More

    ಕಾಲ ಬದಲಾದರೂ ಪರಂಪರೆಗೆ ಕೊನೆ ಇಲ್ಲ

    ಧಾರವಾಡ: ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರಿಗೆ ದಿ. ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ ಹಾಗೂ ರೂಪಾ ಹಾಸನ ಅವರಿಗೆ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಪ್ರಶಸ್ತಿಗಳನ್ನು ಡಾ. ಹೇಮಾ ಪಟ್ಟಣಶೆಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ.

    ಪ್ರಶಸ್ತಿ ಸ್ವೀಕರಿಸಿದ ಡಾ. ಎಚ್.ಎಸ್. ಅನುಪಮಾ ಮಾತನಾಡಿ, ಪ್ರತಿಯೊಬ್ಬ ಲೇಖಕಿ ತನ್ನ ಹಿಂದಿನ ಎಲ್ಲ ಲೇಖಕಿಯರ ಮತ್ತು ಮಹಿಳೆಯರ ನೋವಿನ ಪರಂಪರೆ ಕೊಂಡಿಯಾಗಿರುತ್ತಾಳೆ. ಕಾಲ ಬದಲಾದರೂ ಪರಂಪರೆಗೆ ಕೊನೆ ಇಲ್ಲ. ಲೇಖಕ ಸಹ ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಕಾರ್ವಿುಕ ಒಂದು ಕೈಯಿಂದ ಇನ್ನೊಂದು ಕೈಗೆ ಇಟ್ಟಿಗೆ ಹಸ್ತಾಂತರಿಸಿದಂತೆ ನಮ್ಮ ಜೀವನಾನುಭವಗಳನ್ನು ಅಕ್ಷರ ರೂಪಕ್ಕಿಳಿಸುತ್ತಾನೆ. ಆದರೆ, ಕೂಲಿ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ವೇತನ ತಾರತಮ್ಯವಿದೆ. ಕಾರ್ಯದ ಸ್ವರೂಪ, ಕೆಲಸದ ಅವಧಿ ಒಂದೇ ಇದ್ದರೂ ವೇತನದ ತಾರತಮ್ಯವೇಕೆ ಎಂದು ಪ್ರಶ್ನಿಸಿದರು.

    ಸುರಕ್ಷತೆಯತ್ತ ಗಮನವಿರಲಿ

    ರೂಪಾ ಹಾಸನ ಮಾತನಾಡಿ, ಮಹಿಳೆ-ಮಕ್ಕಳು ಹಾಗೂ ಪ್ರಕೃತಿ ಎಂದಿಗೂ ಶೋಷಣೆಗೆ ತುತ್ತಾಗುತ್ತಿದ್ದಾರೆ. ಬರವಣಿಗೆ ಜತೆಗೆ ಸಮಾಜಕ್ಕೆ ಸ್ಪಂದಿಸುವ ಜವಾಬ್ದಾರಿಯನ್ನೂ ಮಹಿಳೆಯರು ನೆನಪಿಸಿಕೊಳ್ಳಬೇಕು. ಕೆಲ ಮಹಿಳೆಯರು ಇಂದು ದೌರ್ಜನ್ಯಕ್ಕೆ ಒಳಗಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರೆಲ್ಲರಿಗೂ ಸಹಾಯ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಎಲ್ಲ ರಂಗ ಪ್ರವೇಶಿಸಿರುವ ಮಹಿಳೆಯರು, ತಮ್ಮ ಸುರಕ್ಷತೆ ಬಗ್ಗೆ ಗಮನ ನೀಡಬೇಕು ಎಂದರು.

    ಅತಿಥಿಯಾಗಿ ಪಾಲ್ಗೊಂಡಿದ್ದ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ. ವೀಣಾ ಸಂಕನಗೌಡರ ಅಧ್ಯಕ್ಷತೆ ವಹಿಸಿದ್ದರು. ಡಾ. ಶರಣಮ್ಮ ಗೋರೆಬಾಳ, ಸರಸ್ವತಿ ಭೋಸ್ಲೆ, ವೀಣಾ ಶಾಂತೇಶ್ವರ, ಶಾಂತಾ ಇಮ್ರಾಪುರ, ಇತರರು ಇದ್ದರು.

    ಮುಂದಿನ 2 ವರ್ಷ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಡಾ. ರಾಜೇಶ್ವರಿ ಮಹೇಶ್ವರಯ್ಯ, ಉಪಾಧ್ಯಕ್ಷೆಯಾಗಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಕೋಶಾಧ್ಯಕ್ಷೆಯಾಗಿ ಮೇಘಾ ಹುಕ್ಕೇರಿ, ಕಾರ್ಯದರ್ಶಿಯಾಗಿ ಡಾ. ಉಷಾ ಗದ್ದಗಿಮಠ, ಸಹ ಕಾರ್ಯದರ್ಶಿಯಾಗಿ ಸುನಿತಾ ಮೂರಶಿಳ್ಳಿ ಸರ್ವಾನುಮತದಿಂದ ಆಯ್ಕೆಯಾದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts