More

    ಕೆಲವೆಡೆ ನಿಲ್ಲದ ಜನಸಂಚಾರ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಭಾಗದಲ್ಲಿ ಮುಂದುವರಿದ ಜನ ಸಂಚಾರ… ಹಳೇ ಔಷಧ ಚೀಟಿಗಳನ್ನು ಹಿಡಿದು ತಿರುಗುತ್ತಿರುವ ಬೈಕ್ ಸವಾರರು… ಬೈಕ್ ಸೀಜ್ ಮಾಡಿದರೂ ಬಿಡುವಂತೆ ಒತ್ತಡ ಹೇರುತ್ತಿರುವ ಗಣ್ಯರ ಬಗ್ಗೆ ದಕ್ಷಿಣ ಸಂಚಾರಿ ಠಾಣೆ ಪೊಲೀಸರ ಬೇಸರ…

    ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ಕೈಗೊಂಡಿರುವ ಲಾಕ್​ಡೌನ್​ನ 5ನೇ ದಿನವಾದ ಭಾನುವಾರ ಹಳೇ ಹುಬ್ಬಳ್ಳಿಯಲ್ಲಿ ಕಂಡುಬಂದ ದೃಶ್ಯಗಳಿವು.

    ಕಮರಿಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಕೌಲಪೇಟ, ಮುಲ್ಲಾ ಓಣಿ, ಕಸಬಾಪೇಟ ಠಾಣೆ ವ್ಯಾಪ್ತಿಯ ಸದರ ಸೋಫಾ, ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಶಿವಶಂಕರ ಕಾಲನಿ ಸೇರಿ ವಿವಿಧೆಡೆ ಜನರು ಗುಂಪು ಗುಂಪಾಗಿ ಸಂಚರಿಸುವುದು, ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿರುವುದು, ಅನಗತ್ಯವಾಗಿ ಬೈಕ್​ನಲ್ಲಿ ಸುತ್ತಾಡುವುದು ಭಾನುವಾರವೂ ಕಂಡುಬಂದಿತು. ಕೆಲವೆಡೆ ಪೊಲೀಸರಿದ್ದರೂ ಗಿಡಗಳ ಕೆಳಗೆ, ಕಟ್ಟಡಗಳ ಪಕ್ಕದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಆದರೆ ಇದೇ ಠಾಣೆ ವ್ಯಾಪ್ತಿಯ ಇತರೆಡೆ ಗುಂಪಾಗಿ ತಿರುಗಾಡುತ್ತಿದ್ದವರನ್ನು ಚದುರಿಸುವ ಕೆಲಸವನ್ನು ಪೊಲೀಸರು ಮಾಡಲಿಲ್ಲ.

    ಸದರಸೋಫಾ, ಮುಲ್ಲಾ ಓಣಿಗಳಲ್ಲಂತೂ ಪೊಲೀಸರ ಸುಳಿವೇ ಇರಲಿಲ್ಲ. ಕಳೆದ ಶುಕ್ರವಾರ ಕೌಲಪೇಟೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬಂದವರನ್ನು ಲಾಠಿ ಬೀಸಿ ಚದುರಿಸಿದ್ದ ಕಮರಿಪೇಟೆ ಠಾಣೆ ಪೊಲೀಸರು, ಭಾನುವಾರ ಅಲ್ಲಿ ಕಾಣಿಸಲೇ ಇಲ್ಲ. ಪ್ರತಿ ಭಾನುವಾರ ಸೆಕೆಂಡ್ ಹ್ಯಾಂಡ್ ಬೈಕ್​ಗಳ ಮಾರಾಟದಿಂದಾಗಿ ಜನದಟ್ಟಣೆಯಿಂದ ಕೂಡಿರುತ್ತಿದ್ದ ಡಾಕಪ್ಪ ವೃತ್ತ, ಭಾನುವಾರ ಲಾಕ್​ಡೌನ್​ನಿಂದಾಗಿ ಬಿಕೋ ಎನ್ನುತ್ತಿತ್ತು. ಅನಗತ್ಯವಾಗಿ ಸುತ್ತಾಡುತ್ತಿದ್ದವರನ್ನು ತಡೆದ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಬೈಕ್ ಸವಾರರು 2017, 2018ನೇ ವರ್ಷದ ಔಷಧ ಚೀಟಿಗಳನ್ನು ತೋರಿಸುತ್ತಿರುವುದು ಕಂಡುಬಂದಿತು. ಅನಗತ್ಯವಾಗಿ ಸುತ್ತುತ್ತಿದ್ದವರ ಬೈಕ್​ಗಳನ್ನು ಸೀಜ್ ಮಾಡಿದರೆ ಗಣ್ಯರೆನಿಸಿಕೊಂಡವರು ಬೈಕ್​ಗಳನ್ನು ಬಿಡುವಂತೆ ಮೇಲಧಿಕಾರಿಗಳಿಂದ ಒತ್ತಡ ಹೇರಿಸುತ್ತಿದ್ದಾರೆ ಎಂದು ದಕ್ಷಿಣ ಸಂಚಾರ ಠಾಣೆಯ ಕೆಲ ಪೊಲೀಸರು ಮಾಧ್ಯಮ ಪ್ರತಿನಿಧಿಗಳ ಎದುರು ಅವಲತ್ತುಕೊಂಡರು. ಈ ಮಧ್ಯೆ ಕೆಲವೆಡೆ ತರಕಾರಿ ಮಾರಾಟ ಮಾಡಲು ಮಕ್ಕಳನ್ನು ಕೂರಿಸಿದ್ದು ಸಹ ಕಂಡುಬಂದಿತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts