More

    ಕಾರ್ಯನಿರ್ವಹಣೆಗೆ ಕರೊನಾ ಸವಾಲು

    ಹೊಸನಗರ: ಕರೊನಾ ಹಿನ್ನೆಲೆಯಲ್ಲಿ ಎಂಎಡಿಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಸವಾಲಾಗಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಎಲ್.ಗುರುಮೂರ್ತಿ ಹೇಳಿದರು.

    ಶ್ರೀ ರಾಮಚಂದ್ರಾಪುರ ಮಠದ ಚಂದ್ರಮೌಳೀಶ್ವರ ದೇವರಿಗೆ ರಜತಕವಚ ಧಾರಣೆ ಸಂದರ್ಭದಲ್ಲಿ ದೇವರ ದರ್ಶನ ಪಡೆದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಹಾಸನ, ಮೈಸೂರು, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ಸೇರಿ 13 ಜಿಲ್ಲೆಗಳಲ್ಲಿ ಎಂಎಡಿಬಿ ಅಡಿ ಹಲವು ಕೆಲಸಗಳಾಗಬೇಕಿವೆ. ಶಾಸಕರು, ಸಂಸದರು ಸೇರಿ 83 ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು 13 ಡಿಸಿಗಳ ಸಹಕಾರದೊಂದಿಗೆ ಮಲೆನಾಡಲ್ಲಿ ಪರಿಸರ ಪೂರಕ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

    850 ಕಾಮಗಾರಿಗೆ ಮಂಜೂರಾತಿ: ರಾಜ್ಯ ಕರೊನಾ ಭೀತಿ ಎದುರಿಸುತ್ತಿದೆ. ಈ ನಡುವೆ ಈಗಾಗಲೇ ಮಾಡಿರುವ ಕ್ರಿಯಾಯೋಜನೆಯಲ್ಲಿ 850 ಕಾಮಗಾರಿಗಳಿಗೆ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇನ್ನೂ 433 ಕಾಮಗಾರಿಗೆ ಮಂಜೂರಾತಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ 13 ಜಿಲ್ಲೆಗಳ ಡಿಸಿಗಳ ಜತೆ 3 ದಿನಗಳ ವೀಡಿಯೋ ಕಾನ್ಪರೆನ್ಸ್ ನಡೆಸಿದ್ದು ಕಾಮಗಾರಿ ಶೀಘ್ರ ಮುಕ್ತಾಯಕ್ಕೆ ಸೂಚಿಸಿದ್ದೇನೆ ಎಂದರು.

    ಸಮಸ್ಯೆಗಳು ಹಲವು: ಶಿವಮೊಗ್ಗ ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಣ್ಣಸಣ್ಣ ಹಳ್ಳಿಗಳು, ಹಳ್ಳಕೊಳ್ಳಗಳು, ಸೊಪ್ಪಿನಬೆಟ್ಟಗಳಿವೆ. ಈಗಾಗಲೇ ಅರಣ್ಯ ಪ್ರದೇಶದಲ್ಲಿ ಮನೆಕಟ್ಟಿಕೊಂಡು 94ಸಿ ಅಡಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಒತ್ತುವರಿ ಸಮಸ್ಯೆ ಕೂಡ ಇದೆ. ಜನರಿಗೂ ನ್ಯಾಯ ಸಿಗಬೇಕು. ಮುಂದೆ ಒತ್ತುವರಿ ಆಗುವುದನ್ನು ತಪ್ಪಿಸಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕಾದ ಜವಾಬ್ದಾರಿ ಇದೆ ಎಂದು ಹೇಳಿದರು.

    ಸಿಎಂ ಅವರಿಂದ ಆನೆಬಲ: ಸಿಎಂ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಮಲೆನಾಡು ಜಿಲ್ಲೆಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ನನ್ನ ರಾಜಕೀಯ ಗುರುವಾಗಿರುವ ಕಾರಣ ಮಲೆನಾಡು ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

    ರಾಘವೇಶ್ವರ ಶ್ರಿಗಳು ನಮ್ಮ ಕುಲಗುರು: ನಾನು ರಾಮಚಂದ್ರಾಪುರ ಮಠದ ಶಿಷ್ಯ . ರಾಘವೇಶ್ವರ ಶ್ರೀಗಳು ನಮ್ಮ ಕುಲಗುರುಗಳು. ಶ್ರೀ ಚಂದ್ರಮೌಳೀಶ್ವರ ದೇವರಿಗೆ ರಜತ ಕವಚ ಧಾರಣೆ ಸಂದರ್ಭದಲ್ಲಿ ವಿಶೇಷ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ ಎಂದರು.

    ಶ್ರೀ ಚಂದ್ರಮೌಳೀಶ್ವರನಿಗೆ ರಜತ ಕವಚ ಸಮರ್ಪಣೆ: ಶ್ರೀ ರಾಮಚಂದ್ರಾಪುರ ಮಠದ ಭಕ್ತರಾದ ಹೊಸಪೇಟೆ ಸುಬ್ರಾಯ ಹೆಗಡೆ ಮತ್ತು ಸುಜಾತಾ ಹೆಗಡೆ ನೀಡಿದ ರಜತ ಕವಚವನ್ನು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಧಾರ್ವಿುಕ ವಿಧಿವಿದಾನದೊಂದಿಗೆ ಧಾರಣೆ ಮಾಡಲಾಯಿತು.

    ಶರಾವತಿ ನದಿತೀರದಲ್ಲಿರುವ ಶ್ರೀ ಚಂದ್ರಮೌಳೀಶ್ವರ ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗೆಯಿಂದ ಕರೊನಾ ನಿಯಮದಡಿ ರುದ್ರಪಠಣ, ಸಹಸ್ರ ಬಿಲ್ವಾರ್ಚನೆ ಸೇರಿ ವಿವಿಧ ಧಾರ್ವಿುಕ ಕಾರ್ಯಗಳು ನಡೆದವು. ನಂತರ ಶಾಸ್ತ್ರೋಕ್ತವಾಗಿ ರಜತ ಕವಚ ಧಾರಣೆ ನೆರವೇರಿತು. ರಜತ ಕವಚದಾರಿ ಶ್ರೀ ಚಂದ್ರಮೌಳೀಶ್ವರ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

    ಎಂಎಡಿಬಿ ಅಧ್ಯಕ್ಷ ಎಸ್.ಎಲ್.ಗುರುಮೂರ್ತಿ, ಸಿಪಿಐ ಜಿ.ಕೆ.ಮಧುಸೂದನ್, ಪಿಎಸ್​ಐ ಸಿ.ಆರ್.ಕೊಪ್ಪದ್, ಶ್ರೀ ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿ ರಾಘವೇಂದ್ರ ಮಧ್ಯಸ್ಥ, ಚಂದ್ರಮೌಳೀಶ್ವರ ದೇವಸ್ಥಾನದ ನಿರ್ವಹಣಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಹೊಸಪೇಟೆ ಸುಬ್ರಾಯ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts