More

    ಕಾಡಂಚಿನ ಜನರ ಕಷ್ಟ ಅಷ್ಟಿಷ್ಟಲ್ಲ


    ಮಾನವ-ವನ್ಯಜೀವಿ ಸಂಘರ್ಷಕ್ಕೆ ಅಂತ್ಯವಿಲ್ಲ ಕಗ್ಗಂಟಾದ ಅರಣ್ಯ ಇಲಾಖೆ ನಿಯಮ


    ನಂಜನಗೂಡು: ತಾಲೂಕಿನ ಹೆಡಿಯಾಲ ಭಾಗದ ಕಾಡಂಚಿನ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಅಂತ್ಯವೇ ಇಲ್ಲ. ಕಾಡು ಪ್ರಾಣಿಗಳ ಉಪಟಳ ಹಾಗೂ ಅರಣ್ಯ ಇಲಾಖೆಯ ಕೆಲವು ನಿಯಮಾವಳಿಗಳು ಈ ಭಾಗದ ರೈತರನ್ನು ಹೈರಾಣಾಗಿಸಿದೆ.

    ತಾಲೂಕಿನ ಗಡಿಭಾಗದ ವೆಂಕಟಗಿರಿ ಕಾಲನಿ, ಡೋರಣಕಟ್ಟೆ, ನಾಗಣಪುರ ಕಾಲನಿ, ವೆಂಕಟಾಚಲಪುರ ಸೇರಿದಂತೆ ನಾನಾ ಗ್ರಾಮಗಳು ಬಂಡೀಪುರ ಅರಣ್ಯ ವ್ಯಾಪ್ತಿಯ ಹೆಡಿಯಾಲ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಆನೆ, ಹುಲಿ, ಚಿರತೆ, ಕಾಡುಹಂದಿ ಸೇರಿದಂತೆ ವನ್ಯಜೀವಿಗಳು ಅರಣ್ಯ ದಾಟಿ ಬರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಪರಿಣಾಮ ರೈತರು ಬೆಳೆದ ಹತ್ತಿ, ರಾಗಿ, ಬಾಳೆ ಸೇರಿದಂತೆ ನಾನಾ ಫಸಲು ನಾಶ ಮಾಡುತ್ತಿರುವುದು ಆ ಭಾಗದ ರೈತರನ್ನು ಕಂಗಾಲಾಗಿಸಿದೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಎಂಬ ಕಾರಣಯೊಡ್ಡಿ ರೈತರಿಗೆ ಪರಿಹಾರವನ್ನೂ ನೀಡಲ್ಲ.

    ಕಂದಾಯ ಭೂಮಿಯಲ್ಲಿ ಕೃಷಿ ಮಾಡುವ ರೈತರ ಬೆಳೆಹಾನಿ ಮಾಡಿದರೆ ಅರಣ್ಯ ಇಲಾಖೆ ನಿಗದಿ ಮಾಡಿರುವ ಪುಡಿಗಾಸು ಪರಿಹಾರದಿಂದ ರೈತರಿಗೇನು ಅನುಕೂಲಕರವಾಗಿಲ್ಲ. ಫಸಲು ತೆಗೆಯಲು ರೈತರು ಹೂಡಿದ ಹಣದಲ್ಲಿ ನಾಲ್ಕನೇ ಒಂದು ಭಾಗದಷ್ಟೂ ಪರಿಹಾರ ಸರ್ಕಾರದಿಂದ ಸಿಗುವುದಿಲ್ಲ.
    ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೂ ಪರಿಹಾರ ನೀಡಲು ನಾನಾ ಸಬೂನು ಹೇಳುವ ಅಧಿಕಾರಿಗಳು ಅಲೆದಾಡಿಸುತ್ತಾರೆ. ಆರಂಭದಲ್ಲಿ ಸ್ವಲ್ಪ ಪರಿಹಾರ ನೀಡಿ ಉಳಿಕೆ ಪರಿಹಾರ ನೀಡಲು ಅಧಿಕಾರಿಗಳು ಸಂತ್ರಸ್ತರಿಗೆ ದಾಖಲೆಗಳನ್ನು ನೀವೆ ತರುವಂತೆ ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹುಲಿ ದಾಳಿಗೆ ಬಲಿಯಾದ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಚೆಕ್ ನೀಡಿ ಉಳಿದ 5 ಲಕ್ಷ ರೂ. ಪರಿಹಾರ ಬೇಕಾದರೆ ಮರಣೋತ್ತರ ಪರೀಕ್ಷೆ ವರದಿ ಸೇರಿದಂತೆ ಇತರ ದಾಖಲೆಗಳನ್ನು ಹೊಂದಿಸಿಕೊಂಡು ಬರುವಂತೆ ಅಲೆದಾಡಿಸುತ್ತಿದ್ದಾರೆ.

    ಕಾಡಿನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿರುವ ಗಿರಿಜನರು, ಆದಿವಾಸಿಗಳನ್ನು ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಅಮಾನುಷವಾಗಿ ನಡೆಸಿಕೊಳ್ಳುತ್ತಾರೆಂಬ ಆರೋಪಗಳು ಕೇಳಿಬಂದಿದೆ. ಬೆಂಕಿ ನಂದಿಸಲು ಹಾಡಿ ಜನರನ್ನು ಕೆಲಸಕ್ಕೆ ಕರೆದುಕೊಳ್ಳುವ ಅರಣ್ಯ ಇಲಾಖೆಯು, ಕೆಲಸಗಾರರನ್ನೇ ಕಾಡು ಕಳ್ಳರು ಎಂಬಂತೆ ಬಿಂಬಿಸುತ್ತದೆ ಎಂಬ ಅಪವಾದವೂ ಹಾಡಿಗಳಲ್ಲಿ ಕೇಳಿಬಂದಿದೆ.
    ಸದಾ ಸಂಘರ್ಷದಲ್ಲೇ ಜೀವನ ಸಾಗಿಸುತ್ತಿರುವ ಗಿರಿಜನರು, ಕಾಡಂಚಿನ ಭಾಗದ ಗ್ರಾಮಸ್ಥರ ಬವಣೆ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

    ಫಸಲು ಆನೆ ಪಾಲಾಯಿತು
    ಸಾಲ ಮಾಡಿ ರಾಗಿ ಫಸಲು ಬೆಳೆದಿದ್ದೆ. ಫಸಲು ಕೈಸೇರಬೇಕೆನ್ನುವಷ್ಟರಲ್ಲಿ ಆನೆಗಳು ರಾತ್ರೋರಾತ್ರಿ ದಾಳಿಯಿಟ್ಟು ನಾಶ ಮಾಡಿವೆ. ಅರಣ್ಯ ಇಲಾಖೆಯಿಂದ ಪರಿಹಾರಕ್ಕೆ ಮೊರೆ ಹೋದರೆ ನಾನು ಖರ್ಚು ಮಾಡಿದ ಹಣದಲ್ಲಿ ಅಲ್ಪವೂ ಸಿಗುವುದಿಲ್ಲ. ಹೀಗಾದರೆ ನಾವು ಭೂಮಿ ನಂಬಿ ಜೀವನ ನಡೆಸುವುದಾದರೂ ಹೇಗೆ ಎಂಬ ಆತಂಕ ಸದಾ ನಮ್ಮನ್ನು ಕಾಡುತ್ತಿದೆ.
    ನಿಂಗಯ್ಯ, ಹರಳಹಳ್ಳಿ ಹಾಡಿ ನಿವಾಸಿ.

    ಅಧಿಕಾರಿಗಳು ತಲೆಕೆಡಿಸಿಕೊಳ್ಳುವುದಿಲ್ಲ
    ಹುಲಿ ದಾಳಿಗೆ ನಮ್ಮ ಊರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ. ಎಂಟು ವರ್ಷಗಳ ಹಿಂದೆ ನಾಗರಾಜು ಹಾಗೂ ಮೂರು ತಿಂಗಳ ಹಿಂದೆ ಪುಟ್ಟಸ್ವಾಮಿ ಗೌಡ ಹುಲಿ ದಾಳಿಗೆ ಮೃತಪಟ್ಟರು. ಇದರಿಂದ ಬಯಲು ಸೀಮೆಯಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಲು ಭಯಪಡುವಂತಾಗಿದೆ. ಹುಲಿ ದಾಳಿ ನಡೆಸಿದಾಗ ಜನರ ಸಮಾಧಾನಕ್ಕೆ ಅದನ್ನು ಸೆರೆ ಹಿಡಿಯಲು ಬೋನು ಇರಿಸುತ್ತಾರೆ. ಸ್ವಲ್ಪ ದಿನಗಳ ಬಳಿಕ ಅರಣ್ಯ ಇಲಾಖೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ.
    ಸ್ವಾಮಿ, ಒಡೆಯನಪುರ, ನಂಜನಗೂಡು ತಾ.

    ನಾಗನಾಪುರ ಗೇಟ್ ಬಳಿ ರೈಲ್ವೆ ಕಂಬಿ ಅಳವಡಿಸಿ
    ಅರಣ್ಯ ಪ್ರದೇಶ ಸುತ್ತ ರೈಲ್ವೆ ಕಂಬಿ ಹಾಕಿ ನಾಗನಾಪುರ ಗೇಟ್ ಬಳಿ ಕಂಬಿ ಅಳವಡಿಸದೆ ಖಾಲಿ ಬಿಡಲಾಗಿದೆ. ಇದರಿಂದ ಆ ಗೇಟ್‌ನಲ್ಲಿ ಆನೆ, ಚಿರತೆ ಸೇರಿದಂತೆ ವನ್ಯಜೀವಿಗಳು ಸರಾಗವಾಗಿ ಗ್ರಾಮಗಳತ್ತ ಬರುತ್ತಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಆತಂಕದಲ್ಲೇ ಜೀವನ ಕಳೆಯುವಂತಾಗಿದೆ. ಒಬ್ಬರೇ ಜಮೀನಿನಲ್ಲಿ ಕೆಲಸ ಮಾಡಲು ಹಿಂದೇಟು ಹಾಕುವಂತಾಗಿದೆ. ಹಾಗಾಗಿ ನಾಗನಾಪುರ ಗೇಟ್ ಬಳಿ ರೈಲ್ವೆ ಕಂಬಿ ಅಳವಡಿಸಬೇಕು.
    ಅಬ್ಬಾಸ್, ಹೆಡಿಯಾಲ, ನಂಜನಗೂಡು ತಾ.

    ಆದಿವಾಸಿಗಳಿಗೆ ಕಿರುಕುಳ ತಪ್ಪಿದ್ದಲ್ಲ
    ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಯಾವಾಗಲೂ ಕಿರುಕುಳ ತಪ್ಪಿದ್ದಲ್ಲ. ಬೆಂಕಿ ನಂದಿಸುವ ಹಾಗೂ ಇತರ ಕೆಲಸಗಳಿಗೆ ಗಿರಿಜನರನ್ನು ಇಲಾಖೆಯು ಕೆಲಸಕ್ಕೆ ಕರೆಯುತ್ತದೆ. ನಂತರ ಅಲ್ಲಿನ ವಾಚರ್‌ಗಳು ಗಿರಿಜನರನ್ನೇ ಕಾಡಿನ ಕಳ್ಳರು ಎಂಬಂತೆ ಬಿಂಬಿಸುತ್ತಾರೆ. ಇದರಿಂದ ನಮಗೆ ಬಹಳ ತೊಂದರೆಯಾಗಿದೆ. ಕಾಡನ್ನೇ ನಂಬಿ ಜೀವನ ನಡೆಸುವ ನಮ್ಮನ್ನು ಕೆಲಸಕ್ಕೆ ಕರೆದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕು. ಇದರಿಂದ ನಾವು ಜೀವನ ಸಾಗಿಸಲು ನೆರವಾಗುತ್ತದೆ.
    ಅಂಕ, ಡೋರನಕಟ್ಟೆ ಕಾಲನಿ

    ಬದುಕಿಗೆ ಕಾಡೇ ಜೀವಾಳ
    ಆದಿವಾಸಿಗಳ ಬದುಕಿಗೆ ಕಾಡೇ ಜೀವಾಳ. ಆದರೆ, ಅರಣ್ಯ ಇಲಾಖೆ ಅವರನ್ನು ಕಾಡೊಳಗಡೆ ಬಿಡುವುದಿಲ್ಲ. ಇನ್ನು ಜೀವನೋಪಾಯಕ್ಕಾಗಿ ರಾಗಿ, ತೊಗರಿ, ಹಲಸಂದೆ ಸೇರಿದಂತೆ ಮಿಶ್ರ ಫಸಲು ಬೆಳೆದುಕೊಳ್ಳಲು ಮುಂದಾದರೆ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಬೆಳೆ ಹಾನಿಗೆ ಪರಿಹಾರ ಕೇಳಿದರೆ ದಾಖಲೆಗಳು ಸರಿಯಿಲ್ಲ ಎಂದು ಸಬೂಬು ಹೇಳುತ್ತಾರೆ. ಇನ್ನು ಎಷ್ಟೋ ಗಿರಿಜನರಿಗೆ ಸರಿಯಾಗಿ ಪಿಂಚಣಿ ಸಿಗುತ್ತಿಲ್ಲ. ಸೂಕ್ತ ದಾಖಲೆಗಳನ್ನು ಮಾಡಿಸಿಕೊಳ್ಳುವಷ್ಟು ತಿಳಿವಳಿಕೆ ಈ ಜನರಿಗಿಲ್ಲ. ಅಧಿಕಾರಿಗಳೇ ಮುಂದೆ ನಿಂತು ಗಿರಿಜನರಿಗೆ ನೆರವಾಗಬೇಕು.
    ಬಸವರಾಜು, ಚಿಲಕಹಳ್ಳಿ

    ಸಂತ್ರಸ್ತ ಕುಟುಂಬದವರ ಅಲೆದಾಟ
    ಕಾಡಂಚಿನ ಜನರಿಗೆ ಭದ್ರತೆ ಎಂಬುದೇ ಇಲ್ಲ. ಅರಣ್ಯ ಇಲಾಖೆಗೆ ಪರಿಧಿಗೆ ರೈಲ್ವೆ ಕಂಬಿ ಸಂಪೂರ್ಣವಾಗಿ ಅಳವಡಿಸಿಲ್ಲ. ಹುಲಿ ದಾಳಿಗೆ ತುತ್ತಾದ ಒಡೆಯನಪುರ ಪುಟ್ಟಸ್ವಾಮಿಗೌಡ ಅವರ ಕುಟುಂಬಕ್ಕೆ 2.5 ಲಕ್ಷ ರೂ. ಮಾತ್ರ ಪರಿಹಾರ ನೀಡಿದ್ದು, ಮೂರು ತಿಂಗಳಾದರೂ ಉಳಿದ 5 ಲಕ್ಷ ರೂ. ಪರಿಹಾರ ನೀಡದೆ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಸಂತ್ರಸ್ತ ಕುಟುಂಬದವರು ಅಲೆದಾಡುತ್ತಿದ್ದಾರೆ.
    ನೇತ್ರಾವತಿ, ಹೆಡಿಯಾಲ

    ಕಷ್ಟಕ್ಕೆ ನೆರವಾಗುತ್ತಾರೆ ಎಂಬ ನಂಬಿಕೆ ಇಲ್ಲ
    ನಾನು ಬೆಳೆದ ಹತ್ತಿ ಫಸಲು ಹಂದಿ, ಆನೆ ದಾಳಿಗೆ ನಾಶವಾಯಿತು. ಪರಿಹಾರಕ್ಕಾಗಿ ಮೊರೆ ಹೋದರೆ ಸಾಗುವಳಿ ಮಾಡುತ್ತಿರುವ ನಿಮ್ಮ ಜಮೀನಿಗೆ ಸರಿಯಾದ ದಾಖಲೆ ಇಲ್ಲ ಎನ್ನುತ್ತಾರೆ. ನಮ್ಮ ಪೂರ್ವಿಕರ ಕಾಲದಿಂದಲೂ ಸಾಗುವಳಿ ಮಾಡುತ್ತಿರುವ ಭೂಮಿಗೆ ಸರಿಯಾದ ದಾಖಲೆ ಇಲ್ಲ ಎಂದು ಪರಿಹಾರ ನೀಡುತ್ತಿಲ್ಲ. ದಾಖಲೆ ಸರಿಮಾಡಿಸಿಕೊಳ್ಳಲು ನಮಗೆ ಅಷ್ಟು ತಿಳಿವಳಿಕೆ ಇಲ್ಲ. ಅಧಿಕಾರಿಗಳು ನಮ್ಮ ಕಷ್ಟ ಪರಿಹರಿಸುವ ನಿಟ್ಟಿನಲ್ಲಿ ನೆರವಾಗುತ್ತಾರೆ ಎಂಬ ನಂಬಿಕೆ ಇಲ್ಲ. ಹೀಗಾದರೆ ನಾವು ಹೇಗೆ ಜೀವನ ಸಾಗಿಸೋದು ಎಂಬುದೇ ಅರ್ಥವಾಗುತ್ತಿಲ್ಲ.
    ಶ್ರೀಕಂಠ, ವೆಂಕಟಾಚಲಪುರ

    ನೆರವು ನೀಡಲು ಅಲೆದಾಡಿಸುತ್ತಾರೆ
    ಕಾಡುಪ್ರಾಣಿಗಳ ಹಾವಳಿಗೆ ಬೆಳೆ ನಾಶವಷ್ಟೇ ಅಲ್ಲ, ಜಾನುವಾರುಗಳು ಬಲಿಯಾಗುತ್ತಿವೆ. ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವವರು ಮೇವಿಗಾಗಿ ಜಾನುವಾರುಗಳನ್ನು ಬಯಲಿಗೆ ಬಿಡಲು ಭಯಪಡುವಂತಾಗಿದೆ. ಅರಣ್ಯ ಇಲಾಖೆಯು ವನ್ಯಜೀವಿಗಳ ಹಾವಳಿ ತಪ್ಪಿಸುವಲ್ಲಿ ವಿಫಲವಾಗಿದೆ. ಕಾಡು ಪ್ರಾಣಿ ದಾಳಿ ನಡೆದಾಗ ಸಮಾಧಾನಪಡಿಸುವ ಅಧಿಕಾರಿಗಳು ನಂತರದ ದಿನಗಳಲ್ಲಿ ನೆರವು ನೀಡಲು ಅಲೆದಾಡಿಸುತ್ತಾರೆ.
    ನಾಗರಾಜು, ಆಂಜನೇಯಪುರ

    ದಾಖಲೆ ಇದ್ದರೆ ಪರಿಹಾರ ನೀಡಲು ಸೂಚನೆ
    ಕಾಡಂಚಿನ ಭಾಗದಲ್ಲಿ ಸಾಗುವಳಿ ಕೃಷಿ ಮಾಡುವ ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಗಡಿರೇಖೆ ಗುರುತಿಸುವಂತೆ ಸೂಚನೆ ನೀಡಲಾಗಿದೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದರೆ ಪಹಣಿಯಲ್ಲಿ ಸಂತ್ರಸ್ತ ರೈತರ ಹೆಸರು, ವಿಸ್ತೀರ್ಣ ನಮೂದಾಗಿದ್ದರೆ ಬೆಳೆಹಾನಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಸೂಕ್ತ ದಾಖಲೆ ಒದಗಿಸಿದರೆ ವಿಳಂಬ ಮಾಡದೇ ತಕ್ಷಣವೇ ಪರಿಹಾರ ನೀಡಲು ಸೂಚಿಸಿದ್ದೇನೆ. ಗಿರಿಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಅರ್ಹ ಫಲಾನುಭವಿಗಳಿಗೆ ಸವಲತ್ತು ದೊರಕಿಸಿಕೊಡಲು ಶೀಘ್ರದಲ್ಲೇ ಕಾರ್ಯಾಗಾರ ನಡೆಸಲು ನಿರ್ದೇಶನ ನೀಡಿದ್ದೇನೆ.
    ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ.

    ಸಮಸ್ಯೆ ಪರಿಹರಿಸಲು ನಿರ್ದೇಶಿಸಿದ್ದೇನೆ
    ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಲು ಆದ್ಯತಾನುಸಾರ ಕ್ರಮವಹಿಸುವಂತೆ ಅರಣ್ಯ, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ಹುಲಿ ದಾಳಿಗೆ ತುತ್ತಾದ ಒಡೆಯನಪುರ ಗ್ರಾಮದ ಪುಟ್ಟಸ್ವಾಮಿಗೌಡ ಕುಟುಂಬಕ್ಕೆ ಬಾಕಿ ಪರಿಹಾರ ಮೊತ್ತ 5 ಲಕ್ಷ ರೂ.ಗಳನ್ನು ಸೂಕ್ತ ದಾಖಲೆಗಳನ್ನು ನೀವೇ ಸಂಗ್ರಹಿಸಿ ತ್ವರಿತಗತಿಯಲ್ಲಿ ಬಿಡುಗಡೆ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ.
    ಬಿ.ಹರ್ಷವರ್ಧನ್, ನಂಜನಗೂಡು ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts