More

    ಕೆಜಿ ತೂಗುವ ಸೀಬೆ ಹಣ್ಣು

    ಕೋಲಾರ: ಕೃಷಿ ಭೂಮಿ ರೈತನ ಪ್ರಯೋಗಶಾಲೆ, ಅದರಲ್ಲೂ ಕೋಲಾರದ ರೈತರು ಹೊಸ ಪ್ರಯತ್ನದ ಮೂಲಕ ಗಮನ ಸೆಳೆಯುತ್ತಿದ್ದು, ತಾಲೂಕಿನ ಉರುಟಿ ಅಗ್ರಹಾರ ಗ್ರಾಮದ ಅಂಬರೀಷ್ ತೈವಾನ್ ಪಿಂಕ್ ಸೀಬೆ ಬೆಳೆದು ಬಂಪರ್ ಫಸಲು ಪಡೆದಿದ್ದಾರೆ.

    ಹೆಚ್ಚು ನೀರು ಬಯಸದ ಸೀಬೆ ಬಯಲುಸೀಮೆಗೆ ಹೇಳಿ ಮಾಡಿಸಿದ ಬೆಳೆ. ಆದರೆ ಮಾವು, ರೇಷ್ಮೆ, ಟೊಮ್ಯಾಟೊ ಇನ್ನಿತರ ತೋಟಗಾರಿಕೆ ಬೆಳೆ ಬೆಳೆಯುವವರೇ ಹೆಚ್ಚು. ಸೀಬೆ ಬೆಳೆಯುವವರು ಕಡಿಮೆಯಿದ್ದರೂ ಸ್ಥಳೀಯ ತಳಿಗಳನ್ನು ಬೆಳೆದಿದ್ದಾರೆ. ರೇಷ್ಮೆ ಕೃಷಿಗೆ ಹಿಪ್ಪುನೇರಳೆ ಬೆಳೆಯುತ್ತಿದ್ದ ಅಂಬರೀಷ್ ವರ್ಷದ ಹಿಂದೆ ಒಂದೂವರೆ ಎಕರೆಯಲ್ಲಿ 2.50 ಲಕ್ಷ ರೂ. ವೆಚ್ಚ ಮಾಡಿ ತೈವಾನ್ ಪಿಂಕ್ ತಳಿಯ 1400 ಸೀಬೆ ಸಸಿಗಳನ್ನು ನಾಟಿ ಮಾಡಿ ಹನಿ ನೀರಾವರಿ ಕಲ್ಪಿಸಿಕೊಂಡಿದ್ದಾರೆ. ಸೀಬೆ ಗಿಡ ಕಾಯಿ ಬಿಟ್ಟು ತಾಳಿಕೊಳ್ಳುವ ಸಾಮರ್ಥ್ಯ ಬರುವವರೆಗೆ ಅಂದರೆ ಕಳೆದ 9 ತಿಂಗಳ ಕಾಲ ಪಿಂದೆಯನ್ನು ಕಿತ್ತು ಹಾಕಿದ್ದು, ಎರಡು ತಿಂಗಳ ಹಿಂದಷ್ಟೇ ಪಿಂದೆಗಳನ್ನು ಉಳಿಸಿಕೊಂಡಿದ್ದಾರೆ.

    ಸೀಬೆಗಳನ್ನು ಊಜಿನೊಣ, ಕೀಟಗಳಿಂದ ರಕ್ಷಿಸಿಕೊಳ್ಳಲು ಪಿಂದೆ ಗೋಲಿ ಆಕಾರದಲ್ಲಿ ಇರುವಾಗಲೇ ಸ್ಪಾಂಜ್ ಹಾಕುತ್ತಿದ್ದು, ಕಾಯಿ ಹಾಳಾಗುವ ಸಂದರ್ಭ ಕಡಿಮೆ. ಪಕ್ಷಿಗಳ ಕಾಟದಿಂದಲೂ ಹಣ್ಣು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ.

    ಕೆಜಿ ತೂಗುತ್ತಿದೆ ಕಾಯಿ: ಸಾಮಾನ್ಯವಾಗಿ ಸೀಬೆ ಹಣ್ಣು 100ರಿಂದ 250 ಗ್ರಾಂ ತೂಗಿದರೆ ಹೆಚ್ಚು. ತೈವಾನ್ ಪಿಂಕ್ ತಳಿಯ ಪ್ರತಿ ಹಣ್ಣು ಕನಿಷ್ಠ 800 ಗ್ರಾಂ ನಿಂದ 1 ಕೆಜಿ ಮೇಲ್ಪಟ್ಟು ತೂಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 80ರಿಂದ 90 ರೂ. ಇದ್ದು, ಉತ್ತಮ ಬೇಡಿಕೆ ವ್ಯಕ್ತವಾಗಿದೆ.

    ಸೀಬೆ ಬೆಳೆಯಲ್ಲಿ ವರ್ಷಕ್ಕೆ ಎರಡು ಫಸಲು ಪಡೆಯಬಹುದು. ಫಸಲು ಬಂದಾಗ ವಾರಕ್ಕೆ ಒಂದು ಬಾರಿ ಇಳುವರಿ ಕಟಾವು ಸಿಗುತ್ತದೆ. ಈಗಾಗಲೆ ಅಂಬರೀಷ್ ಎರಡು ಬಾರಿ ಸೀಬೆ ಫಸಲನ್ನು ಸ್ಯಾಂಪಲ್ ಆಗಿ ಕಟಾವು ಮಾಡಿದ್ದಾರೆ. ರಾಮನಗರ, ಕನಕಪುರದ ವ್ಯಾಪಾರಸ್ಥರು ಬಂದು ಫಸಲು ಖರೀದಿಸಿಕೊಂಡು ಹೋಗಿದ್ದಾರೆ. ಸೀಬೆ ಹಣ್ಣನ್ನು ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ತುಂಬಿಸಿ ಬೆಂಗಳೂರಿನ ಮಾರುಕಟ್ಟೆಯಲ್ಲೂ ಮಾರಾಟ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಜಿಲ್ಲೆಯಲ್ಲಿ ಟೊಮ್ಯಾಟೊ, ಮಾವು ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾ ಬಂದಿರುವ ಸಂದರ್ಭದಲ್ಲಿ ರೈತ ಅಂಬರೀಷ್ ತೈವಾನ್ ಪಿಂಕ್ ಸೀಬೆ ಬೆಳೆಯುವ ಹೊಸ ಪ್ರಯತ್ನದಲ್ಲೇ ಸೈ ಎನಿಸಿಕೊಂಡಿದ್ದು, ತೋಟಗಾರಿಕೆ ಇಲಾಖೆಯ ಗಮನ ಸೆಳೆದಿದ್ದಾರೆ.

    ರೇಷ್ಮೆ ಬೆಲೆ ಕುಸಿದ ಸಂದರ್ಭದಲ್ಲಿ ಪರ‌್ಯಾಯ ಬೆಳೆಯತ್ತ ಯೋಚನೆ ಮಾಡಿದಾಗ ಸೀಬೆ ತೈವಾನ್ ಪಿಂಕ್ ತಳಿಯ ಬಗ್ಗೆ ಮಾಹಿತಿ ದೊರೆಯಿತು. ನರ್ಸರಿಯಿಂದ ಸಸಿ ತಂದು ನೆಟ್ಟು ಬೆಳೆಸಿದ್ದೇನೆ, ವರ್ಷಕ್ಕೆ ಒಂದು ಎಕರೆಗೆ ಸುಮಾರು 10 ಟನ್ ಇಳುವರಿಯ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇದೆ.
    ಅಂಬರೀಷ್, ಉರಟಿ ಅಗ್ರಹಾರ ರೈತ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts