More

    ಕುವೆಂಪು ವಿವಿಯಲ್ಲಿ ದೂರಶಿಕ್ಷಣ ಮುಂದುವರಿಸಿ

    ಶಿವಮೊಗ್ಗ: ಕುವೆಂಪು ವಿವಿಯಲ್ಲಿ ದೂರಶಿಕ್ಷಣ ಕೋರ್ಸ್​ವುುಂದುವರಿಸಲು ಅವಕಾಶ ನೀಡಬೇಕು ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ವಿವಿಧ ವಿವಿಗಳ ದೂರಶಿಕ್ಷಣ ಕೋರ್ಸ್​ಗಳ ಅನುಮತಿ ರದ್ದುಪಡಿಸಿ ಕೇವಲ ಮೈಸೂರು ವಿವಿಗೆ ಮಾತ್ರ ದೂರ ಶಿಕ್ಷಣ ವ್ಯವಸ್ಥೆ ಮುಂದುವರಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ದೂರಶಿಕ್ಷಣ ಕೋರ್ಸ್​ಗಳ ನಿಯಂತ್ರಣಕ್ಕಾಗಿ ಯುಜಿಸಿ ಅನುಷ್ಟಾನಗೊಳಿಸುವ ಎಲ್ಲ ಮಾರ್ಗಸೂಚಿಗಳನ್ನು ಕುವೆಂಪು ವಿವಿ ಪಾಲಿಸುತ್ತಿದೆ. ಇದುವರೆಗೆ ಯಾವುದೇ ಗೊಂದಲವಿಲ್ಲದೆ ಯುಜಿಸಿ ಮಾನ್ಯತೆ ಕಾಯ್ದುಕೊಂಡಿದೆ. ಕುವೆಂಪು ವಿವಿ ದೇಶದ 100 ಉತ್ತಮ ವಿವಿಗಳಲ್ಲಿ ಒಂದಾಗಿದೆ. ನಾವು ಯಾವ ವಿವಿಗೂ ಸ್ಪರ್ಧಿಗಳಲ್ಲ ಎಂದು ತಿಳಿಸಿದರು.

    ದೇಶದ ಎಲ್ಲ ರಾಜ್ಯಗಳಲ್ಲಿ ದೂರಶಿಕ್ಷಣ ನೀಡಲು ಸಾಂಪ್ರದಾಯಿಕ ವಿವಿ, ಮುಕ್ತ ವಿವಿಗಳೊಂದಿಗೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿಯೂ ಯುಜಿಸಿಯಿಂದ ಮಾನ್ಯತೆ ಪಡೆದಿದೆ. ದೂರಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಸೂಕ್ತ ವಿವಿ ಆಯ್ಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಬೇಕೆಂದರು.

    ಕುವೆಂಪು ವಿವಿಯು 2002-03ರಿಂದಲೇ ದೂರ ರಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮ ರೂಪಿಸಿದೆ. ಮುಕ್ತ ಮತ್ತು ದೂರಶಿಕ್ಷಣ ಮಾದರಿಯಲ್ಲಿ ಶಿಕ್ಷಣ ನೀಡಲು ಕುವೆಂಪು ವಿವಿಗೆ ಯುಜಿಸಿ ಅನುಮತಿ ನೀಡಿದೆ. 2013ರಿಂದ 2018ರವರೆಗೆ ಕೆಎಸ್​ಒಯು ಮಾನ್ಯತೆ ರದ್ದಾಗಿದ್ದ ಸಂದರ್ಭದಲ್ಲೂ ಕುವೆಂಪು ವಿವಿ ದೂರ ಶಿಕ್ಷಣದ ಮೂಲಕ ಅನೇಕ ಕೋರ್ಸ್​ಗಳನ್ನು ನಡೆಸಿದೆ ಎಂದರು.

    ನಮ್ಮಿಂದಲೂ ನ್ಯೂನತೆಯಾಗಿದೆ: ದೂರ ಶಿಕ್ಷಣ ವಿಭಾಗದ ಪರೀಕ್ಷಾ ಕೇಂದ್ರಗಳಲ್ಲಿ ಅಹಿತಕರ ಬೆಳವಣಿಗೆಯಾಗಿದೆ. ನಮ್ಮಿಂದಲೂ ನ್ಯೂನತೆಗಳಾಗಿವೆ. ಇನ್ನು ಮುಂದೆ ಹೀಗೆ ನಡೆಯದಂತೆ ಎಚ್ಚರ ವಹಿಸಲು ದೂರಶಿಕ್ಷಣ ನಿರ್ದೇಶನಾಲಯಕ್ಕೆ ಸೂಚನೆ ನೀಡಲಾಗಿದೆ. ಮುಂದೆ ಇಂತಹ ತಪ್ಪುಗಳು ನಡೆದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಎಚ್ಚರಿಸಿದರು.

    ಕುವೆಂಪು ವಿವಿಯೇ ಟಾಪ್: ಕೆಎಸ್​ಒಯುನಲ್ಲಿ ಮಾತ್ರ ದೂರಶಿಕ್ಷಣಕ್ಕೆ ಅವಕಾಶ ನೀಡಿದರೆ ಎಲ್ಲ ವಿದ್ಯಾರ್ಥಿಗಳೂ ಅಲ್ಲಿಯೇ ಪ್ರವೇಶ ಪಡೆಯುತ್ತಾರೆ ಎಂದು ಹೇಳುವುದು ಕಷ್ಟ. ಅವರು ಇಂದಿರಾ ಗಾಂಧಿ ಮುಕ್ತ ವಿವಿ ಕಡೆಗೂ ಮುಖ ಮಾಡಬಹುದು. ರಾಜ್ಯದ 6 ವಿವಿಗಳಲ್ಲಿ ದೂರ ಶಿಕ್ಷಣ ವಿಭಾಗಗಳಿವೆ. ಇವುಗಳಲ್ಲಿ ನಮ್ಮ ವಿವಿಯೇ ಪ್ರಥಮ ಸ್ಥಾನದಲ್ಲಿದೆ. 30 ಕಾರ್ಯಕ್ರಮಗಳು ಇಲ್ಲಿವೆ. 30 ಸಾವಿರ ವಿದ್ಯಾರ್ಥಿಗಳು ಕುವೆಂಪು ವಿವಿ ದೂರಶಿಕ್ಷಣದ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದರು.

    ಪರೀಕ್ಷೆ ಸದಕ್ಕಿಲ್ಲ-ಶುಲ್ಕ ಕೊಡಬೇಕಿಲ್ಲ: ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ವೇಳಾಪಟ್ಟಿ ಇನ್ನೂ ನಿರ್ಧಾರವಾಗಿಲ್ಲ. ಕರೊನಾ ಕಾರಣದಿಂದ ಪರೀಕ್ಷೆ ದಿನಾಂಕ ನಿಗದಿಯಾಗುತ್ತಿಲ್ಲ. ಉನ್ನತ ಶಿಕ್ಷಣ ಸಚಿವರೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಸರ್ಕಾರ ಇದಕ್ಕಾಗಿ ಪ್ರತ್ಯೇಕ ಟಾಸ್ಕ್​ಫೊರ್ಸ್ ರಚಿಸಿದೆ. ಯಾವುದೇ ವಿದ್ಯಾರ್ಥಿಯಿಂದ ಪರೀಕ್ಷಾ ಶುಲ್ಕ ಪಡೆಯಲು ವಿವಿ ಸೂಚನೆ ನೀಡಿಲ್ಲ. ಒಂದು ವೇಳೆ ಕಾಲೇಜುಗಳು ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಕುಲಪತಿ ತಿಳಿಸಿದರು.

    ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್,ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ.ನಾರಾಯಣ್, ಸಿಂಡಿಕೇಟ್ ಸದಸ್ಯರಾದ ಬಳ್ಳೇಕೆರೆ ಸಂತೋಷ್, ರಾಮಲಿಂಗಪ್ಪ, ಎಸ್.ಆರ್.ನಾಗರಾಜ್, ಪ್ರೊ. ಕಿರಣ ದೇಸಾಯಿ, ರಮೇಶ್​ಬಾಬು, ಪಿಆರ್​ಒ ಸತ್ಯಪ್ರಕಾಶ್, ಸುದ್ದಿಗೋಷ್ಠಿಯಲ್ಲಿದ್ದರು.

    ಕರೊನಾ ಕಾರಣದಿಂದ ಘಟಿಕೋತ್ಸವ ಮುಂದೂಡಲಾಗಿತ್ತು. ಮುಂದಿನ ದಿನಾಂಕ ನಿಗದಿ ಕಷ್ಟವಾಗುತ್ತಿದೆ. ಅಗತ್ಯ ಬಿದ್ದರೆ ಎರಡು ಘಟಿಕೋತ್ಸವಗಳನ್ನು ಒಟ್ಟಿಗೇ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅಂಕಪಟ್ಟಿ ನೀಡಿ ನಂತರ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ನೀಡಲಾಗುವುದು.

    | ಪ್ರೊ. ಬಿ.ಪಿ.ವೀರಭದ್ರಪ್ಪ, ಕುವೆಂಪು ವಿವಿ ಕುಲಪತಿ

    ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪವಾದ ಕಾರಣ ಮೂರು ಪರೀಕ್ಷಾ ಕೇಂದ್ರಗಳ ಮಾನ್ಯತೆ ರದ್ದು ಮಾಡಿದ್ದೇವೆ. 2017ರಿಂದ ಅಧಿಕೃತ ಕಾಲೇಜುಗಳಲ್ಲಿ ಮಾತ್ರ ದೂರ ಶಿಕ್ಷಣ ವಿಭಾಗದ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಆಯ್ಕೆಗಳನ್ನು ನೀಡಬೇಕು. ಅದನ್ನು ಬಿಟ್ಟು ಸಾಂಪ್ರದಾಯಿಕ ವಿವಿಗಳಲ್ಲಿ ದೂರಶಿಕ್ಷಣ ವಿಭಾಗ ರದ್ದು ಮಾಡುವುದು ಸೂಕ್ತವಲ್ಲ.

    | ಪ್ರೊ. ಎಸ್.ಎಸ್.ಪಾಟೀಲ್, ಕುವೆಂಪು ವಿವಿ ಕುಲಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts