More

    ಕುಸ್ತಿ ನಮ್ಮ ಸಂಸ್ಕೃತಿಯ ಪ್ರತೀಕ

    ಮಳವಳ್ಳಿ: ರಾಜರ ಕಾಲದಿಂದಲೂ ಪೋಷಣೆ ಮಾಡಿಕೊಂಡು ಬಂದಿರುವ ಗ್ರಾಮೀಣ ಕುಸ್ತಿ ಇಂದಿಗೂ ಮಹತ್ವ ಉಳಿಸಿಕೊಂಡು ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವುದು ಸಂತಸದ ಸಂಗತಿ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಸಿಡಿ ಹಬ್ಬದ ಅಂಗವಾಗಿ ಭಾನುವಾರ ಶ್ರೀರಾಮಾರೂಢ ಸ್ವಾಮಿ ಮಠದ ಹತ್ತು ಮಂದಿ ಗರಡಿ ಮನೆಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

    ಹಳ್ಳಿಗಾಡಿನ ಕ್ರೀಡೆಗಳು ಪ್ರಸ್ತುತ ಕಾಲಘಟ್ಟದಲ್ಲಿ ಮಾನ್ಯತೆ ಕಳೆದುಕೊಳ್ಳುತ್ತಿವೆ. ಗತವೈಭವ ಸಾರುವ ಕ್ರೀಡೆಗಳಲ್ಲಿ ಒಂದಾದ ಕುಸ್ತಿಯನ್ನು ವಿವಿಧ ವಯೋಮಾನದಡಿ ಪ್ರತ್ಯೇಕ ವಿಭಾಗದಲ್ಲಿ ತರಬೇತಿ ನೀಡಿ ಉಳಿಸಿಕೊಳ್ಳುವ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ಕುಸ್ತಿ ದೇಶೀಯ ಕ್ರೀಡೆಯಾಗಿದ್ದು, ಇದರಿಂದ ಯುವಕರು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಉತ್ಸವ, ಜಾತ್ರಾ ಮಹೋತ್ಸವಗಳಲ್ಲಿ ಕುಸ್ತಿಯ ಸೊಬಗನ್ನು ಸವಿಯಲು ಅವಕಾಶವಾಗುತ್ತಿದ್ದು, ಕುಸ್ತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರ ಜತೆಗೆ ಮುಂದಿನ ಪೀಳಿಗೆ ಪರಿಚಯಿಸುವ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.

    ಪಂದ್ಯಾವಳಿಯಲ್ಲಿ ಗುಡುಗೇರಿ ತಾಲೀಂ ಪೈ.ಪ್ರಕಾಶ್ ಪಾಟೀಲ್ ಇಂಗಳಗಿ ಮತ್ತು ದಾವಣಗೆರೆಯ ಸಮೀಶ್ ನಡುವೆ ನಡೆದ ಕುಸ್ತಿ ಕಾಳಗವು ಪ್ರೇಕ್ಷಕರಿಗೆ ರೋಮಾಂಚನವನ್ನುಂಟು ಮಾಡಿತು. ಅಂತಿಮವಾಗಿ ಪ್ರಕಾಶ್ ಪಾಟೀಲ್ ಇಂಗಳಗಿ ಪ್ರಥಮ ಸ್ಥಾನ ಪಡೆದುಕೊಂಡರು. ವಿವಿಧ ಜಿಲ್ಲೆಗಳಿಂದ 60 ಕುಸ್ತಿಪಟುಗಳು ಭಾಗವಹಿಸಿದ್ದರು. ನೆರೆದಿದ್ದವರು ಸಿಳ್ಳೆ ಹಾಕಿ ಕುಸ್ತಿಪಟುಗಳಿಗೆ ಪ್ರೋತ್ಸಾಹ ನೀಡಿದರು.
    ಮಾಜಿ ಶಾಸಕ ನರೇಂದ್ರಸ್ವಾಮಿ, ಬಿಜೆಪಿ ಮುಖಂಡ ಮುನಿರಾಜು, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ , ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಮುಖಂಡರಾದ ನಾರಾಯಣ್ಣ, ಕಂಬರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts