More

    ಕಾಣದಂತೆ ಮಾಯವಾದನು…. -ಪೊಲೀಸರಿಗೆ ತಲೆನೋವಾದ ಪಿಒಪಿ ಡಕ್ -ನಿಷ್ಕರ್ಷ ಸಿನಿಮಾ ನೆನಪಿಸಿದ ಕಳವು ಯತ್ನ ಪ್ರಕರಣ

    ದಾವಣಗೆರೆ: ಸಾಹಸಸಿಂಹ ಖ್ಯಾತಿಯ ನಟ ದಿ.ಡಾ.ವಿಷ್ಣುವರ್ಧನ್ ನಟನೆಯ ನಿಷ್ಕರ್ಷ ಸಿನಿಮಾ ಯಾರಿಗೆ ಗೊತ್ತಿಲ್ಲ? ಬ್ಯಾಂಕ್ ದರೋಡೆಗೆ ತಂಡವೊಂದು ನುಗ್ಗುತ್ತದೆ. ಅಲ್ಲಿದ್ದ ಗ್ರಾಹಕರು-ಸಿಬ್ಬಂದಿಯನ್ನು ಒತ್ತೆಯಾಳಾಗಿಸುತ್ತದೆ. ಆಗ ಲಿಫ್ಟ್ ಆಪರೇಟರ್ ವೆಂಟಿಲೇಟರ್ ಕಿಂಡಿ ದಾಟಿ ಅಲ್ಲಿನ ದೃಶ್ಯಾವಳಿಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ.
    ಅಷ್ಟಕ್ಕೂ ಈಗೇಕೆ ಈ ಕತೆ ಅಂತೀರಾ? ಅಂಥದ್ದೇ ಘಟನೆ ಹೋಲುವ ಪ್ರಕರಣವೊಂದಕ್ಕೆ ದಾವಣಗೆರೆ ಸಾಕ್ಷಿಯಾಗಿದೆ. ಪಿಒಪಿ ಡಕ್ ಮೂಲಕವೇ ಅಂಗಡಿಯೊಂದರ ಕಳ್ಳತನಕ್ಕೆ ನುಗ್ಗಿದ ಠಕ್ಕನ ಕತೆ ಇದು.
    ಸೈರನ್ ಕೂಗಿದರೂ ಆತ ಹೊರಬರಲಿಲ್ಲ. ಸುತ್ತಲೂ ಗೋಡೆಗಳಿದ್ದು, ಯಾವುದೇ ಕಿಟಕಿಗಳಿಲ್ಲದ್ದರಿಂದ ಹೋದ ದಾರಿಯಲ್ಲೇ ಕಳ್ಳ ಬರಬೇಕು. ಅರ್ಧ ದಿನ ಹುಡುಕಿದರೂ ಸಿಗದ ಕಳ್ಳ ಎತ್ತ ಹೋದ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿದೆ.
    ಘಟನೆ ವಿವರ:
    ಮಹಾತ್ಮ ಗಾಂಧಿ ವೃತ್ತದಲ್ಲಿನ ಟ್ರೆಂಡ್ಸ್ ಬಟ್ಟೆಯಂಗಡಿಗೆ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಕಳ್ಳನೊಬ್ಬ ಕಳ್ಳತನಕ್ಕೆ ಹೊಂಚು ಹಾಕುತ್ತಾನೆ. ಹೊರಗಿದ್ದ ಫ್ಲೆಕ್ಸ್ ಆ್ಯಂಗುಲರ್ ಸಹಾಯದಿಂದ ಮೇಲಕ್ಕೆ ಹತ್ತಿ ಅಲ್ಲಿಂದ ಅಂಗಡಿಯಲ್ಲಿ ಅಳವಡಿಸಿದ್ದ ಪಿಒಪಿ ಡಕ್ ಮೂಲಕ ಒಳ ನುಸುಳಿದ್ದಾನೆ.
    ಸ್ವಲ್ಪ ಹೊತ್ತಿನಲ್ಲೇ ಸೈರನ್ ಕೂಗತೊಡಗಿದೆ. ಮುಂಬೈನಲ್ಲಿದ್ದ ಅದರ ಕಂಪನಿ ಮುಖ್ಯಸ್ಥರಿಗೆ ಸಂದೇಶ ದೊರೆತಿದ್ದು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲ ಸಮಯದಲ್ಲೇ ಅಂಗಡಿಯ ವ್ಯವಸ್ಥಾಪಕರೊಂದಿಗೆ ಕೆಟಿಜೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
    ಅಂಗಡಿ ಷಟರ್ಸ್‌ ತೆರೆದ ಪೊಲೀಸರು ಅಂಗಡಿ ತುಂಬ ಶೋಧ ನಡೆಸಿದ್ದಾರೆ. ಯಾವುದೇ ಅಡ್ಡ ಬೀಮ್ ಇಲ್ಲದೆ, ಸುಮಾರು 150 ಅಡಿ ವಿಸ್ತಾರದ ಪಿಒಪಿ ಡಕ್ ಒಳಗೆ ಇಬ್ಬರು ಒಳಹೋಗಿದ್ದಾರೆ. ವಿದ್ಯುತ್ ವೈರ್‌ಗಳನ್ನು ಸರಿಸುತ್ತಲೇ ಬ್ಯಾಟರಿ ಹಿಡಿದು ಅರ್ಧ ದಾರಿಯವರೆಗೂ ತಲಾಷ್ ಮಾಡಿದ್ದಾರೆ. ಅಲ್ಲಲ್ಲಿ ಪಿಒಪಿ ಡಕ್ ಒಡೆದು ನೋಡಿದ್ದಾರೆ. ಶನಿವಾರ ಮಧ್ಯಾಹ್ನದವರೆಗೂ ಹುಡುಕಾಟ ನಡೆಸಿದರೂ ಎಲ್ಲೂ ಕಳ್ಳನ ಸುಳಿವಿಲ್ಲ!
    ಅಚ್ಚರಿ ವಿಚಾರ ಎಂದರೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳ ಒಳಗೆ ನುಸುಳಿದ್ದ ದೃಶ್ಯಾವಳಿ ಸೆರೆಯಾಗಿದೆ. ಆದರೆ ಆತ ಹೊರಗೆ ಹೋದ ಬಗ್ಗೆ ಯಾವುದೇ ದೃಶ್ಯಗಳಿಲ್ಲ. ಸೆಲ್ಲರ್‌ಗೆ ಹಾಕಿದ್ದ ಬೀಗ ಕೂಡ ಹಾಗೇ ಇದೆ. ಲಿಫ್ಟ್ ಕೂಡ ಕೆಟ್ಟಿತ್ತು. ಅಂಗಡಿಯಲ್ಲಿ ಎಲ್ಲೂ ಕಿಟಕಿಗಳಿಲ್ಲದ್ದರಿಂದ ಹೊರಹೋಗಲು ಅವಕಾಶವೂ ಇಲ್ಲ.
    ಮಧ್ಯವಯಸ್ಕ ಮತ್ತು ವಿಕಲಾಂಗನಂತಿರುವ ಕಳ್ಳ, ಮುಖಕ್ಕೆ ಕರವಸ್ತ್ರ ಕಟ್ಟಿ ಕೊಂಡಿದ್ದು, ಒಂದೇ ಕೈನಲ್ಲಿ ಎಲ್ಲವನ್ನೂ ಆಪರೇಟ್ ಮಾಡುತ್ತಿದ್ದ ಎನ್ನಲಾಗಿದೆ. ನಗದು ಅಥವಾ ಯಾವುದೇ ವಸ್ತು ಕಳವಾಗಿಲ್ಲ. ಅಂಗಡಿ ವ್ಯವಸ್ಥಾಪಕ ಚಂದ್ರಶೇಖರ್ ನೀಡಿದ ದೂರಿನನ್ವಯ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಕಾಟದ ಬಳಿಕ ಸಂಜೆ ನಂತರ ಅಂಗಡಿ ನಡೆಸಲು ಅನುಮತಿ ನೀಡಲಾಗಿತ್ತು. ಭಾನುವಾರ ಕೂಡ ಶೋಧ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts