More

    ಕಾವೇರಿ ಕೂಗಿನಿಂದ ಅರಣ್ಯೀಕರಣ, ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಸಲಹೆ, ಇಂದು ಕಾರ್ಯಕ್ರಮಕ್ಕೆ ಚಾಲನೆ

    ಬೆಂಗಳೂರು ಗ್ರಾಮಾಂತರ: ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಹೆಚ್ಚು ಮರ ಬೆಳೆಸುವುದರಿಂದ ಉತ್ತಮ ಮಳೆಯಾಗಿ ಅಂತರ್ಜಲಮಟ್ಟ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕೂಗು ಅಭಿಯಾನದಡಿ ರೈತರಿಗೆ ಸಸಿ ವಿತರಿಸುವ ಮೂಲಕ ಅರಣ್ಯೀಕರಣ ಹೆಚ್ಚಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದರು.

    ದೇವನಹಳ್ಳಿ ಜಿಪಂ ಕಚೇರಿಯಲ್ಲಿ ಮಂಗಳವಾರ ಕಾವೇರಿ ಕೂಗು ಕಾರ್ಯಕ್ರಮದಡಿ ಅರಣ್ಯೀಕರಣ ಹೆಚ್ಚಿಸುವ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈಶ ಫೌಂಡೇಷನ್ ಮುಖಾಂತರ ನಡೆಯುತ್ತಿರುವ ಈ ಅಭಿಯಾನದಿಂದಾಗಿ ಕಾವೇರಿಕೊಳ್ಳದ ಪ್ರದೇಶಗಳಲ್ಲಿ ಒಂದಾಗಿರುವ ಜಿಲ್ಲೆಯಲ್ಲಿಯೂ ಅರಣ್ಯೀಕರಣ ಹೆಚ್ಚಾಗಿ, ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದರು.

    ಅರಣ್ಯ ನಾಶದಿಂದಾಗಿ ಸಾವಿರಾರು ಅಡಿ ಕೊಳವೆಬಾವಿ ಕೊರೆದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಂತಾಗಿದೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮರ ಬೆಳೆಸುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

    ಆದಾಯೂ ಹೆಚ್ಚಳ: ಈ ಕಾರ್ಯಕ್ರಮದ ಕುರಿತು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರೈತರಿಗೆ ಅಗತ್ಯ ಮಾಹಿತಿ ನೀಡಿ, ರೈತರು ಬಯಸುವ ಸಸಿಗಳನ್ನು ನೀಡಿ, ಪಡೆದ ಸಸಿಗಳನ್ನು ರೈತರು ಜಮೀನಿನಲ್ಲಿ, ಬದುಗಳಲ್ಲಿ ನೆಡುವ ಮೂಲಕ ಅರಣ್ಯ ಕೃಷಿ ಮಾಡಬಹುದು ಹಾಗೂ ಅವರ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಸಿಇಒ ತಿಳಿಸಿದರು.

    ಆ.4 ರಂದು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಸ್ಥಳೀಯ ಶಾಸಕರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಗಿಡ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

    ಕೋಟಿ ಸಸಿಗಳು: ಈಶಾ ಫೌಂಡೇಶನ್‌ನ ಸ್ವಯಂ ಸೇವಕ ನವೀನ್ ಮಾತನಾಡಿ, ಸದ್ಗುರುಗಳು ಮಾಡಿದಂತಹ ಜಲಾಂದೋಲನದ ಭಾಗವಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಮುಂದಿನ 12 ವರ್ಷಗಳಲ್ಲಿ 242 ಕೋಟಿ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

    ಸರ್ಕಾರದ ಸಹಯೋಗದಲ್ಲಿ ಮುಂದಿನ 4 ವಾರಗಳಲ್ಲಿ 1785 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದೆ ಹಾಗೂ ಎಲ್ಲ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಕಾವೇರಿ ಕೂಗು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
    ಜಿಲ್ಲಾಡಳಿತ ಭವನದ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾವೇರಿ ಕೂಗು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts