More

    ಕುಡಿವ ನೀರಿಗಾಗಿ ಸುಣ್ಣಘಟ್ಟದಲ್ಲಿ ಪ್ರತಿಭಟನೆ

    ಪಿಡಿಒ ವಿರುದ್ಧ ಜನರ ಆಕ್ರೋಶ, ಜಲಜೀವನ್ ಮಿಷನ್ ಕಾಮಗಾರಿ ತೊಡಕು!


    ವಿಜಯವಾಣಿ ಸುದ್ದಿಜಾಲ ತೂಬಗೆರೆ
    ಹೋಬಳಿಯ ಸುಣ್ಣಘಟ್ಟದಲ್ಲಿ 1 ತಿಂಗಳಿಂದ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದ್ದು, ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ತೂಬಗೆರೆ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
    ತೂಬಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು. ಈಗಾಗಲೇ ಬೇಸಿಗೆಯಿಂದ ಕೆರೆಕಟ್ಟೆಗಳು ಒಣಗಿ ರಾಸುಗಳ ನೀರಿಗೆ ಪರದಾಡುವಂತಾಗಿದೆ. ಇದರೊಂದಿಗೆ ಜನಸಾಮಾನ್ಯರು ಕುಡಿಯುವ ನೀರಿಗೂ ಕುತ್ತುಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
    ಟ್ಯಾಂಕರ್ ನೀರು ಅವಲಂಬನೆ: ತಿಂಗಳಿಂದ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಲಾಗುತ್ತಿದೆ. ಅದು ನಿಗದಿತ ಸಮಯಕ್ಕೆ ಬರದೆ ಪರದಾಡುವಂತಾಗಿದೆ. ಇಲ್ಲಿನ ಪರಿಸ್ಥಿತಿ ಬಂಡವಾಳ ಮಾಡಿಕೊಂಡು ಟ್ಯಾಂಕರ್ ನೀರಿಗೆ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಅನಿವಾರ್ಯವಾಗಿ ಹೆಚ್ಚಿನ ಹಣ ನೀಡುವಂತಾಗಿದೆ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.
    ಪೈಪ್ ಒಡೆದು ಪರದಾಟ: ಗ್ರಾಮದಲ್ಲ ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿವೆ. ಇದರಿಂದ ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ನೀರಿಗೆ ಅಡ್ಡಿಯಾಗಿದೆ ಎನ್ನಲಾಗಿದೆ. ಒಡೆದ ಪೈಪ್ ದುರಸ್ತಿ ಮಾಡಲು ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರಿಂದ ಗ್ರಾಮದ ಜನರು ದೂರದ ಪ್ರದೇಶಗಳಿಂದ ನೀರು ಹೊತ್ತುತರುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
    ತೀವ್ರ ತರಾಟೆ: ಗ್ರಾಪಂ ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ತೀವ್ರ ತರಾಟೆ ತೆಗೆದುಕೊಂಡರು. ಜನರಿಗೆ ಸ್ಪಷ್ಟನೆ ನೀಡುವಷ್ಟರಲ್ಲಿ ಪಿಡಿಒ ಸುಸ್ತು ಹೊಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
    ದುರಸ್ತಿ ಮಾಡಿಸಲಾಗುವುದು: ಗ್ರಾಮಸ್ಥರ ಪ್ರತಿರೋಧ ಆಲಿಸಿದ ಪಿಡಿಒ ವೆಂಕಟೇಶ್, ಜನಜೀವನ್ ಮಿಷನ್ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ಕಡೆ ನೀರು ಪೂರೈಕೆಯಾಗುವ ಪೈಪ್‌ಗಳು ಒಡೆದಿವೆ ಎಂಬ ಮಾಹಿತಿ ಬಂದಿದೆ. ಕೂಡಲೇ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಕುಡಿವ ನೀರಿನ ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts