More

    ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಳೆ

    ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವವನ್ನು ಫೆ. 27ರಂದು ಬೆಳಗ್ಗೆ 11 ಗಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸಿ ವಿವಿಧ ಪದವಿ ಪ್ರದಾನ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ. ಅಶುತೋಷ ಶರ್ಮಾ ಅವರು ವರ್ಚುವಲ್ ವೇದಿಕೆಯಲ್ಲಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ಹೇಳಿದರು.

    ಕೃಷಿ ವಿವಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 890 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು. 789 ಅಭ್ಯರ್ಥಿಗಳು ಹಾಜರಾತಿ ಹಾಗೂ 104 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ಪದವಿ ಸ್ವೀಕರಿಸುವರು. ಕೃಷಿ 202, ಅರಣ್ಯ 3, ಗೃಹವಿಜ್ಞಾನ 15, ಎಂಬಿಎ (ಕೃಷಿ ವ್ಯವಹಾರ ಹಾಗೂ ನಿರ್ವಹಣೆ) 9, ಆಹಾರ ತಾಂತ್ರಿಕತೆ 3 ಸೇರಿ 232 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು. 40 ಅಭ್ಯರ್ಥಿಗಳಿಗೆ ಪಿಎಚ್. ಡಿ ಹಾಗೂ 38 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದರು.

    ಚಿನ್ನದ ಹುಡುಗ ಜಯಂತ: ಹನುಮನಮಟ್ಟಿಯ ಕೃಷಿ ಮಹಾವಿದ್ಯಾಲಯದ ಬಿಎಸ್.ಸಿ (ಕೃಷಿ) ವಿದ್ಯಾರ್ಥಿ ಜಯಂತ ಕಲ್ಲುಗುಡಿ 4 ವರ್ಷಗಳ ಕೃಷಿ ಸ್ನಾತಕ ಪದವಿಯಲ್ಲಿ 9.26 ಒಜಿಪಿಎ ಅಂಕ ಗಳಿಸಿ ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾರೆ. ಜಯಂತ ಕೃಷಿ ವಿವಿ ಚಿನ್ನದ ಪದಕ, ಸೀತಾರಾಂ ಜಿಂದಾಲ ಫೌಂಡೇಷನ್​ನ ಚಿನ್ನದ ಪದಕ ಹಾಗೂ ದಿ. ಪ್ರೊ. ಆರ್.ಎಫ್. ಪಾಟೀಲ ಸ್ಮಾರಕ ನಗದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ಡಾ. ಚೆಟ್ಟಿ ತಿಳಿಸಿದರು.

    ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್​ನ ಕೃಷಿ ಶಿಕ್ಷಣ ವಿಭಾಗವು ಘೋಷಿಸಿದ ಕೃಷಿ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್​ನಲ್ಲಿ ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿವಿ 9ನೇ ಹಾಗೂ ಸತತ 2 ವರ್ಷ ಪ್ರಥಮ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯವು ಗೋಧಿ, ಸಜ್ಜೆ, ಸಿಹಿ ಗೋವಿನಜೋಳ, ಶೇಂಗಾ, ಸೋಯಾಅವರೆ, ಸಾಸಿವೆ, ಹತ್ತಿಯ ಹೊಸ ತಳಿಗಳನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದೆ. ಗುಣಮಟ್ಟದ ಬೀಜಗಳನ್ನು ಉತ್ಪಾದಿಸುವ ಮೂಲಕ ರೈತ ಸಮುದಾಯಕ್ಕೆ ನೆರವಾಗುತ್ತಿದೆ. 2020ರ ಜನವರಿಯಲ್ಲಿ ಬೃಹತ್ ಕೃಷಿ ಮೇಳ ಆಯೋಜಿಸಲಾಗಿತ್ತು. ಅಂದಾಜು 5.10 ಲಕ್ಷ ಜನ ಪಾಲ್ಗೊಂಡು ಮೇಳದ ಪ್ರಯೋಜನ ಪಡೆದಿದ್ದಾರೆ. ಸಮುದಾಯ ಬಾನುಲಿ ಕೇಂದ್ರವು 4902 ಕೃಷಿ ಕಾರ್ಯಕ್ರಮ ರೂಪಿಸಿ ಬಿತ್ತರಿಸಿದೆ ಎಂದರು. ಕೃಷಿ ವಿವಿ ಕುಲಸಚಿವ ರಮೇಶ ದೇಸಾಯಿ, ಸಂಶೋಧನೆ ನಿರ್ದೇಶಕ ಡಾ. ಪಿ.ಎಲ್. ಪಾಟೀಲ, ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts