More

    ಕಿಕ್ ಹೊಡೆಯದ ಮದ್ಯ ಮಾರಾಟ

    ಸುಭಾಸ ಧೂಪದಹೊಂಡ ಕಾರವಾರ

    ಕರೊನಾ ಜಿಲ್ಲೆಯಲ್ಲಿ ಕುಡಿತದ ಚಟವನ್ನು ಕೊಂಚ ಕಡಿಮೆ ಮಾಡಿದೆಯೇ? ಅಬಕಾರಿ ಇಲಾಖೆಯ ಲೆಕ್ಕಾಚಾರ ನೋಡಿದರೆ ಹೀಗೊಂದು ಪ್ರಶ್ನೆ ಮೂಡುತ್ತದೆ.

    ಲಾಕ್​ಡೌನ್ ಮುಗಿದ ಬಳಿಕ ಮದ್ಯದ ಮುಕ್ತ ಮಾರಾಟಕ್ಕೆ ಅವಕಾಶ ದೊರೆತಿದ್ದರೂ ಇದುವರೆಗೂ ಮಾರಾಟದ ಪ್ರಮಾಣ ಮೊದಲಿನಷ್ಟು ಚುರುಕು ಪಡೆದುಕೊಂಡಿಲ್ಲ.

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಏಳು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಬಾಕ್ಸ್​ಗಳಷ್ಟು ಭಾರತೀಯ ಮದ್ಯದ ಮಾರಾಟದ ಪ್ರಮಾಣ ಇಳಿಕೆಯಾಗಿದೆ. ಇದರಿಂದ ಅಬಕಾರಿ ಇಲಾಖೆಯ ಆದಾಯದಲ್ಲೂ ನಷ್ಟವಾಗಿದೆ.

    2019ರ ಏಪ್ರಿಲ್​ನಿಂದ ಅಕ್ಟೋಬರ್ ತಿಂಗಳವರೆಗೆ ಜಿಲ್ಲೆಯಲ್ಲಿ ಒಟ್ಟು 5,81,381 ಬಾಕ್ಸ್​ಗಳಷ್ಟು ಭಾರತೀಯ ಮದ್ಯ ಮಾರಾಟವಾಗಿತ್ತು. 2020ರಲ್ಲಿ ಇದೇ ಅವಧಿಯಲ್ಲಿ 4,81,844 ಬಾಕ್ಸ್​ಗಳಷ್ಟು ಮಾತ್ರ ಮದ್ಯ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮೇ ತಿಂಗಳಲ್ಲಿ 21,794 ಬಾಕ್ಸ್ ಮದ್ಯ ಮಾರಾಟ ಇಳಿಕೆಯಾಗಿತ್ತು. ಆಗಸ್ಟ್​ನಲ್ಲಿ 730 ಬಾಕ್ಸ್, ಸೆಪ್ಟೆಂಬರ್​ನಲ್ಲಿ 2834 ಬಾಕ್ಸ್ ಮದ್ಯ ಮಾರಾಟ ಹೆಚ್ಚಿದರೂ ಅಕ್ಟೋಬರ್​ನಲ್ಲಿ ಮತ್ತು 2736 ಬಾಕ್ಸ್​ನಷ್ಟು ಇಳಿಕೆ ಕಂಡಿದೆ.

    ಆದಾಯವೂ ಇಳಿಕೆ:
    ಕರೊನಾ ಲಾಕ್​ಡೌನ್​ನಿಂದ ಖಾಲಿಯಾಗಿದ್ದ ಸರ್ಕಾರದ ಖಜಾನೆ ತುಂಬಿಸಲು ನೆರವಾಗಿದ್ದು ಮದ್ಯ ಮಾರಾಟದ ರಾಜಧನ ಹಾಗೂ ಸುಂಕಗಳು ಎಂಬುದು ನಿಜ. ಆದರೆ, ಕಳೆದ ವರ್ಷದ ಜಿಲ್ಲೆಯ ಅಬಕಾರಿ ಇಲಾಖೆಯ ಆದಾಯಕ್ಕೆ ಹೋಲಿಸಿದರೆ, ಸಾಕಷ್ಟು ಕೊರತೆ ಕಂಡುಬಂದಿದೆ. ಕಳೆದ ಬಾರಿ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 8.60 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ ಇದೇ ಅವಧಿಯಲ್ಲಿ 5.53 ಕೋಟಿ ರೂ. ಮಾತ್ರ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ಸುಮಾರು 3.06 ಕೋಟಿ ರೂ. ಇಳಿಕೆಯಾಗಿದೆ.

    ಮದ್ಯ ಹಾಗೂ ಬಿಯರ್​ಗಳನ್ನು ಕರ್ನಾಟಕ ಸ್ಟೇಟ್ ಬೆವರೇಜ್ ಕಾರ್ಪೆರೇಶನ್ ಲಿಮಿಟೆಡ್ ಮೂಲಕ ಪೂರೈಕೆ ಮಾಡಲಾಗುತ್ತದೆ. ಟ್ಯಾಕ್ಸ್ ರೂಪದಲ್ಲಿ ಬರುವ ಆದಾಯವು ನೇರವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಇನ್ನು ಬಾರ್, ಮದ್ಯದಂಗಡಿಗಳ ಮಾನ್ಯತೆ ನವೀಕರಣಕ್ಕಾಗಿ ರಾಜಸ್ವ ಸಂಗ್ರಹಣೆ ಮಾಡಲಾಗುತ್ತದೆ. ಅಕ್ರಮ ಎಸಗಿದಲ್ಲಿ ದಂಡ ವಸೂಲಿ ಮಾಡುವ ಹಣವನ್ನು ಜಿಲ್ಲೆಯ ಅಬಕಾರಿ ಇಲಾಖೆಯ ಆದಾಯ ಎಂದು ಪರಿಗಣಿಸಲಾಗುತ್ತದೆ.

    ಗೋವಾ ಮದ್ಯದ ಸವಾಲು
    ಉದಾರ ಮದ್ಯ ಮಾರಾಟ ವ್ಯವಸ್ಥೆ ಇರುವ ಗೋವಾ ರಾಜ್ಯ ಜಿಲ್ಲೆಯ ಪಕ್ಕದಲ್ಲೇ ಇರುವುದು ಜಿಲ್ಲೆಯ ಅಬಕಾರಿ ಆದಾಯಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಎಷ್ಟೇ ಬೇಡ ಎಂದರೂ ಜಿಲ್ಲೆಗೆ ವಿವಿಧ ಮಾರ್ಗಗಳಲ್ಲಿ ಅಕ್ರಮ ಗೋವಾ ಮದ್ಯ ಹರಿದು ಬರುತ್ತದೆ. ಕಾರವಾರದ ಸಾಕಷ್ಟು ಮದ್ಯ ಪ್ರಿಯರು ಗೋವಾಕ್ಕೆ ಹೋಗಿ ಕುಡಿದು ಬರುತ್ತಾರೆ. ಹೀಗಾಗಿ, ಜಿಲ್ಲೆಯಲ್ಲಿ ಅಬಕಾರಿ ಆದಾಯ ಕುಸಿತ ಕಾಣುತ್ತದೆ.

    ಜಿಲ್ಲೆಯ ಅಬಕಾರಿ ಆದಾಯ ಏಪ್ರಿಲ್, ಮೇ ಜೂನ್ ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಜುಲೈನಿಂದ ಹಂತ ಹಂತವಾಗಿ ಚೇತರಿಸುತ್ತಿದೆ. ಆರ್ಥಿಕ ವರ್ಷಾಂತ್ಯದ ಹೊತ್ತಿಗೆ ಗುರಿ ಮುಟ್ಟುವ ನಿರೀಕ್ಷೆ ಇದೆ.
    ಶಿವನಗೌಡ ಪಾಟೀಲ ಅಬಕಾರಿ ಉಪ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts