More

    ಕಾಂಗ್ರೆಸ್ ಪಕ್ಷದಿಂದ ಎಲ್ಲ ವರ್ಗಕ್ಕೂ ಸಮಾನ ಅವಕಾಶ

    ಹನೂರು: ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷ. ಎಲ್ಲ ವರ್ಗಕ್ಕೂ ಸಮಾನ ಅವಕಾಶ ಕಲ್ಪಿಸಿದೆ. ಆದ್ದರಿಂದ ಪಕ್ಷವನ್ನು ಬೆಂಬಲಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮನವಿ ಮಾಡಿದರು.
    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಆದಿಜಾಂಬವ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ 4 ವರ್ಷದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ. ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಉತ್ತಮ ಆಡಳಿತ ನೀಡಲಿಲ್ಲ ಎಂದು ಟೀಕಿಸಿದರು.
    ಬಿಜೆಪಿ ಸರ್ಕಾರ ಎಸ್ಸಿ-ಎಸ್ಟಿ ವಿದ್ಯಾರ್ಥಿವೇತನ ಹಾಗೂ ಪಿಎಚ್.ಡಿ ಸಂಶೋಧನಾರ್ಥಿಗಳ ಸಹಾಯಧನ ಸ್ಥಗಿತಗೊಳಿಸಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ದೊರಕುತ್ತದೆ ಎಂಬ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ದೀನ ದಲಿತರು ಹಾಗೂ ಹಿಂದುಳಿದ ವರ್ಗವನ್ನು ಸಂಪೂರ್ಣ ಕಡೆಗಣಿಸಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದರು.

    ರಾಜಕೀಯ ಉದ್ದೇಶದಿಂದ ಕೆಲವರು ಸಾಮಾಜಿಕ ಸೇವೆ ನೀಡುವ ನಿಟ್ಟಿನಲ್ಲಿ ಹನೂರು ಕ್ಷೇತ್ರಕ್ಕೆ ಆಗಮಿಸಿದ್ದು, ಆಸೆ-ಆಮಿಷವೊಡ್ಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಮುದಾಯದ ಜನರಲ್ಲಿ ಒಡಕುಂಟು ಮಾಡುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡದೆ ಸಮುದಾಯದ ಸಂಘಟನೆಯತ್ತ ಗಮನಹರಿಸಬೇಕು. ಗ್ರಾಮ ಮಟ್ಟದಲ್ಲೇ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

    ಶಾಸಕ ಆರ್.ನರೇಂದ್ರ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು. ಈ ಮೂಲಕ ಹೆಚ್ಚಿನ ಸವಲತ್ತು ಸಿಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಹೆಸರಿಗಷ್ಟೇ ಹಲವು ನಿಗಮಗಳನ್ನು ಸ್ಥಾಪಿಸಿದೆ. ಆದರೆ ಅನುದಾನ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಭೋವಿ ಜನಾಂಗಕ್ಕೆ ಒಂದು ಕೊಳವೆ ಬಾವಿ ಹೊರತುಪಡಿಸಿದರೆ ಇನ್ಯಾವುದೇ ಸವಲತ್ತು ನೀಡಿಲ್ಲ. ಹಿಂದುಳಿದ ಸಮುದಾಯಕ್ಕೆ ಸವಲತ್ತು ಕಲ್ಪಿಸುವಲ್ಲಿ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದರು.
    ಸಭೆಯಲ್ಲಿ ಆದಿಜಾಂಬವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ಬಾಲರಾಜು, ಪಪಂ ಉಪಾಧ್ಯಕ್ಷ ಗಿರೀಶ್, ಪಪಂ ಸದಸ್ಯ ಸುದೇಶ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು, ರಂಗಯ್ಯ, ಮಹದೇವ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts