More

    ಕುಂದಗೋಳ ಕಾಂಗ್ರೆಸ್​ನಲ್ಲಿ ಅಸಮಾಧಾನದ ಹೊಗೆ

    ಕುಂದಗೋಳ: ಮಾಜಿ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದ ನಂತರ ಕುಂದಗೋಳ ಕಾಂಗ್ರೆಸ್​ನಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಅನೇಕ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ‘ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಲೂಟಿಕೋರರಿಗೆ ಮಾತ್ರ ಜಾಗ. ಶಿವಳ್ಳಿ ಅವರ ನಂತರ ಅನಾಥವಾದ ಕುಂದಗೋಳ ತಾಲೂಕಿನ ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರು’ ಎಂಬ ಬರಹಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

    ಶಿವಳ್ಳಿ ಅವರು ಯಾವ ಅನ್ಯಾಯವನ್ನು ವಿರೋಧಿಸುತ್ತಿದ್ದರೋ ಅದೇ ಇಂದು ತಾಂಡವವಾಡುತ್ತಿದೆ. ಅವರು ಬೆಳೆಸಿದ ಅನೇಕ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಪ್ರಾಮಾಣಿಕತೆಗೆ ಬೆಲೆಯೇ ಇಲ್ಲದಂತಾಗಿದೆ. ಶಿವಳ್ಳಿಯವರು ನಮ್ಮಂಥ ಅನೇಕ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಿದರು. ಶಿವಳ್ಳಿಯವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಶಿವಳ್ಳಿಯವರಿಗೆ ಶಿವಳ್ಳಿ ಅವರೇ ಸಾಟಿ ಎಂಬ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಇಷ್ಟೊಂದು ಬೆಳವಣಿಗೆಗಳು ನಡೆಯುತ್ತಿದ್ದರೂ ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಂಡೂ ಕಾಣದಂತೆ ಜಾಣ ಕುರುಡುತನ ತೋರಿಸುತ್ತಿದ್ದಾರೆ. ಈ ವಾಟ್ಸ್ ಆಪ್ ಗ್ರೂಪ್​ನಲ್ಲಿ ಜಿಲ್ಲಾಧ್ಯಕ್ಷರೂ ಇದ್ದಾರೆ. ಅಸಮಾಧಾನಗೊಂಡ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಧಾರವಾಡ ಜಿಲ್ಲಾ ಕಾಂಗ್ರೆಸ್​ನಲ್ಲಿ ಕಾರ್ಯಕರ್ತರಿಗಿಂತ ಮುಖಂಡರ ಪಡೆಯೇ ದೊಡ್ಡದಿದ್ದು, ಹತ್ತು ಹಲವು ಬಣಗಳಿವೆ. ಹೀಗಾಗಿ ಎಲ್ಲರನ್ನೂ ಒಟ್ಟುಗೂಡಿಸಿ ಕರೆದುಕೊಂಡು ಹೋಗುವ ಸಮರ್ಥ ನಾಯಕರ ಕೊರತೆ ಜಿಲ್ಲೆಯಲ್ಲಿದೆ. ಕೆಪಿಸಿಸಿಗೆ ನೂತನ ಸಾರಥ್ಯ ವಹಿಸಿರುವ ಡಿ.ಕೆ. ಶಿವಕುಮಾರ, ಉತ್ತರ ಕರ್ನಾಟಕ ಭಾಗದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್ ಅವರು ಈ ಬೆಳವಣಿಗೆಗಳನ್ನು ಯಾವ ರೀತಿ ಬಗೆಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಸ್ಪಂದಿಸುತ್ತಿಲ್ಲ ಶಾಸಕಿ: ಶಾಸಕಿ ಕುಸುಮಾವತಿ ಶಿವಳ್ಳಿ ವಿರುದ್ಧವೂ ಕಾರ್ಯಕರ್ತರ ಪಡೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ನಮ್ಮ ಕಷ್ಟಗಳಿಗೆ ಶಾಸಕಿ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.

    ಕಾರ್ಯಕರ್ತರು ಅನಾಥ…!: ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಕೇವಲ ಸಭೆ, ಸಮಾರಂಭಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಮುತ್ತಣ್ಣ ಶಿವಳ್ಳಿ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಿಷ್ಠಾವಂತ ಕಾರ್ಯಕರ್ತರು ಅನಾಥರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts