More

    ಕೃಷಿಕರ ಕುಟುಂಬಕ್ಕೆ ಹೊಸ ದಿಕ್ಕು, ಶಕ್ತಿ ತರುವೆ

    ಶಿರಸಿ: ಬರುವ ಐದು ವರ್ಷಗಳಲ್ಲಿ ಬನವಾಸಿ, ಮುಂಡಗೋಡ ಮತ್ತು ಯಲ್ಲಾಪುರ ಭಾಗದ 50 ಸಾವಿರ ಎಕರೆಗೂ ಅಧಿಕ ಕೃಷಿ ಕ್ಷೇತ್ರವನ್ನು ನೀರಾವರಿ ಪ್ರದೇಶನ್ನಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನ ಬನವಾಸಿಯಲ್ಲಿ ಭಾನುವಾರ ಜರುಗಿದ ಕದಂಬೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರವನ್ನು ನೀರಾವರಿ ಮಾಡುವ ಮೂಲಕ ರೈತರ ಬದುಕಿಗೆ ಶಕ್ತಿ ನೀಡುವ ಕೆಲಸಕ್ಕೆ ಕೈ ಹಾಕಿದ್ದೇನೆ. ಇದರಿಂದ ಕೃಷಿಕರ ಕುಟುಂಬಕ್ಕೆ ಹೊಸ ದಿಕ್ಕು, ಶಕ್ತಿ ಬರಲಿದೆ ಎಂದರು. ಬನವಾಸಿ ಭಾಗದಲ್ಲಿ ವರದಾ ನದಿಯಿಂದ ವಿಫುಲವಾದ ನೀರು ಲಭ್ಯವಿದ್ದರೂ ಸಹ ಕಳೆದ 25 ವರ್ಷದಲ್ಲಿ 19 ವರ್ಷ ಬರಗಾಲವನ್ನು ಕಂಡಿದೆ. ಕಾರಣ ಬರಗಾಲ ರೈತನಿಂದ ದೂರ ಆಗಬೇಕು. ಅದಕ್ಕಾಗಿ ವರದಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದು 12 ಸಾವಿರಕ್ಕೂ ಅಧಿಕ ಎಕರೆ ಕೃಷಿ ಪ್ರದೇಶವನ್ನು ನೀರಾವರಿ ಮಾಡಲಾಗಿದ್ದು, ಇನ್ನೂ 10 ಸಾವಿರ ಎಕರೆ ಪ್ರದೇಶವನ್ನು ನೀರಾವರಿ ಮಾಡಲು ಚಾಲನೆ ನೀಡಲಾಗಿದೆ ಎಂದರು.

    ಜಿಲ್ಲೆಯಲ್ಲಿ ಕಾಳಿ, ವರದಾ, ಬೇಡ್ತಿ, ಶರಾವತಿ, ಅಘನಾಶಿನಿ ಸೇರಿ ಐದು ನದಿ ಇವೆ. ಆದರೆ, ಅದರ ಉಪಯೋಗವನ್ನು ಸರಿಯಾಗಿ ಪಡೆಯುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ. ಐದು ನದಿಗಳಿದ್ದರೂ ಇನ್ನೂ ಕುಡಿಯುವ ನೀರಿನ ಅಭಾವ ಇದ್ದು, ರೈತರು ಕೃಷಿ ಪ್ರದೇಶಕ್ಕೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಕಾರಣ ದೇಶಕ್ಕೆ ಅನ್ನ ಕೊಡುವ ರೈತರಿಗೆ ಹೆಚ್ಚಿನ ಶಕ್ತಿ ನೀಡುವುದು ಅಭಿವೃದ್ಧಿ ಎಂದು ನಾನು ಭಾವಿಸಿದ್ದು, ಅದರಿಂದ ಹಸಿರು ಕ್ರಾಂತಿಯೂ ಆಗುತ್ತದೆ ಎಂದರು.

    ಉತ್ತಮ ಸಂಘಟನೆ: ಖಾಸಗಿ ಆಚರಣೆಯ ಮೂಲಕ ಆರಂಭವಾದ ಕದಂಬೋತ್ಸವ 1994-95 ರಲ್ಲಿ ಅಧಿಕೃತ ಸರ್ಕಾರಿ ಉತ್ಸವ ಆಗಿ, ಈ ಬಾರಿ 25 ನೇ ವರ್ಷಾಚರಣೆಯನ್ನು ಪೂರೈಸಿದೆ. ಕಡಿಮೆ ಸಮಯದಲ್ಲಿ ಉತ್ತಮ ಸಂಘಟನೆ ಮಾಡಲಾಗಿದ್ದು, ಶ್ರೇಷ್ಠ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅದೇ ರೀತಿ ಮುಂದಿನ ವರ್ಷದಿಂದ ಮತ್ತಷ್ಟು ವಿಜೃಂಭಣೆಯಿಂದ, ಹೊಸತನದಿಂದ ಉತ್ಸವ ಆಚರಣೆ ಮಾಡಲಾಗುತ್ತದೆ ಎಂದು ಶಿವರಾಮ ಹೆಬ್ಬಾರ ತಿಳಿಸಿದರು.

    ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದೆ. ಜನರು ಎಚ್ಚೆತ್ತುಕೊಳ್ಳಬೇಕು. ಸರ್ಕಾರವೂ ಗಮನ ಹರಿಸಬೇಕು

    ಎಂದು ಒತ್ತಾಯಿಸಿದರು. ಅಲ್ಲದೆ, ಬನವಾಸಿಯಲ್ಲಿ ಇನ್ನಷ್ಟು ಸುಸ್ಥಿರವಾದ, ಕೆರೆಗಳ, ಅರಣ್ಯಗಳ ಅಭಿವೃದ್ಧಿ ಮಾಡಲು ಕದಂಬೋತ್ಸವ ಮುಂದಿನ ದಿನಗಳಲ್ಲಿ ಕಾರಣವಾಗಲಿ. ಆ ನಿಟ್ಟಿನಲ್ಲಿ ಕೆಲಸ ನಡೆಯಲಿ ಎಂದು ಹೇಳಿದರು.

    ಜಿಲ್ಲಾಡಳಿತದ ವತಿಯಿಂದ ನೂತನವಾಗಿ ಸಚಿವರಾದ ಶಿವರಾಮ ಹೆಬ್ಬಾರ ಅವರನ್ನು ಸಮ್ಮಾನಿಸಲಾಯಿತು. ಈ ವೇಳೆ ಶಿರಸಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಉಷಾ ಹೆಗಡೆ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಇದ್ದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸ್ವಾಗತಿಸಿದರು. ಅನುಪಮಾ ಭಟ್ಟ ನಿರೂಪಿಸಿದರು. ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts