More

    ಕುಮಟಾ, ಹೊನ್ನಾವರಕ್ಕಿಲ್ಲ ಜೀವಜಲದ ಸಮಸ್ಯೆ

    ಕುಮಟಾ: ಕುಮಟಾ ಹಾಗೂ ಹೊನ್ನಾವರ ಪಟ್ಟಣಕ್ಕೆ ನೀರುಣಿಸುವ ಮರಾಕಲ್ ಪಂಪ್​ಹೌಸ್ ಬಳಿ ಅಘನಾಶಿನಿ ನದಿಯಲ್ಲಿ ಸದ್ಯ ಯಥೇಚ್ಛ ನೀರು ಹರಿಯುತ್ತಿದ್ದು ಉಭಯ ಪಟ್ಟಣಗಳ ನೀರಿನ ಆತಂಕಕ್ಕೆ ನಿರಾಳತೆ ಉಂಟು ಮಾಡಿದೆ.

    ಕಳೆದ ವರ್ಷ ಏಪ್ರಿಲ್ ಆರಂಭದಲ್ಲೇ ಅಘನಾಶಿನಿ ನದಿಯಲ್ಲಿ ಒಳಹರಿವು ಕಡಿಮೆಯಾಗಿ ಮರಾಕಲ್ ಯೋಜನೆಯ ನೀರು ಪೂರೈಕೆಯಲ್ಲಿ ಭಾರಿ ಸಮಸ್ಯೆ ಸೃಷ್ಟಿಯಾಗಿತ್ತು. ಬಳಿಕ ಮೇ ಹಾಗೂ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನದಿಯ ಹರಿವು ಬತ್ತಿ ಹೋಗಿ ತಿಂಗಳಾನುಗಟ್ಟಲೆ ಪಂಪ್ ಬಂದ್ ಇಡಲಾಗಿತ್ತು.

    ಬಳಿಕ ಪುರಸಭೆಯವರು ಪಟ್ಟಣದ ಜನರಿಗೆ ಪಾಳಿಯ ಪ್ರಕಾರ ಟ್ಯಾಂಕರ್​ನಲ್ಲಿ ನೀರು ಹಂಚಿದ್ದರು. ಮುಂಗಾರು ಆಗಮನಕ್ಕೂ ವಿಳಂಬವಾಗಿ ಜನ ಅಕ್ಷರಶಃ ನೀರಿನ ಸಮಸ್ಯೆಯಿಂದ ಬೆಂದು ಹೋಗಿದ್ದರು. ಆಡಳಿತ ವ್ಯವಸ್ಥೆ ಜನರ ಆಕ್ರೋಶಕ್ಕೆ ತುತ್ತಾಗಿತ್ತು.

    ಸಮಸ್ಯೆಯ ಗಂಭೀರತೆ ಅರಿತು ಶಾಸಕ ದಿನಕರ ಶೆಟ್ಟಿ ಅವರು ಅಧಿಕಾರಿಗಳೊಂದಿಗೆ ರ್ಚಚಿಸಿ ಮರಾಕಲ್ ನೀರು ಸ್ಥಗಿತವಾದಾಗ ತುರ್ತು ನೀರು ಪೂರೈಕೆಗೆ ಪರ್ಯಾಯ ಮಾರ್ಗಗಳನ್ನು ಹುಡುಕುವ ಕೆಲಸ ಮಾಡಿದರು. ಜೊತೆಗೆ ಮರಾಕಲ್ ಪಂಪ್​ಹೌಸ್ ಬಳಿ ಒಡ್ಡಿನ ಎತ್ತರವನ್ನು ಹೆಚ್ಚಿಸುವ ಕಾಮಗಾರಿಗೆ ಸೂಚಿಸಿದರು. ಪುರಸಭೆಯವರು ತಿಂಗಳ ಹಿಂದೆಯೇ ಮರಾಕಲ್ ಒಡ್ಡಿನ ಮೇಲೆ ಸಾವಿರಾರು ಉಸುಕಿನ ಚೀಲಗಳನ್ನು ಬಳಸಿ ಒಡ್ಡನ್ನು ಮೂರಡಿಯಷ್ಟು ಹೆಚ್ಚಿಸಿದರು. ಇದರಿಂದಾಗಿ ನದಿಯಲ್ಲಿ ಒಡ್ಡಿನ ಮೇಲ್ಗಡೆ ಯಥೇಚ್ಛ ನೀರು ಸಂಗ್ರಹವಾಗಿ ವಿಶಾಲ ಸರೋವರವೇ ನಿರ್ವಣವಾಗಿದೆ.

    ಸ್ಥಳೀಯರ ಪ್ರಕಾರ, ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಆರಂಭದಲ್ಲೇ ಒಡ್ಡಿನ ಒಳಗಡೆ ನೀರಿನ ಪ್ರಮಾಣ ಕಡಿಮೆ ಇರುತ್ತಿತ್ತು, ಒಡ್ಡನ್ನು ಎತ್ತರಿಸಿದ್ದರಿಂದ ಈ ವರ್ಷವೇ ಪ್ರಥಮ ಬಾರಿಗೆ ಪಂಪ್​ಹೌಸ್​ನ ಬಾವಿ ಏಪ್ರಿಲ್​ನಲ್ಲೂ ಮುಳುಗಿಕೊಂಡಿದೆ. ಯೋಜನೆಯ 300

    ಎಚ್​ಪಿ ಪಂಪ್ ನಿರಂತರ ನೀರನ್ನು ಎತ್ತಿ ಕುಮಟಾ ಹಾಗೂ ಹೊನ್ನಾವರಕ್ಕೆ ಪೂರೈಸುತ್ತಿದೆ. ಒಂದೊಮ್ಮೆ ಜೂನ್​ನಲ್ಲೂ ಮಳೆ ಆರಂಭವಾಗದೇ ಒಡ್ಡಿನೆಡೆಗೆ ನದಿಯ ಒಳಹರಿವು ಬತ್ತಿದರೆ ಮಾತ್ರ ಸಮಸ್ಯೆಯಾಗಬಹುದು ಎನ್ನುತ್ತಾರೆ.

    ಕಳೆದ ವರ್ಷ ಕುಮಟಾ ಹಾಗೂ ಹೊನ್ನಾವರದಲ್ಲಿ ನೀರಿನ ಸಮಸ್ಯೆ ಅನುಭವಿಸಿದ್ದೇವೆ. ಹೀಗಾಗಿ ಸಮಯೋಚಿತವಾಗಿ ಪುರಸಭೆಯ ಮೂಲಕ ಕೆಲವೊಂದು ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ. ನದಿಯ ಒಡ್ಡನ್ನು ಎತ್ತರಿಸಿದ್ದೇವೆ. ಈ ಬಾರಿ ಮಳೆಗಾಲದವರೆಗೂ ಮರಾಕಲ್ ನೀರು ಸಮರ್ಪಕ ಪೂರೈಕೆಯ ಗಟ್ಟಿ ನಿರೀಕ್ಷೆ ಇದೆ. ಕಾರಣಾಂತರದಿಂದ ಮರಾಕಲ್ ನೀರು ಬರದಿದ್ದರೂ ಪರ್ಯಾಯ ಪೂರ್ವ ತಯಾರಿ ಇದೆ. | ದಿನಕರ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts