More

    ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ವಿರೋಧ; ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ

    ಸಾಗರ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನೀತಿಯನ್ನು ಕೈಬಿಡುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕೃಷಿಕರು ಸೋಮವಾರ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
    ರೈತ ಸಂಘದ ತಾಲೂಕು ಅಧ್ಯಕ್ಷ ಅರುಣ ಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಪರವಾಗಿ ಬರೀ ಡೊಂಗಿ ಮಾತುಗಳನ್ನು ಆಡುತ್ತಿವೆ. ಅವರ ಕೆಲಸ ರೈತ ವಿರೋಧಿಯಾಗಿದೆ. ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಮೂಲಕ ರೈತರ ಬದುಕಿನ ಮೇಲೆ ಬರೆ ಎಳೆಯಲು ಮುಂದಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಯುತ್ತಿದೆ. ಪಂಪ್‌ಸೆಟ್ ಹೊಂದಿರುವ ರೈತರ ಮನೆಗಳಿಗೆ ಸಿಮ್‌ಕಾರ್ಡ್‌ಗೆ ರೀಚಾರ್ಜ್ ಮಾಡುವ ರೀತಿಯಲ್ಲಿ ಹಣ ಭರ್ತಿ ಮಾಡುವ ಯೋಜನೆ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕ್ರಮ ಅವೈಜ್ಞಾನಿಕವಾಗಿದೆ. ಇದರಿಂದ ರೈತರ ಮೇಲಿನ ಶೋಷಣೆ ಹೆಚ್ಚುತ್ತದೆ. ತಕ್ಷಣ ಸರ್ಕಾರ ಮೀಟರ್ ಅಳವಡಿಸುವ ಹುನ್ನಾರ ಕೈಬಿಡಬೇಕು ಎಂದು ಆಗ್ರಹಿಸಿದರು.
    ಎಲೆ ಚುಕ್ಕಿ ಮತ್ತು ಕೊಳೆ ರೋಗದ ಭಾದೆಯಿಂದ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ರೈತ ಸಂಘದ ಗೌರವಾಧ್ಯಕ್ಷ ಗುರುಮೂರ್ತಿ ಮಾತನಾಡಿ, ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ನಮಗೆ ವೈಜ್ಞಾನಿಕ ಬೆಲೆ ಕೊಡಿ. ಸಬ್ಸಿಡಿ ಬೇಡ ಎಂದು ಸರ್ಕಾರವನ್ನು ಒತ್ತಾಯಿಸಿಕೊಂಡು ಬರುತ್ತಿದ್ದೇವೆ. ಈತನಕ ಸರ್ಕಾರ ಅದರ ಬಗ್ಗೆ ಗಮನ ಹರಿಸಿಲ್ಲ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಏಳು ಎಚ್.ಪಿ.ವರಗೆ ಉಚಿತ ವಿದ್ಯುತ್ ನೀಡುತ್ತಿದ್ದರು. ಈಗಿನ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ ಶೋಷಣೆ ಮಾಡಲು ಹೊರಟಿದೆ. ರೈತರ ಮೀಟರ್ ತೆಗೆಯಲು ಮುಂದಾದರೆ ಉಗ್ರವಾದ ಪ್ರತಿಭಟನೆ ಮಾಡುವುದು ಅನಿರ್ವಾಯವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts