More

    ಕಾರ್ಮಿಕರನ್ನು ಗುಲಾಮ ಸಂಸ್ಕೃತಿಗೆ ತಳ್ಳಲು ಹುನ್ನಾರ

    ಹುಣಸೂರು: ಕಾರ್ಮಿಕ ಕಾಯ್ದೆಗಳನ್ನು ಬದಲಾಯಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮತ್ತೊಮ್ಮೆ ಕಾರ್ಮಿಕರನ್ನು ಗುಲಾಮ ಸಂಸ್ಕೃತಿಗೆ ತಳ್ಳಲು ಹೊರಟಿದೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವರಾಜು ಆರೋಪಿಸಿದರು.


    ನಗರದಲ್ಲಿ ಸಿಐಟಿಯು ವತಿಯಿಂದ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತ್ಯಾಗ ಬಲಿದಾನಗಳಿಂದ ಪಡೆದ ಕಾರ್ಮಿಕ ಹಕ್ಕುಗಳನ್ನು ಬದಲಾಯಿಸುವ ಮೂಲಕ ಕಾರ್ಮಿಕರಿಗೆ ದ್ರೋಹ ಬಗೆಯಲಾಗುತ್ತಿದೆ. ಇಂದು ದುಡಿಯುವ ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲ. ಮತ್ತೊಂದು ಕಡೆ ಕಾಯಂ ಎನ್ನುವುದು ಕನಸಿನ ಮಾತಾಗಿದೆ. ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಕಾರ್ಮಿಕರಿಗೆ ರಕ್ಷಣೆ ನೀಡಬೇಕಾದ ಸರ್ಕಾರಗಳು ಕಾರ್ಮಿಕರ ಅಭದ್ರತೆಯಲ್ಲಿ ಇರುವಂತೆ ಮಾಡಿ ಅನ್ಯಾಯ ಮಾಡುತ್ತಿದೆ. ಕಾರ್ಮಿಕರ ವಿಮೋಚನೆಗೆ ಹೋರಾಟ ಒಂದೇ ಮಾರ್ಗ. ಹೋರಾಟವನ್ನು ಬಿಟ್ಟರೆ ಕಾರ್ಮಿಕರು ಉಳಿಗಾಲವಿಲ್ಲ. ಆದರಿಂದ ಸಂಪೂರ್ಣವಾಗಿ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಕಾರ್ಮಿಕರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.


    ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ತಮ್ಮ ಬೆವರಿನ ಮೂಲಕ ಸಂಪತ್ತನ್ನು ಸೃಷ್ಟಿ ಮಾಡುವ ಕಾರ್ಮಿಕರಿಗೆ ತಲೆಗೊಂದು ಶಾಶ್ವತ ಸೂರಿಗೂ ಗತಿಯಿಲ್ಲದಂತಾಗಿದೆ ಎಂದು ಬೇಸರಿಸಿದರು.
    ಸಿಐಟಿಯು ತಾಲೂಕು ಸಂಚಾಲಕ ಬಸವರಾಜು ವಿ.ಕಲ್ಕುಣಿಕೆ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಪುಷ್ಪ, ಬೆಳ್ತೂರು ವೆಂಕಟೇಶ್, ಪಂಚಾಯಿತಿ ನೌಕರರ ಸಂಘದ ಜಗದೀಶ್, ತಂಬಾಕು ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಗೋವಿಂದಯ್ಯ ಮಾತನಾಡಿದರು.


    ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸಂವಿಧಾನ ವೃತ್ತದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಅಂಗನವಾಡಿ ನೌಕರ ಸಂಘದ ಜಿಲ್ಲಾಧ್ಯಕ್ಷೆ ಮಂಗಳಗೌರಮ್ಮ, ಕಟ್ಟಡ ಕಾರ್ಮಿಕರ ಸಂಘದ ಶಿವರಾಮ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೆಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಸಿದ್ದಯ್ಯ, ಮುಳ್ಳೂರು ಮಹದೇವ, ರಾಜೇಶ್, ಕಟ್ಟಡ ಕಾರ್ಮಿಕ ಸಂಘದ ವೆಂಕಟೇಶ್, ರವಿನಾಯಕ, ಬಿಸಿಯೂಟ ನೌಕರರ ಸಂಘದ ಮಂಜುಳಾ, ರಾಜಮ್ಮ, ಪ್ರಶೀಲ, ಪಂಚಾಯತ್ ನೌಕರರ ಸಂಘದ ದಿನೇಶ್, ಲೋಕೇಶ್, ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts