More

    ಕಾಂಡ್ಲಾ ವಲಯ ವಿಸ್ತರಣೆ: ಕರಾವಳಿಯಲ್ಲಿ 2.57 ಚ.ಕಿ.ಮೀ.ವ್ಯಾಪ್ತಿ ಹೆಚ್ಚಳ

    ಭರತ್ ಶೆಟ್ಟಿಗಾರ್, ಮಂಗಳೂರು

    ಕರಾವಳಿ ತೀರದ ರಕ್ಷಣಾ ಕವಚ ಎಂದು ಹೆಸರು ಪಡೆದಿರುವ ಕಾಂಡ್ಲಾವನ (ಮ್ಯಾಂಗ್ರೋವ್) ಕರ್ನಾಟಕ ಕರಾವಳಿಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಕಳೆದೆರಡು ವರ್ಷದಲ್ಲಿ 2.57 ಚ.ಕಿ.ಮೀ.(257 ಹೆಕ್ಟೇರ್)ವ್ಯಾಪ್ತಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಪ್ರತಿ ವರ್ಷ ಗಿಡ ನೆಡುವುದು ಮತ್ತು ಈಗಾಗಲೇ ಇರುವ ಜಾಗದಲ್ಲಿ ಸಹಜವಾಗಿ ಹರಡುವುದು ಈ ವ್ಯಾಪ್ತಿ ಹೆಚ್ಚಳಕ್ಕೆ ಕಾರಣ.
    ಕೇಂದ್ರ ಪರಿಸರ ಇಲಾಖೆಯ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್-2021ರ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 12.61 ಚ.ಕಿ.ಮೀ. ಪ್ರದೇಶದಲ್ಲಿ ಕಾಂಡ್ಲಾವನವಿದೆ. 2019ರಲ್ಲಿ 10.04 ಚ.ಕಿ.ಮೀ.ನಷ್ಟಿತ್ತು. ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ 1.97 ಚ.ಕಿ.ಮೀ, ದ.ಕ. 0.45 ಚ.ಕಿ.ಮೀ ಮತ್ತು ಉಡುಪಿಯಲ್ಲಿ 0.15 ಚ.ಕಿ.ಮೀ. ವ್ಯಾಪ್ತಿ ಹೆಚ್ಚಾಗಿರುವುದನ್ನು ವರದಿ ಉಲ್ಲೇಖಿಸಿದೆ.

    ವ್ಯಾಪ್ತಿ ಹೆಚ್ಚಾಗಿರುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಒಡಿಶಾ 8 ಚ.ಕಿ.ಮೀ.ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ 4 ಚ.ಕಿ.ಮೀ.ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಹುತೇಕ ರಾಜ್ಯಗಳಲ್ಲಿ ಹಿಂದೆ ಇದ್ದಷ್ಟೇ ಕಾಂಡ್ಲಾ ಇದ್ದರೆ, ಗುಜರಾತ್‌ನಲ್ಲಿ 2 ಚ.ಕಿ.ಮೀ.ನಷ್ಟು ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು 17.10 ಚ.ಕಿ.ಮೀ.ನಷ್ಟು ಕಾಂಡ್ಲಾ ಪ್ರಮಾಣ ಹೆಚ್ಚಾಗಿದೆ. ಪ್ರಸ್ತುತ ದೇಶದ ಕರಾವಳಿ ತೀರ ಹೊಂದಿರುವ ವಿವಿಧ ರಾಜ್ಯಗಳಲ್ಲಿ ಒಟ್ಟು 4992.32 ಚ.ಕಿ.ಮೀ. ಕಾಂಡ್ಲಾ ವನ ವ್ಯಾಪಿಸಿದೆ. ಇದರಲ್ಲಿ 1,474.67 ಚ.ಕಿ.ಮೀ.ದಡ್ಡ ಕಾಂಡ್ಲಾ ಕಾಡು, 1,480.92 ಚ.ಕಿ.ಮೀ.ನಲ್ಲಿ ಮಧ್ಯಮ ದಟ್ಟ, ಮತ್ತು 2036.73 ಕಿ.ಮೀ.ನಲ್ಲಿ ಬಿಡಿಯಾಗಿ ಹರಡಿರುವ ಕಾಂಡ್ಲಾವನವಿದೆ.

     ಸಮುದ್ರ ಕೊರೆತ ತಡೆಗೆ ಸಹಕಾರಿ: ನದಿ-ಸಮುದ್ರ ಸೇರುವಲ್ಲಿ ಕಾಂಡ್ಲಾ ಕಾಡುಗಳು ಹೆಚ್ಚಾಗಿ ಬೆಳೆಯುತ್ತದೆ. ಇವುಗಳ ಬೇರು ಮಣ್ಣನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಭೂ ಸವಕಳಿ ತಡೆಯುತ್ತದೆ. ಸಮುದ್ರ ಕೊರೆತ ತಡೆಯುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತವೆ. ಸುನಾಮಿ ಮಾದರಿಯ ಪ್ರಕೃತಿ ವಿಕೋಪವನ್ನು ಕಡಿಮೆ ಮಾಡುವ ಸಾಮರ್ಥ್ಯವೂ ಇದೆ ಎಂಬುದು ಈಗಾಗಲೇ ಸಾಬೀತಾಗಿದೆ. ವಾತಾವರಣದ ಇಂಗಾಲದ ಡೈ ಆಕ್ಸೈಡನ್ನು ಹೀರಿ ಆಮ್ಲಜನಕ ಬಿಡುಗಡೆ ಮಾಡುವುದರಿಂದ ತಾಪಮಾನ ಹೆಚ್ಚಾಗದಂತೆಯೂ ತಡೆೆಯುತ್ತದೆ. ಪಕ್ಷಿ-ಸಂಕುಲಗಳು ಇದರಲ್ಲೇ ಗೂಡು ಕಟ್ಟಿ ವಾಸಿಸುತ್ತವೆ. ಜಲಚರಗಳಾದ ಮೀನು ಹಾಗೂ ಏಡಿ, ಕಪ್ಪೆ ಹಾವು, ಆಮೆ ಇತ್ಯಾದಿಗಳಿಗೂ ಇವು ಆಶ್ರಯತಾಣ.

    ಜಿಲ್ಲಾವಾರು ಪ್ರಮಾಣ ಹೀಗಿದೆ
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ವ್ಯಾಪ್ತಿ 0.45 ಚ.ಕಿ.ಮೀ. ಈ ಪೈಕಿ 0.09 ಚ.ಕಿ.ಮೀ.ದಟ್ಟ ಕಾಂಡ್ಲ, 0.11 ಚ.ಕಿ.ಮೀ.ಮಧ್ಯಮ ದಟ್ಟ ಹಾಗೂ 0.25 ಚ.ಕಿ.ಮೀ.ವ್ಯಾಪ್ತಿಯಲ್ಲಿ ಬಿಡಿಬಿಡಿಯಾಗಿ ಕಾಂಡ್ಲಾ ಹರಡಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 10.47ಚ.ಕಿ.ಮೀ.ವ್ಯಾಪ್ತಿಯಲ್ಲಿದ್ದು, 0.28 ಚ.ಕಿ.ಮೀ.ಮಧ್ಯಮ ದಟ್ಟ, 10.19 ಚ.ಕಿ.ಮೀ.ನಲ್ಲಿ ಬಿಡಿಯಾಗಿ ಹರಡಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ 1.69 ಚ.ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, 1.54 ಚ.ಕಿ.ಮೀ. ವ್ಯಾಪ್ತಿಯಲ್ಲಿ ಮಧ್ಯಮ ದಟ್ಟ, 0.15 ಕಿ.ಮೀ.ವ್ಯಾಪ್ತಿಯಲ್ಲಿ ಬಿಡಿಯಾಗಿ ಹರಡಿಕೊಂಡಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಬಳಸಿಕೊಂಡು ಕಾಂಡ್ಲಾವನ ಉಳಿಸಿ, ಬೆಳೆಸುವ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಪ್ರತಿ ವರ್ಷ ಗಿಡಗಳನ್ನು ನೆಡುವುದು ಮತ್ತು ಅವಾಗಿಯೇ ಬೆಳೆಯುವ ಮೂಲಕ ವ್ಯಾಪ್ತಿ ಹೆಚ್ಚಾಗುತ್ತಿದೆ. ಉಪ್ಪು ನೀರಿನ ಹರಿವು ಇರುವ ಪ್ರದೇಶದಲ್ಲಿ ಇವು ಹೆಚ್ಚಾಗಿ ಬೆಳೆಯುತ್ತದೆ. ನಗರೀಕರಣದ ಹೊರತಾಗಿಯೂ ಮಂಗಳೂರು ವ್ಯಾಪ್ತಿಯಲ್ಲಿ ಕಾಂಡ್ಲಾವನಗಳು ಹೆಚ್ಚಾಗಿವೆ.
    ಡಾ.ದಿನೇಶ್ ಕುಮಾರ್
    ಉಪ ಅರಣ್ಯ ಸಂರಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts