More

    ಕಾನೂನು ಬಾಹಿರವಾಗಿ ಸೀಟು ಹಂಚಿಕೆ ಆರೋಪ;ಕೆಇಎಗೆ 5 ಲಕ್ಷ ರೂಪಾಯಿ ದಂಡ,

    ಬೆಂಗಳೂರು: ರೇಡಿಯೋ ಡಯಾಗ್ನೋಸಿಸ್ ವೈದ್ಯಕೀಯ ಸ್ನಾತಕೋತ್ತರ ಸೀಟ್ ಬ್ಲಾಕಿಂಗ್ ಮತ್ತು ಕಾನೂನು ಬಾಹಿರವಾಗಿ ಡಾ. ಸುನೀಲ್ ಕುಮಾರ್ ಎಂಬುವರಿಗೆ ಸೀಟು ಹಂಚಿಕೆ ಮಾಡಿದ ಆರೋಪದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

    ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಡಾ. ಸಿ.ಕೆ.ರಜಿನಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ, 2.5 ಲಕ್ಷ ರೂಪಾಯಿಯನ್ನು ಡಾ. ಸಿ.ಕೆ.ರಜನಿ ಅವರಿಗೆ, ಉಳಿದ ಹಣವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಸರಿನಲ್ಲಿ ಠೇವಣಿ ಇಡಬೇಕೆಂದು ಸೂಚನೆ ನೀಡಿದೆ.

    ರೇಡಿಯೋ ಡಯೋಗ್ನೋಸಿಸ್ ಸೀಟನ್ನು ಅರ್ಜಿದಾರರಿಗೆ ಮರು ಹಂಚಿಕೆ ಮಾಡಬೇಕು, ವೈದ್ಯಕೀಯ ಸ್ನಾತಕೋತ್ತರ ವಿಭಾಗದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಅರ್ಜಿದಾರರು ಪಾವತಿಸಿರುವ ಶುಲ್ಕವನ್ನು ಎಂ.ಆರ್. ವೈದ್ಯಕೀಯ ಕಾಲೇಜಿನ ರೇಡಿಯೋ ಡಯಾಗ್ನೋಸಿಸ್ ಸೀಟಿಗೆ ಸರಿಹೊಂದಿಸಬೇಕು ಎಂದು ಪೀಠ ತಿಳಿಸಿದೆ.

    2023ರ ಸೆ.19ರಂದು ಡಾ.ಸುನೀಲ್ ಕುಮಾರ್ ಎಂಬುವರಿಗೆ ಕೌನ್ಸೆಲಿಂಗ್‌ನಿಂದ ಹಿಂದೆ ಸರಿಯಲು ಅನುಮತಿ ನೀಡಲಾಗಿತ್ತು. ಆದರೆ, ಕೆಇಎ ರೇಡಿಯೋಗ್ನೋಸಿಸ್ ಸೀಟನ್ನು 2023ರ ಅ.6 ರವರೆಗೂ ಲಭ್ಯವಿರುವುದಾಗಿ ತೋರಿಸಿಕೊಂಡು ಬಂದಿದೆ. ಜತೆಗೆ, ಅದೇ ದಿನ ಮಧ್ಯಾಹ್ನ 2.40ರ ಸಮಯಕ್ಕೆ ಡಾ.ಸುನೀಲ್ ಕುಮಾರ್ ಎಂಬುವರಿಗೆ ಹಂಚಿಕೆಯಾಗಿರುವುದಾಗಿ ಪ್ರಕಟಿಸಿದೆ. ಈ ಬೆಳವಣಿಗೆಯಿಂದ ಡಾ.ಸುನೀಲ್ ಕುಮಾರ್ ಎಂಬುವರಿಗೆ ನಕಲಿಯಾಗಿ ಸೀಟು ಹಂಚಿಕೆ ಮಾಡಿದೆ ಎಂಬ ಅಂಶ ಗೊತ್ತಾಗಲಿದೆ ಎಂದು ಪೀಠ ತಿಳಿಸಿದೆ.

    ಅರ್ಜಿದಾರರಿಗೆ ಇಷ್ಟವಿಲ್ಲದ ಸ್ತ್ರೀ ರೋಗಶಾಸ್ತ್ರದಲ್ಲಿ ಸೀಟು ಪಡೆದುಕೊಳ್ಳುವಂತೆ ಒತ್ತಾಯ ಮಾಡಿ ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಮಾಡಲಾಗಿದೆ. ಸರ್ಕಾರದ ಕಾನೂನು ನಿಯಮವನ್ನು ಯಾರೇ ಉಲ್ಲಂಘಿಸಿದರೂ ಸಹಿಸಲಾಗುವುದಿಲ್ಲ. ಸೀಟು ಹಂಚಿಕೆ ವಿಚಾರದಲ್ಲಿ ಪರೀಕ್ಷಾ ಪ್ರಾಧಿಕಾರ ಈ ರೀತಿಯಲ್ಲಿ ನಿಭಾಯಿಸಿರುವುದು ದುರದೃಷ್ಟಕರ ಎಂದು ಪೀಠ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts