜ್ಯ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿಪತ್ರ ಸಲ್ಲಿಸಿದೆ. ಈ ಶಿಫಾರಸುಗಳ ವಿಷಯದಲ್ಲಿ ಹೆಚ್ಚು ಒತ್ತಡ ಹಾಕಿದ್ದರ ಫಲವಾಗಿ, ವಿದ್ಯುತ್ ಮೀಟರ್ ಚಾರ್ಜ್ ಕೈ ಬಿಡಲಾಗಿದೆ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳಿಂದ ಎಂಎಸ್​ಎಂಇಗಳಿಗೆ ಬಾಕಿ ಇರುವ ಮೊತ್ತವನ್ನು 45 ದಿನದೊಳಗೆ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಕೈಗಾರಿಕಾ ಕ್ಷೇತ್ರದ ಪಾಲುದಾರರ ಅಹವಾಲನ್ನು ಆಲಿಸಿ, ಶಿಫಾರಸುಗಳನ್ನು ಸರ್ಕಾರದ ಗಮನಕ್ಕೆ ತಂದು ಜಾರಿಗೊಳಿಸುವ ಕಾಳಜಿ ತೋರಿಸಿರುವ ಇಬ್ಬರೂ ಸಚಿವರಿಗೆ ಎಚ್​ಡಿಡಿಎಫ್ ಕೃತಜ್ಞವಾಗಿದೆ ಎಂದು ಅವರು ತಿಳಿಸಿದ್ದಾರೆ.

    ಉಕ ಸಮಗ್ರ ಅಭಿವೃದ್ಧಿಯ ಚಿಂತನೆ

    ಎಚ್​ಡಿಡಿಎಫ್ ಹುಬ್ಬಳ್ಳಿ-ಧಾರವಾಡ ಸೇರಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಚಿಂತನೆಯುಳ್ಳ ಪ್ರಮುಖ ಸಂಘಟನೆಯಾಗಿದೆ. ಇದಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಚೇರ್ಮನ್, ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್, ಉದ್ಯಮಿಗಳಾದ ಎಂ.ವಿ. ಕರಮರಿ, ಎಚ್.ಎನ್. ನಂದಕುಮಾರ ಉಪಾಧ್ಯಕ್ಷರು, ಸ್ವರ್ಣ ಸಮೂಹ ಸಂಸ್ಥೆಗಳ ಎಂ.ಡಿ. ಡಾ. ವಿ.ಎಸ್.ವಿ. ಪ್ರಸಾದ ಖಜಾಂಚಿ, ಐಟಿ ಉದ್ಯಮಿ ಸಂತೋಷ ಹುರಳಿಕೊಪ್ಪಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts