More

    ಕೆಲವರು ಅಂದರ್… ಹಲವರು ಬಾಹರ್..

    ಹಾವೇರಿ: ಲಾಕ್​ಡೌನ್ ಘೊಷಣೆಯಾದ ಬಳಿಕ ರಸ್ತೆ ಅಪಘಾತ, ಕಳ್ಳತನದಂಥ ಅಪರಾಧಗಳು ಕಡಿಮೆಯಾಗಿವೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಅಂದರ್ ಬಾಹರ್ ಜೂಜು ಈ ಅವಧಿಯಲ್ಲಿ ಅಧಿಕವಾಗಿದೆ. ಕೆಲಸವಿಲ್ಲದೆ ಊರಲ್ಲಿ ಖಾಲಿ ಇರುವ ಯುವಕರ ಗುಂಪು ಹಣ ಪಣಕ್ಕಿಟ್ಟು ಜೂಜಿನಲ್ಲಿ ತೊಡಗಿರುವ ನೂರಾರು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

    ಲಾಕ್​ಡೌನ್ ಶುರುವಾದಾಗಿನಿಂದಲೇ ಅಂದರ್ ಬಾಹರ್ ಜೂಜು ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಇಸ್ಪೀಟ್ ಎಲೆ ಆಟದಲ್ಲಿ ಹಣ ಕಟ್ಟಿ ಆಡುವವರ ಸಂಖ್ಯೆ ಅಧಿಕವಾಗಿದೆ. ಹೊಲ, ಗದ್ದೆ, ಅಡವಿ, ತೋಟ, ದೇವಸ್ಥಾನ, ಶಾಲೆಗಳ ಆವರಣಗಳೇ ಜೂಜು ಅಡ್ಡೆಯಾಗಿ ಪರಿಣಮಿಸಿವೆ.

    ನಿತ್ಯ ನಗರಗಳಿಗೆ ಉದ್ಯೋಗಕ್ಕೆ ಬರುತ್ತಿದ್ದವರು ಈಗ ಕೆಲಸವಿಲ್ಲದೆ ಅಂದರ್ ಬಾಹರ್ ಆಡುತ್ತ ಸಮಯ ಕಳೆಯುತ್ತಿದ್ದಾರೆ. ಲಾಕ್​ಡೌನ್ ಸಡಿಲಿಕೆಯಾಗಿ ಈಗ ಮದ್ಯವೂ ಸಿಗುತ್ತಿದೆ. ಇದರ ಜತೆಗೆ ಜೂಜಾಟವೂ ಹೆಚ್ಚಿದ್ದು, ಗ್ರಾಮೀಣ ಭಾಗದ ಸ್ವಾಸ್ಥ್ಯನ್ನೇ ಹಾಳು ಮಾಡುತ್ತಿದೆ ಎಂದು ಅನೇಕರು ಗೋಳಾಡುತ್ತಿದ್ದಾರೆ.

    ಕಟ್ಟುನಿಟ್ಟಿನ ಲಾಕ್​ಡೌನ್ ಇದ್ದಾಗ ನಿಯಮ ಜಾರಿಯಲ್ಲಿಯೇ ಪೊಲೀಸ್ ಇಲಾಖೆ ಮುಳುಗಿತ್ತು. ವಾಹನ ಮತ್ತು ಜನ ಸಂಚಾರ ನಿರ್ಬಂಧ ಕಾರ್ಯ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವುದು ಸೇರಿ ಕರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಹಗಲೂರಾತ್ರಿ ಕರ್ತವ್ಯ ನಿರತರಾಗಿದ್ದರು. ಈಗ ಲಾಕ್​ಡೌನ್ ನಿಯಮ ಸಡಿಲವಾಗುತ್ತಿದ್ದಂತೆ ನಿಧಾನವಾಗಿ ಅಂದರ್ ಬಾಹರ್​ನಂತಹ ಜೂಜು ಅಡ್ಡೆಗಳ ಮೇಲೆ ಪೊಲೀಸ್ ಇಲಾಖೆ ದಾಳಿ ಶುರು ಮಾಡಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಜೂಜಾಟ ಪ್ರಕರಣಗಳು ದಾಖಲಾಗಿವೆ. ಜಮೀನು, ತೋಟ, ಶಾಲೆ, ದೇವಸ್ಥಾನಗಳಲ್ಲಿಯೇ ಹೆಚ್ಚಿನ ದಾಳಿ ನಡೆದಿರುವುದು ಕಂಡುಬಂದಿದೆ.

    ಕರೊನಾ ಬಂದ ಮೇಲೆ ಮಟ್ಕಾ ದಂಧೆಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿದ್ದು, ಅಂದರ್ ಬಾಹರ್ ಜೂಜಾಟ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. ಮಟ್ಕಾದಂತೆ ಇದರಲ್ಲಿಯೂ ಹತ್ತಾರು ಸಾವಿರ ರೂ. ಹಣವನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳ ನೆಮ್ಮದಿಯೂ ಹಾಳಾಗುತ್ತಿದೆ.

    ಬಂಧಿಸಲು ಪೊಲೀಸರ ಹಿಂದೇಟು: ಲಾಕ್​ಡೌನ್​ನಿಂದಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ನ್ಯಾಯಾಧೀಶರ ಎದುರು ಆರೋಪಿಗಳನ್ನು ಹಾಜರುಪಡಿಸುವ ಮುನ್ನ ಕೋವಿಡ್ ಟೆಸ್ಟ್ ಆಗಿರಬೇಕು. ಟೆಸ್ಟ್ ರಿಪೋರ್ಟ್ ಬರುವವರೆಗೆ ಆರೋಪಿಗಳನ್ನು ಎಲ್ಲಿಟ್ಟುಕೊಳ್ಳಬೇಕು ಎಂಬುದು ಪೊಲೀಸರ ಪ್ರಶ್ನೆಯಾಗಿದೆ. ಅಲ್ಲದೆ, ಜೈಲಿನಲ್ಲೂ ಹೆಚ್ಚಿನ ಸಂಖ್ಯೆಯ ವಿಚಾರಣಾಧೀನ ಕೈದಿಗಳನ್ನು ಕರೊನಾ ಹಿನ್ನೆಲೆಯಲ್ಲಿ ಇಡಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಇದರಿಂದಾಗಿ ಜೂಜಾಟದಲ್ಲಿ ತೊಡಗಿದ್ದ ಸಮಯದಲ್ಲಿ ದಾಳಿ ನಡೆಸಿರುವ ಪೊಲೀಸರು ಅವರನ್ನು ನೇರವಾಗಿ ಹಿಡಿಯಲು ಹಿಂದೇಟು ಹಾಕಿದ ಪರಿಣಾಮ ಅನೇಕರು ಅಲ್ಲಿಂದ ಪರಾರಿಯಾಗಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಯ ಸತತ ದಾಳಿಯ ನಡುವೆಯೂ ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಬಿದ್ದಿಲ್ಲ.

    ಲಾಕ್​ಡೌನ್ ಆದೇಶ ಅನುಷ್ಠಾನದೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಯುವ ನಿಟ್ಟಿನಲ್ಲೂ ಇಲಾಖೆ ಗಮನಹರಿಸಿದೆ. ಲಾಕ್​ಡೌನ್ ಅವಧಿಯಲ್ಲಿ ಜೂಜಾಟ ಆಡುತ್ತಿರುವವರ ಸಂಖ್ಯೆ ಹೆಚ್ಚಿದ್ದು, ನಿತ್ಯವೂ ಅನೇಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜೂಟಾಟ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲಿಯಾದರೂ ಜೂಜಾಟ ಕಂಡುಬಂದ ಕೂಡಲೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
    | ಕೆ.ಜಿ. ದೇವರಾಜ್ ಪೊಲೀಸ್ ವರಿಷ್ಠಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts