More

    ಕಾಂತರಾಜ ವರದಿ ಜಾರಿಗೆ ಆಗ್ರಹ

    ಚಿತ್ರದುರ್ಗ: ಎಚ್.ಕಾಂತರಾಜ ಆಯೋಗದ ವರದಿಯನ್ನು ಸಾಮಾಜಿಕ ನ್ಯಾಯದ ಪರವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಬೇಕೆಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್.ಮೋಹನ್ ಒತ್ತಾಯಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ಇದು ಸಂಜೀವಿನಿಯಾಗಿದ್ದು, ಜಯಪ್ರಕಾಶ ಹೆಗ್ಡೆ ಅವರ ಮೇಲೆ ಒತ್ತಡವೇರಿ ವರದಿಯನ್ನು ಶೀಘ್ರ ಸ್ವೀಕರಿಸಿ, ಜಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

    ವರದಿಯೂ ಶೈಕ್ಷಣಿಕ, ಸಾಮಾಜಿಕವಾದರೂ ಆರ್ಥಿಕ ಸ್ಥಿತಿಗತಿಗಳನ್ನು ಕೂಡ ಕಲೆ ಹಾಕಲಾಗಿದೆ. ಒಂದು ತಿಂಗಳ ಸಮಯಾವಕಾಶ ಸಿಎಂ ಕೇಳಿದ್ದು, ಖಂಡಿತ ಜಾರಿಗೊಳಿಸುವ ವಿಶ್ವಾಸವಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಶೋಷಣೆಗೆ ಒಳಗಾಗಿರುವ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುವುದರಲ್ಲಿ ಅನುಮಾನವಿಲ್ಲ. ಮೀಸಲಾತಿ ಭಿಕ್ಷೆಯಲ್ಲ, ಅದು ಸಂವಿಧಾನ ಬದ್ಧ ಹಕ್ಕಾಗಿದ್ದು, ಪಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ ಎಂದರು.

    ಕೆಪಿಸಿಸಿ ರಾಜ್ಯ ಉಪ ವಕ್ತಾರ ದರ್ಶನ ಬಳ್ಳೇಶ್ವರ ಮಾತನಾಡಿ, ವರದಿ ತಯಾರಿಸಲು 158 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಸ್ತುತ ವರದಿ ಸಲ್ಲಿಕೆಗೆ ಇನ್ನಷ್ಟು ಒತ್ತಡ ಹೆಚ್ಚಾಗುತ್ತಿದ್ದಂತೆ ಒಂದೆರೆಡು ಬಲಾಢ್ಯ ಜಾತಿಗಳ ಮುಖಂಡರು ಜಾರಿಯಾಗದಂತೆ ಅನೇಕ ಷಡ್ಯಂತ್ರ ನಡೆಸಿದ್ದಾರೆ. ಪಟ್ಟಭದ್ರ ಹಿತಾಸಕ್ತರು ಹಿಂದುಳಿದ ಸಮುದಾಯಗಳ ವಿರೋಧಿಗಳಾಗಿದ್ದಾರೆ ಎಂದು ದೂರಿದರು.

    ಈ ಹಿಂದೆ ಸಿಎಂ ಆಗಿದ್ದ ವೇಳೆ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಕಾಂತರಾಜ ಆಯೋಗದ ವರದಿ ಕುರಿತು ಯಾವುದೇ ಚಕಾರವೆತ್ತದೆ ಜಾಣ ಮೌನ ಪ್ರದರ್ಶಿಸಿದರು. ಇದು ಹಿಂದುಳಿದ ಸಮುದಾಯದವರಿಗೆ ಮಾಡಿದ ಅಪಮಾನ ಇದ್ದಂತೆ ಎಂದು ಆಕ್ರೋಶ ಹೊರಹಾಕಿದರು.

    ಸಮುದಾಯಗಳ ಹಿತ ಕಾಯಬೇಕೆ ಹೊರತು ಅಡ್ಡಗಾಲು ಹಾಕುವುದು ಸರಿಯಲ್ಲ. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಮಾಹಿತಿ ಕಲೆ ಹಾಕಿರುವ ಕಾಂತರಾಜ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿ, ಶೋಷಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದರು.

    ಹಿಂದುಳಿದ ಜಾತಿಗಳ ಜಿಲ್ಲಾ ಒಕ್ಕೂಟದ ಅಧ್ಯಕ್ಷ ವಿ.ರಾಜು, ವಿವಿಧ ಸಮುದಾಯದ ಮುಖಂಡರಾದ ಮಂಜುನಾಥ, ಎನ್.ಡಿ.ಕುಮಾರ್, ಪ್ರಸನ್ನ, ಕುಮಾರ್, ಗಣೇಶ್, ಹುತ್ತೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts