More

    ಕಾಂಗ್ರೆಸ್ ಸೇರಲು ರಮೇಶ ಉತ್ಸುಕ

    ಕಲಬುರಗಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಾಂಬ್ ಸಿಡಿಸಿದ್ದಾರೆ.
    ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ಕೊಟ್ಟರೆ ಇನ್ನೂ ಐದು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ತರುತ್ತೇನೆ ಎಂದು ಹೇಳುವ ಮೂಲಕ ರಾಜಕೀಯ ಸಂಚಲನ ಸೃಷ್ಟಿಸಿದ್ದ ಜಾರಕಿಹೊಳಿಯವರಿಗೆ ಖಂಡ್ರೆ ನೀಡಿರುವ ತಿರುಗೇಟು ಬಿಜೆಪಿಯಲ್ಲೂ ನಡುಕಕ್ಕೆ ಕಾರಣವಾಗಿದೆ.
    ಒಂದು ವೇಳೆ ಜಾರಕಿಹೊಳಿ ಬರುವುದಾದರೆ ಸೇರಿಸಿಕೊಳ್ಳಬೇಕೆ? ಬಿಡಬೇಕೆ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಖಂಡ್ರೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಶಾಸಕರಾರೂ ಬಿಜೆಪಿ ಸೇರುತ್ತಿಲ್ಲ, ಎಲ್ಲ ಜೊಳ್ಳು ಕಾಳುಗಳು ಹೋಗಿವೆ. ನಮ್ಮಲ್ಲಿರೋದು ಗಟ್ಟಿ ಕಾಳುಗಳು ಎಂದರು. ಎಂಎಲ್ಸಿ ಮತ್ತು ರಾಜ್ಯಸಭೆ ಚುನಾವಣೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ, ಜೆಡಿಎಸ್ಗೆ ಬೆಂಬಲಿಸುವ ಬಗ್ಗೆ ಸಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
    ಬೆಂಗಳೂರಿನಲ್ಲಿ ಜೂನ್ 7ರಂದು ನಡೆಯಬೇಕಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ಮುಂದೂಡಲಾಗಿದೆ ಎಂದು ಅವರು ಹೇಳಿದರು.
    ಲಾಕ್ಡೌನ್ ನಿಯಮಗಳಂತೆ 8ರವರೆಗೆ ಯಾವುದೇ ರಾಜಕೀಯ ಸಮಾರಂಭ ನಡೆಸುವಂತಿಲ್ಲ. 8ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ದಿನಾಂಕ ಪ್ರಕಟಿಸಲಾಗುವುದು. ಒಟ್ಟಾರೆ ಈ ತಿಂಗಳಲ್ಲೇ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದರು.

    ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ನಿಂದ ಹೊರಗುಳಿದ ದರ್ಜಿ, ಅರ್ಚಕರು ಇತರರಿಗೂ ನೆರವು ನೀಡಬೇಕು. ಕೇಂದ್ರ ಸರ್ಕಾರದ್ದು ಸಾಲ ಕೊಡುವ ಪ್ಯಾಕೇಜ್ ಆಗಿದೆ. ಅದರಿಂದ ಏನೂ ಪ್ರಯೋಜನವಿಲ್ಲ.
    | ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ

    ಕರೊನಾ ಹೆಚ್ಚಳಕ್ಕೆ ಸರ್ಕಾರ ಕಾರಣ
    ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
    ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರಮುಖರ ಸಭೆಗೆ ಮುನ್ನ ಮಾಜಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕರಾದ ಎಂ.ವೈ.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್ ಜತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸಿಗ ಕಾರ್ಮಿಕರನ್ನು ಕರೆತರುವಲ್ಲಿ ಮತ್ತು ಅವರು ಅನುಭವಿಸಿದ ಸಮಸ್ಯೆಗಳನ್ನು ಗಮನಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಈ ಕುರಿತು ಸುಪ್ರೀಂಕೋರ್ಟ್​ ಸಹ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದರು.
    ಬೇಡಿಕೆಯಷ್ಟು ಕರೊನಾ ಟೆಸ್ಟ್ ಕಿಟ್ಗಳನ್ನು ರಾಜ್ಯ ಮತ್ತು ಜಿಲ್ಲೆಗೆ ಕೊಡಲಾಗುತ್ತಿಲ್ಲ. ಹೀಗಾಗಿ ಮನೆಗೆ ಹೋದವರಲ್ಲಿ ಸೋಂಕು ಕಂಡು ಬರುತ್ತಿದೆ. ಟೆಸ್ಟ್ ಮಾಡಲು ಕಿಟ್ ಕೊಡದಿರುವುದನ್ನು ನೋಡಿದರೆ ಸರ್ಕಾರ ದಿವಾಳಿ ಆಗಿರುವಂತಿದೆ. ಸರ್ಕಾರ ಜನ ಮತ್ತು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
    ಗ್ರಾಪಂ ಚುನಾವಣೆ ಮುಂದೂಡಿದ್ದು ಒಳ್ಳೆಯದು. ಆದರೆ ಹಾಲಿ ಸದಸ್ಯರನ್ನೇ ಮುಂದುವರಿಸಬೇಕು. ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರನ್ನು ನೇಮಿಸಲು ಗ್ರಾಮ ಸಮಿತಿ ರಚಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಇದು ಸರಿಯಲ್ಲ ಎಂದರು.
    ಮುಖಂಡರಾದ ಶರಣು ಮೋದಿ, ಶಿವಾನಂದ ಪಾಟೀಲ್ ಮರತೂರ, ಸೋಮಶೇಖರ ಗೋನಾಯಕ, ಮಹಾಂತಪ್ಪ ಸಂಗಾವಿ, ಚಂದ್ರಿಕಾ ಪರಮೇಶ್ವರ, ಡಾ.ಕಿರಣ ದೇಶಮುಖ, ಅರುಣಕುಮಾರ ಪಾಟೀಲ್, ಪ್ರವೀಣ ಪಾಟೀಲ್ ಹರವಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts