More

    ಕೃಷಿ ಚಟುವಟಿಕೆಗೆ ಕುದುರೆ ಆಧಾರ !

    ಸಂಶಿ: ಕೃಷಿ ಚಟುವಟಿಕೆ ನಿರ್ವಹಣೆಗೆ ಎತ್ತು, ಟ್ರ್ಯಾಕ್ಟರ್ ಉಪಯೋಗಿ ಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಅಂಗವಿಕಲ ರೈತ ಕುದುರೆಗಳಿಂದ ಕೃಷಿ ಕಾಯಕ ಮಾಡುತ್ತಿದ್ದಾರೆ.

    ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಮಹಾದೇವಪ್ಪ ಬಾಗಣ್ಣವರ ಅವರು ಅಂಗವೈಕಲ್ಯವನ್ನು ಮೆಟ್ಟಿ ನಿಂತು ಕುದುರೆಗಳ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಬಾಗಣ್ಣವರ ಅವರ ಎಡಗಾಲು ಸ್ವಾಧೀನದಲ್ಲಿಲ್ಲ.

    ದುಬಾರಿ ಬಾಡಿಗೆ ಹಣ ನೀಡಿದರೂ ನಿಗದಿತ ಸಮಯಕ್ಕೆ ಜೋಡೆತ್ತು ಸಿಗುವುದಿಲ್ಲ. ಇದರಿಂದಾಗಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಕೃಷಿ ಕಾರ್ಯಗಳಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಮನೆಯಲ್ಲಿದ್ದ ಕುದುರೆ ಜತೆಗೆ ಮತ್ತೊಂದು ಕುದುರೆ ಖರೀದಿಸಿ ಕೃಷಿ ಕಾಯಕ ಮಾಡುತ್ತಿದ್ದಾರೆ. ಎಡೆ ಹೊಡೆಯುವುದು, ಕ್ರಿಮಿನಾಶಕ ಸಿಂಪಡಣೆ, ಗೊಬ್ಬರ ಹಾಕುವುದು, ಬಣವೆ ಒಟ್ಟುವುದು, ಉತ್ಪನ್ನಗಳನ್ನು ಮನೆಗೆ ಸಾಗಿಸಲು ಕುದುರೆಗಳನ್ನೇ ಬಳಸುತ್ತಿದ್ದಾರೆ. ಎಡೆಹೊಡೆಯಲು ಪ್ರತ್ಯೇಕವಾಗಿ ಎಡೆ ಕುಂಟೆ ಮಾಡಿಸಿದ್ದಾರೆ. ನೊಗಕ್ಕೆ ಕುದುರೆಗಳನ್ನು ಕಟ್ಟಿ ಎಡೆ ಹೊಡೆಯುತ್ತಾರೆ. ಇದು ಎತ್ತಿನ ಗಳೆಗಿಂತಲೂ ಉತ್ತಮವಾಗಿದೆ ಎನ್ನುತ್ತಾರೆ ರೈತ ಮಹಾದೇವಪ್ಪ.

    ಬೆಳೆಗಳಿಗೆ ಔಷಧ ಸಿಂಪಡಣೆ ಸಂದರ್ಭದಲ್ಲಿ ಕುದುರೆಯ ಎಡಕ್ಕೊಂದು, ಬಲಕ್ಕೊಂದು ಕ್ಯಾನ್ ಕಟ್ಟಿ, ಅದರ ಮೇಲೆ ಮಹಾದೇವಪ್ಪ ಕುಳಿತು ಹಾಗೂ ಪಕ್ಕದಲ್ಲಿ ಕುಟುಂಬದ ಸದಸ್ಯರೊಬ್ಬರು ಕ್ರಿಮಿನಾಶಕ ಸಿಂಪಡಿಸುತ್ತಾರೆ. ಇನ್ನೊಂದು ವಿಶೇಷವೆಂದರೆ, ಕೂಲಿ ಕಾರ್ವಿುಕರನ್ನು ಬಳಸಿಕೊಳ್ಳದೆ ಕೃಷಿ ಕಾರ್ಯಗಳನ್ನು ಕುಟುಂಬದ ಸದಸ್ಯರೇ ನಿರ್ವಹಿಸುತ್ತಾರೆ. ಇದರಿಂದ ಕುಟುಂಬಕ್ಕೆ ಒಂದಿಷ್ಟು ಆದಾಯ ಉಳಿತಾಯವಾಗುತ್ತದೆ. ಸಾಧ್ಯವೇ ಇಲ್ಲ ಎಂದುಕೊಂಡರೆ ಭವಿಷ್ಯದಲ್ಲಿ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ ಸಿಗುತ್ತದೆ ಎಂಬ ಹಾದಿಯಲ್ಲಿ ಸಾಗುತ್ತಿದೆ ರೈತ ಮಹಾದೇವಪ್ಪ ಬಾಗಣ್ಣವರ ಅವರ ಕುದುರೆಯಾಧಾರಿತ ಕೃಷಿ.

    ಕೃಷಿ ಚಟುವಟಿಕೆಗೆ ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಎತ್ತುಗಳು ದೊರೆಯುವುದಿಲ್ಲ. ದೊರೆತರೂ ಜೋಡೆತ್ತಿಗೆ ದುಬಾರಿ ಬಾಡಿಗೆ ನೀಡಬೇಕಾಗುತ್ತದೆ. ಮೇಲಾಗಿ ನನಗೆ ಎತ್ತಿನ ಹಿಂದೆ ಅಡ್ಡಾಡಲು ಆಗುವುದಿಲ್ಲ. ಹಾಗಾಗಿ ಕುದುರೆ ಮೇಲೆ ಕುಳಿತುಕೊಂಡೇ ಎಡೆ ಹೊಡೆಯುವುದು, ಕ್ರಿಮಿನಾಶಕ ಸಿಂಪಡಿಸುವುದು ಸೇರಿ ಕೃಷಿ ಕೆಲಸಗಳನ್ನು ಮಾಡುತ್ತೇನೆ. ನನ್ನ ಕೃಷಿ ಜೀವನದಲ್ಲಿ ಕುದುರೆಗಳು ಬಹಳಷ್ಟು ಸಹಕಾರಿಯಾಗಿವೆ.

    | ಮಹಾದೇವಪ್ಪ ಬಾಗಣ್ಣವರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts