More

    ಕಾಡಾನೆ ಉಪಟಳಕ್ಕೆ ಕಬ್ಬು, ಟೊಮ್ಯಾಟೊ ನಾಶ

    ಮಳವಳ್ಳಿ : ತಾಲೂಕಿನ ವಿವಿಧೆಡೆ ರೈತರ ಜಮೀನುಗಳ ಮೇಲೆ ಗುರುವಾರ ರಾತ್ರಿ ಲಗ್ಗೆಯಿಟ್ಟಿರುವ ಕಾಡಾನೆಗಳ ದಂಡು ಕಟಾವಿಗೆ ಬಂದಿರುವ ಕಬ್ಬು ನಾಶಪಡಿಸುತ್ತಿರುವುದರ ಜತೆಗೆ ಟೊಮ್ಯಾಟೊ ಸೇರಿದಂತೆ ಪಂಪ್‌ಸೆಟ್ ಪರಿಕರಗಳನ್ನೂ ನಾಶಮಾಡುತ್ತಿವೆ.

    ಸುಮಾರು ಒಂಬತ್ತು ಆನೆಗಳ ಗುಂಪು ಕಾಡಿನಿಂದ ನಾಡಿಗೆ ಬಂದಿದ್ದು, ಶುಕ್ರವಾರ ಬೆಳಗಿನ ಜಾವ ನೆಲಮಾಕನಹಳ್ಳಿ ಸಮೀಪ ಕಾಣಿಸಿಕೊಂಡಿದ್ದು, ಸುತ್ತ ಮುತ್ತಲ ಗ್ರಾಮಗಳ ರೈತರ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬನ್ನು ಮನಸೋಯಿಚ್ಛೆ ತಿಂದಿವೆ. ಕುಡಿಯುವ ನೀರಿನ ದಾಹ ನೀಗಿಸಿಕೊಳ್ಳಲು ಜಮೀನಿನಲ್ಲಿ ಬೆಳೆಗಳಿಗೆ ಪೂರೈಸಲು ಅಳವಡಿಸಿದ್ದ ಪಂಪ್‌ಸೆಟ್ ಪೈಪ್‌ಲೈನ್‌ಗಳನ್ನು ತುಳಿದು ಹಾಕಿವೆ. ನೂರಾರು ಎಕರೆಯಷ್ಟು ಬೆಳೆ ನಾಶವಾಗಿದ್ದು, ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಾಡಾನೆ ದಾಳಿಗೆ ಸಿಲುಕಿದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಗಜಪಡೆ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ.

    ನೆಲಮಾಕನಹಳ್ಳಿ ಮಲ್ಲೇಶ್ ಅವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆಯನ್ನು ತುಳಿದು ನಾಶಮಾಡಿವೆ. ಪ್ರಸ್ತುತ ಟೊಮ್ಯಾಟೊಗೆ ಭಾರೀ ಬೇಡಿಕೆ ಇದ್ದು, ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ಮಲ್ಲೇಶ್ ಚಿಂತೆಗೀಡಾಗಿದ್ದಾರೆ. ಇದೇ ರೀತಿ ಅಭಿಷೇಕ್, ಸ್ವಾಮಿ ಅವರ 5 ಎಕರೆ ಕಬ್ಬಿನ ಗದ್ದೆಗೆ ನುಗ್ಗಿ ಮನಬಂದಂತೆ ತಿಂದು ತುಳಿದು ಬೆಳೆ ನಾಶಮಾಡಿವೆ. ನಂತರ ಪಕ್ಕದಲ್ಲೇ ಇರುವ ಸಿದ್ದೇಗೌಡ ಅವರ ಜಮೀನಿನಲ್ಲಿ ಪೈಪ್ ಫಿಲ್ಟರ್‌ಗಳನ್ನ ತುಳಿದು ಹಾಕಿವೆ. ಆನೆಗಳನ್ನು ನೋಡಲು ಜನಸಂದಣಿ ಹೆಚ್ಚಿದ ಪರಿಣಾಮ ಘಾಸಿಗೊಂಡು ಪಯಣ ಮುಂದುವರಿಸಿ ಕಂದೇಗಾಲ ಸಮೀದ ತಮ್ಮಡಹಳ್ಳಿ ಶಿವಣ್ಣ ಅವರಿಗೆ ಸೇರಿದ ಗಬ್ಬಿನ ಗದ್ದೆಗೆ ಸೇರಿಕೊಂಡು ವಾಸ್ತವ್ಯ ಹೂಡಿವೆ. ಅಷ್ಟರಲ್ಲಾಗಲೇ ಸಂಜೆಯಾಗಿದ್ದರಿಂದ ರಾತ್ರಿಯ ನಂತರ ಕಾರ್ಯಾಚರಣೆ ಮುಂದುವರೆಸಿ ಮುತ್ತತ್ತಿ ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಿಕೊಂಡು ಜಮೀನನ್ನು ಸುತ್ತುವರಿದು ಮೊಕ್ಕಾಂ ಹೂಡಿದರು. ಆದರೇ ರಾತ್ರಿ ಪಟಾಕಿ ಸಿಡಿಸಿ ಕಾಡಿಗಟ್ಟುವ ಕಾರ್ಯಕ್ಕೆ ಮುಂದಾದ ವೇಳೆ ಆನೆಗಳ ದಂಡು ಕಾಡಿನತ್ತ ಸಾಗದೇ ಹಿಂದಿರುಗಿ ಬೆಳಗ್ಗೆ ಬಂದಿದ್ದ ಹಾದಿಯಲ್ಲೇ ಸಾಗತೋಡಗಿದವು. ಶನಿವಾರ ಬೆಳಗಿನ ಜಾವದ ವೇಳೆಗೆ ದೇವಿಪುರ ಸಮೀಪದ ಜೆ.ಸಿ.ಪುರ ಗ್ರಾಮದ ರೈತ ಮರಿಮಾದಯ್ಯ ಅವರ ಜಮೀನಿನಲ್ಲಿದ್ದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ. ಬೆಳಗಿನ ವೇಳೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದರೆ ಜನರು ನೋಡಲು ದುಂಬಾಲು ಬೀಳುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಸ್ಥಗಿತಗೊಳಿಸಲಾಗಿದ್ದು, ಸಂಜೆಯ ನಂತರ ಮುಂದುವರಿಯಿತು. ಜನರು ಸಹಕಾರ ನೀಡಬೇಕೆಂದು ಅರಣ್ಯಾಧಿಕಾರಿ ಮಹದೇವು ಮನವಿ ಮಾಡಿದ್ದಾರೆ.

    ಆನೆಗಳ ದಾಳಿಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದ್ದು, ಸರ್ಕಾರಕ್ಕೆ ವರದಿ ನೀಡಿ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

    ಬೆಳೆ ನಷ್ಟದ ಪರಿಹಾರಕ್ಕಾಗಿ ಆಗ್ರಹ: ಆನೆಗಳ ದಾಳಿಯಿಂದಾಗಿ ರೈತರ ಬೆಳೆದಿದ್ದ ಟೊಮ್ಯಾಟೊ, ಕಬ್ಬು ಹಾಗೂ ಪಂಪ್‌ಸೆಟ್ ಪರಿಕರಗಳೆಲ್ಲವನ್ನು ಮುರಿದು ಹಾಳು ಮಾಡಿದ್ದು, ಇದರಿಂದ ನೂರಾರು ಎಕರೆಯಷ್ಟು ಬೆಳೆ ನಾಶವಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ರಕ್ಷಿಸಿ ನಷ್ಟಕ್ಕೆ ಒಳಗಾದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರರ್ ರಾಜ್‌ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts