More

    ಕಾರ್ಯಕರ್ತೆಯರಿಗೆ ಸಿಗದ ಸೂಕ್ತ ಗೌರವಧನ- ಆವರಗೆರೆ ಚಂದ್ರು ಅಸಮಾಧಾನ

    ದಾವಣಗೆರೆ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಕೆಲಸಕ್ಕೆ ಸರ್ಕಾರ ನ್ಯಾಯಯುತ ಗೌರವಧನ ನೀಡುತ್ತಿಲ್ಲ. ಎಐಟಿಯುಸಿ ಹೋರಾಟಗಳಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ರಾಜ್ಯ ಸಂಚಾಲಕ ಆವರಗೆರೆ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
    ಐಟಿಐ ಕಾಲೇಜು ಸಮೀಪದ ಚೌಡೇಶ್ವರಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ದಾವಣಗೆರೆ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದರು.
    ಅಂಗನವಾಡಿ ಸಹಾಯಕಿಯರು-ಕಾರ್ಯಕರ್ತೆಯರು ಈಗಿರುವ ಕೆಲಸದ ಒತ್ತಡಕ್ಕೆ ಹೊಂದಿಕೊಳ್ಳುವುದು ಕಷ್ಟ. ಹೊಸಬರಿಗೂ ಇದು ಸಾಮಾನ್ಯವಾಗಿದೆ. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಅಂಗನವಾಡಿ ಕಾರ್ಯಕರ್ತೆಯರು ಅನೇಕ ಕೆಲಸ ಮಾಡಿದರೂ ಅದಕ್ಕೆ ತಕ್ಕಂತೆ ಭತ್ಯೆ ನೀಡದಿರುವುದು ಬೇಸರ ತಂದಿದೆ ಎಂದರು.
    ಅಂಗನವಾಡಿಗಳಲ್ಲಿ 10 ವರ್ಷ ಕಾರ್ಯ ನಿರ್ವಹಿಸಿದ ಪದವೀಧರನ್ನು ಅಂಗನವಾಡಿ ಮೇಲ್ವಿಚಾರಕರ ಹುದ್ದೆಗೆ ನೇಮಿಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಕಾರ್ಯಕರ್ತೆಯರು-ಸಹಾಯಕಿಯರ ಗೌರವಧನವನ್ನು ಹೆಚ್ಚಿಸಲಾಗಿದೆ ಎಂದು ಸರ್ಕಾರ 3 ಬಾರಿ ಘೋಷಣೆ ಮಾಡಿದ್ದರೂ ಕಾರ್ಯಗತವಾಗಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಗ್ರಾಚ್ಯುಟಿಗೆ ರಾಜ್ಯ ಸರ್ಕಾರ 40 ಕೋಟಿ ರೂ. ತೆಗೆದಿರಿಸಿದೆ. ಇದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.
    ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎಸ್.ಹಾಲೇಶಪ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನವನ್ನು ಶೇ 75ರಷ್ಟು ಹೆಚ್ಚಿಸಬೇಕು. ಬಡ್ತಿಗೆ ಅರ್ಹರಿದ್ದವರಿಂದ ಲಂಚ ಪಡೆಯಲಾಗುತ್ತಿದೆ. ಯಾವ ಕೆಲಸಕ್ಕೂ ಲಂಚ ಕೊಡಬೇಡಿ. ಯಾರಾದರೂ ಒತ್ತಡ ತಂದಲ್ಲಿ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಸಲಹೆ ನೀಡಿದರು.
    ಪತ್ರಕರ್ತೆ ಎಚ್.ಅನಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ತಳಪಾಯ ಕಟ್ಟಲು ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು ಕೊಡುಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ 66 ಸಾವಿರ ಅಂಗನವಾಡಿಗಳಿದ್ದು, ಅದರಲ್ಲಿ 44 ಸಾವಿರ ಕಟ್ಟಡಗಳು ಸ್ವಂತದ್ದಿವೆ. 11 ಸಾವಿರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅನೇಕ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಹೀಗಾಗಿ ಗಟ್ಟಿಯಾದ ಹೋರಾಟಕ್ಕೆ ಅಣಿಯಾಗಿ ಎಂದರು.
    ಸಮ್ಮೇಳನದಲ್ಲಿ ಫೆಡರೇಷನ್‌ನ ತಾಲೂಕು ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ ಮೃತ್ಯುಂಜಯ, ಆವರಗೆರೆ ವಾಸು, ಮಹಮದ್ ಬಾಷಾ, ಪ್ರಮೀಳಾ, ನರೇಗಾ ರಂಗನಾಥ್, ಜ್ಯೋತಿ ಪಾಟೀಲ್, ತಿಪ್ಪೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts