More

    ಕೆನೋಪಿ ವಾಕ್​ಗೆ ಹೊಸ ರೂಪ

    ಯು. ಎಸ್. ಪಾಟೀಲ ದಾಂಡೇಲಿ

    ರಾಜ್ಯದ ಪಶ್ಚಿಮ ಘಟ್ಟದಲ್ಲಿ ಸುಂದರ ನಿಸರ್ಗದ ನಡುವೆ ಉದ್ಘಾಟನೆಗೊಂಡ ದೇಶದ ಮೊಟ್ಟಮೊದಲ ಕೆನೋಪಿ ವಾಕ್ 20 ದಿನಗಳಲ್ಲೇ ಬಾಗಿಲು ಮುಚ್ಚುವ ಮೂಲಕ ಹಿನ್ನಡೆ ಅನುಭವಿಸಿತ್ತು. ಈಗ ಅರಣ್ಯ ಇಲಾಖೆಯು ಸ್ಥಳೀಯ ಜನರನ್ನು ಒಳಗೊಂಡ ವಿನೂತನ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಮತ್ತೆ ಕೆನೋಪಿ ವಾಕ್​ಗೆ ಚಾಲನೆ ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.

    ಮಲೇಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ಕೆನೋಪಿ ವಾಕ್ ಪ್ರವಾಸೋದ್ಯಮ ಪ್ರಸಿದ್ಧವಾಗಿದೆ. ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಆಡಳಿತದಿಂದ 84 ಲಕ್ಷ ರೂ. ವೆಚ್ಚದಲ್ಲಿ 2018ರ ಫೆಬ್ರವರಿ 18ರಂದು ಜೊಯಿಡಾ ತಾಲೂಕಿನ ಕ್ಯಾಸಲ್​ರಾಕ್ ಸಮೀಪದ ಕುವೇಶಿ ಗ್ರಾಮದ ಬಳಿ ಅಂದಿನ ಅರಣ್ಯ ಸಚಿವ ರಮಾನಾಥ ರೈ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದರು.

    ದಟ್ಟ ಕಾಡಿನಲ್ಲಿ 30ರಿಂದ 40 ಅಡಿ ಎತ್ತರದ ಮರಗಳ ನಡುವೆ ರೋಪ್​ಕಟ್ಟಿ ತೂಗು ಸೇತುವೆ ನಿರ್ವಿುಸಲಾಗಿದೆ. ನಡು, ನಡುವೆ ಅಲ್ಯೂಮಿನಿಯಂ ಹಾಗೂ ಸ್ಥಳೀಯ ಮರಮಟ್ಟು ಬಳಸಿ ಫ್ಲಾಟ್​ಫಾಮ್ರ್ ನಿರ್ವಿುಸಲಾಗಿದೆ. ಹಕ್ಕಿಗಳ ವೀಕ್ಷಣೆಗೆ ಪ್ರಶಸ್ತವಾಗುವಂತೆ ಛಾವಣಿ ರೂಪಿಸಲಾಗಿದೆ.

    ಮರಗಳ ಮೇಲೆ ರೂಪಿಸಲಾದ 240 ಮೀಟರ್ ಉದ್ದದ ಸೇತುವೆ ಮೇಲೆ ಒಮ್ಮೆಗೆ 10 ಜನ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪರಿಸರ ಹಾಗೂ ಪಕ್ಷಿ ವೀಕ್ಷಣೆಗೆ ಎರಡು ಫ್ಲಾಟ್​ಫಾಮರ್್​ಗಳಿದ್ದು, ಒಂದೊಂದು ಪ್ಲಾಟ್​ಫಾಮರ್್​ನಲ್ಲಿ ಇಬ್ಬರು ಪ್ರವಾಸಿಗರು ಪ್ರತ್ಯೇಕವಾಗಿ ನಿಂತು ಇಡೀ ಪರಿಸರ ವೀಕ್ಷಿಸಲು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಆರಂಭಗೊಂಡ 20 ದಿನಗಳಲ್ಲೇ ಮುಚ್ಚಿದ್ದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದಾದ ಕನಸಿನ ಯೋಜನೆಗೆ ಹಿನ್ನಡೆ ಉಂಟಾಗಿದೆ.

    ಅರಣ್ಯ ಇಲಾಖೆಯ ಕೆನೋಪಿ ವಾಕ್ ಪಿಕ್ ಅಪ್ ಕ್ಯಾಂಪ್ ಪಾಯಿಂಟ್​ನಿಂದ ಕುವೇಶಿ ಗ್ರಾಮದವರೆಗೆ 10 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರು ಬೇಡಿಕೆಯಾಗಿದೆ. ಈ ಬೇಡಿಕೆ ಮುಂದಿಟ್ಟು ಗ್ರಾಮಸ್ಥರು ಕೆನೋಪಿ ವಾಕ್​ಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಈ ಯೋಜನೆ ಸ್ಥಗಿತಗೊಂಡಿತ್ತು. ಗ್ರಾಮಸ್ಥರ ಬೇಡಿಕೆಯಂತೆ ಗುಣಮಟ್ಟದ ರಸ್ತೆ ನಿರ್ವಿುಸಲು ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಅರಣ್ಯ ಇಲಾಖೆಯ ಅನುಮತಿ ಪಡೆದು, ಗ್ರಾಮಸ್ಥರೊಡನೆ ರ್ಚಚಿಸಿ ರಸ್ತೆ ಕಾರ್ಯ ಆರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಕೆನೋಪಿ ಯೋಜನೆ ಉದ್ಘಾಟನೆಗೊಂಡು ಬರುವ ಫೆ. 18ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಇಷ್ಟ್ಟೊಳಗೆ ಪುನರಾರಂಭವಾಗಬೇಕು ಎಂಬುದು ಬಹು ಜನರ ಆಸೆಯಾಗಿದೆ.

    ಇಡಿಸಿಗೆ ಹೆಚ್ಚಿನ ಆದ್ಯತೆ: ಈ ಮೊದಲು ಕೆನೋಪಿ ವಾಕ್ ಪಿಕ್ ಅಪ್ ಕ್ಯಾಂಪ್ ಪಾಯಿಂಟ್​ನಿಂದ ಆರಂಭದ ಪಾಯಿಂಟ್​ವರೆಗೆ 13 ಕಿ.ಮೀ. ವರೆಗೆ ಅರಣ್ಯ ಮಧ್ಯದಲ್ಲಿ ಕುವೇಶಿ ಗ್ರಾಮ ದಾಟಿ ನೇರವಾಗಿ ಪ್ರವಾಸಿಗರು ಖಾಸಗಿ ವಾಹನದಲ್ಲಿ ಪ್ರವೇಶಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ, ಹೊಸ ಯೋಜನೆಯಂತೆ ಗ್ರಾಮದ ಕುವೇಶಿ ಪರಿಸರ ಅಭಿವೃದ್ಧಿ ಸಮಿತಿಗೆ (ಇಡಿಸಿ) ಹೆಚ್ಚಿನ ಆದ್ಯತೆ ನೀಡಲಾಗುವುದು. ಗ್ರಾಮದ ಯುವಕ, ಯುವತಿಯರಿಗೆ ಉದ್ಯೋಗ ಹಾಗೂ ಆದಾಯ ದೊರಕಿಸಿಕೊಡುವ ದೃಷ್ಟಿಯಿಂದ ಪ್ರವಾಸಿಗರನ್ನು ಇಡಿಸಿಯ ವಾಹನಗಳಿಂದ 10 ಕಿ.ಮೀ.ಗಳವರೆಗೆ 10 ಜನರ ಒಂದು ತಂಡದಂತೆ ಕರೆದುಕೊಂಡು ಬರಲಾಗುವುದು. ಕೆನೋಪಿ ವಾಕ್​ಗೆ ಬರುವ ಪ್ರವಾಸಿಗರಿಗೆ ಇಡಿಸಿಯಿಂದಲೇ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಟ್ಟು, ಸಮಿತಿಯಿಂದ ಒಬ್ಬ ಪರಿಣತ ವ್ಯಾಖ್ಯಾನಕಾರನು (ಅಠಿಜಿಟಟ್ಚಜಜ್ಞಿಜ ಟಟಜ್ಞಿಠಿ ್ಚಞಟ) ಪ್ರವಾಸಿಗರನ್ನು 3 ಕಿ.ಮೀ. ದೂರ ವಿರುವ ಕೆನೋಪಿ ವಾಕ್ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ, ದಾರಿಗುಂಟ ಗಿಡ, ಮರ, ಪಶು, ಪಕ್ಷಿ ಹಾಗೂ ವನ್ಯ ಜೀವಿಗಳ ಬಗ್ಗೆ ಮಾಹಿತಿ ನೀಡುತ್ತ ಕೆನೋಪಿ ವಾಕ್ ಪೂರ್ಣಗೊಳಿಸುವ ಕಾರ್ಯಕ್ಕೆ ನಿಯೋಜಿಸ ಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಸ್ತು ರಾಜ ಡಿ ತಿಳಿಸಿದ್ದಾರೆ.

    ಕೆನೋಪಿ ವಾಕ್ ಇದೊಂದು ಅನನ್ಯ ಪ್ರಯೋಗವಾಗಿದೆ. ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವುದು, ಯುವಕರಿಗೆ ಉದ್ಯೋಗ, ಗ್ರಾಮಸ್ಥರನ್ನು ಸ್ವಾವಲಂಬಿ ಮಾಡುವುದು ಮತ್ತು ಸರ್ಕಾರಕ್ಕೆ ಆದಾಯ ಒದಗಿಸುವುದು ಇದರ ಉದ್ದೇಶವಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದ್ದು, ಶೀಘ್ರವೇ ಕೆನೋಪಿ ವಾಕ್ ಅನ್ನು ಆರಂಭಿಸಲಾಗುವುದು.
    | ಆರ್.ವಿ. ದೇಶಪಾಂಡೆ ಶಾಸಕರು

    ಕೆನೋಪಿ ವಾಕ್ ಹೊಸ ನೀತಿ ಪರಿಸರ ಪ್ರೇಮಿಯಾಗಿದ್ದು, ಅರಣ್ಯದಲ್ಲಿ ವಾಹನಗಳ ಸಂಚಾರ ಕಡಿಮೆಗೊಳಿಸಿ ಪ್ರವಾಸಿಗರಿಗೆ ವನ್ಯಜೀವಿ ಹಾಗೂ ಅರಣ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಸಿಕೊಡುವಲ್ಲಿ ಹೆಚ್ಚು ಸಹಾಯಕವಾಗಲಿದೆ. ಈ ಯೋಜನೆಯು ವಾಣಿಜ್ಯ ವ್ಯಾಪ್ತಿಯ ಚಟುವಟಿಕೆಗಳನ್ನು ಪೋತ್ಸಾಹಿಸದೆ, ಗ್ರಾಮಸ್ಥರ ಅನುಕೂಲತೆಗಾಗಿ ಹಾಗೂ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ.
    | ಮಾರಿಯಾ ಕ್ರಿಸ್ತುರಾಜ ಡಿ.
    ಉಪ ಅರಣ್ಯ ಸಂರಕ್ಷಣಾಧಿಕಾರಿ ದಾಂಡೇಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts