More

    ಕಾರ್ಪೊರೇಟ್ ಉದ್ಯೋಗಿಗಿರಲಿ ಪರಿಸರ ಕಾಳಜಿ  -ವಸಂತ್ ಕೇಶವ ಕಜೆ ಹೇಳಿಕೆ

    ದಾವಣಗೆರೆ: ಕಾರ್ಪೊರೇಟ್ ಸಂಸ್ಥೆಯ ಉದ್ಯೋಗಿಗಳು ಪರಿಸರ ರಕ್ಷಣೆ ಕಡೆಗೂ ಕಾಳಜಿ ವಹಿಸಬೇಕು ಎಂದು ಮಂಗಳೂರಿನ ಕಜೆ ವೃಕ್ಷಾಲಯದ ವಸಂತ್ ಕೇಶವ ಕಜೆ ಹೇಳಿದರು.

    ಇಲ್ಲಿನ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಹಾಗೂ ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ರೀಸರ್ಚ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2020-22ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
    ಕಾರ್ಪೊರೇಟ್ ಜನರು ತಮ್ಮ ಸಂಪಾದನೆಗಾಗಿ ಪ್ರಕೃತಿಯನ್ನು ನಿರ್ಲಕ್ಷಿಸುತ್ತಾರೆಂಬ ಆಪಾದನೆ ಇದೆ. ಸಂಪತ್ತು ವೃದ್ಧಿ ಕಾರ್ಪೊರೇಟ್ ಜಗತ್ತಿನ ಉದ್ದೇಶವಾದರೂ ಪರಿಸರ ನಾಶವಾಗದಂತೆ ಎಚ್ಚರ ವಹಿಸಬೇಕು. ಪ್ರಕೃತಿ ಶೋಷಣೆ ಸಲ್ಲದು ಎಂದರು.
    ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ಕೆಲಸದ ಜತೆಗೆ ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯಿಕ ಚಟುವಟಿಕೆಗಳ ಸಹವಾಸ ಬೆಳೆಸಿಕೊಳ್ಳಬೇಕು.
    ಇದು ಕೆಲಸದಲ್ಲಿರುವ ಏಕತಾನತೆಯನ್ನು ದೂರ ಮಾಡುತ್ತದೆ. ಸಾಂಸ್ಥಿಕ ಜಗತ್ತಿನಲ್ಲಿ ವ್ಯವಹರಿಸುವಾಗ ಇನ್ನೊಬ್ಬರ ಹೃದಯಕ್ಕೂ ಹತ್ತಿರವಾಗಬೇಕು. ವೈಯಕ್ತಿಕ ಶಿಸ್ತು ಅತ್ಯಗತ್ಯ ಎಂದು ಸಲಹೆ ನೀಡಿದರು.
    ಭಾರತ ಬಹು ಭಾಷೆಯುಳ್ಳ ದೇಶ. ಹೆಚ್ಚು ಭಾಷೆಗಳನ್ನು ಕಲಿಯಬೇಕು. ಪಾಶ್ಚಿಮಾತ್ಯ ಭಾಷೆಗಳಾದ ಸ್ಪ್ಯಾನಿಷ್, ಫ್ರೆಂಚ್ ಕಲಿಯಬೇಕು. ಇದು ಉದ್ಯೋಗಕ್ಕೆ ನೆರವಾಗುತ್ತದೆ. ಕನ್ನಡಿಗರು ಅನ್ಯ ಭಾಷೆಗಳ ಬಗ್ಗೆಯೂ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
    ಉತ್ತಮ ಕಲಿಕೆಯಿದ್ದಲ್ಲಿ ಗಳಿಕೆಯೂ ಒಳ್ಳೆಯದಾಗಿರಲಿದೆ. ಪದವೀಧರರು ಉದ್ಯೋಗಕ್ಕೆ ಸೇರಿದ ಬಳಿಕ ಸಂಸ್ಥೆಯನ್ನು ಬಿಡುವ ಆಲೋಚನೆ ಮಾಡುತ್ತಿರುತ್ತಾರೆ. ಜ್ಞಾನಾರ್ಜನೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಹೆಚ್ಚಿನ ಸಂಭಾವನೆ ನಿರೀಕ್ಷಿಸದೇ ಕನಿಷ್ಠ 2ರಿಂದ 3 ವರ್ಷಗಳಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಬೇಕು. ಅದು ಉತ್ತಮ ಅನುಭವ ನೀಡುತ್ತದೆ ಎಂದು ಹೇಳಿದರು.
    ಬಾಪೂಜಿ ಬಿ-ಸ್ಕೂಲ್ ನಿರ್ದೇಶಕ ಡಾ.ಎಚ್.ವಿ.ಸ್ವಾಮಿ ತ್ರಿಭುವನಾನಂದ ಮಾತನಾಡಿ, ಪಾಲಕರು ಮಕ್ಕಳಿಗೆ ಕಲಿಸುವ ತಾಳ್ಮೆ ಪಾಠ ಕಾರ್ಪೊರೇಟ್ ಜಗತ್ತಿಗೂ ಅತ್ಯವಶ್ಯಕ. ಹಣದ ಹಿಂದೆ ಹೋಗದೇ ಹಣವೇ ನಿಮ್ಮ ಹಿಂಬಾಲಿಸಿಕೊಂಡು ಬರುವಂತೆ ಕೆಲಸ ಮಾಡಬೇಕು. ಆಲೋಚನಾ ವಿಧಾನ, ಮನೋಭೂಮಿಕೆಯಲ್ಲಿ ಬದಲಾವಣೆ ಬಾರದೇ ಪ್ರಗತಿ ಸಾಧ್ಯವಿಲ್ಲ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ 160 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿಭಾಗದ ಮುಖ್ಯಸ್ಥ ಸುಜಿತ್‌ಕುಮಾರ್ ಪ್ರಮಾಣ ವಚನ ಬೋಧಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ವೀರಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಎಸ್.ಎ.ಪ್ರಕಾಶ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts