More

    ಕಾಂಗ್ರೆಸ್ ನಿಯೋಗದಿಂದ ಜಿಲ್ಲಾಧಿಕಾರಿ ಭೇಟಿ

    ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸೋಮವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ, ಜಿಲ್ಲೆಯ ಕರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಿದರು. ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಹಾಗೂ ಆಕ್ಸಿಜನ್ ಕೊರತೆ ಇದ್ದು ಕ್ರಮ ಕೈಗೊಳ್ಳಿ ಎಂದು ಸತೀಶ ಜಾರಕಿಹೊಳಿ ಆಗ್ರಹಿಸಿದರು. ಆಕ್ಸಿಜನ್ ಸಮಸ್ಯೆಯಿಂದ ಕರೊನಾ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಲಸಿಕೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಆ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಬೆಳಗಾವಿ ಜಿಲ್ಲೆಗೆ ತಾರತಮ್ಯ ಆರೋಪ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಜಿಲ್ಲೆಯಲ್ಲಿ ನಿತ್ಯ ಕರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕೊಡುವುದು ಒಂದು ಲೆಕ್ಕ, ನಮ್ಮ ಬಳಿ ಬರುವುದು ಒಂದು ಲೆಕ್ಕವಾಗಿದೆ ಎಂದು ಆರೋಪಿಸಿದರು. ಬಿಮ್ಸ್‌ನಲ್ಲಿ 350 ಆಕ್ಸಿಜನ್ ಬೆಡ್ ಲಭ್ಯವಿದೆ. 200 ಹೆಚ್ಚುವರಿ ಆಕ್ಸಿಜನ್ ಬೆಡ್ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಹೆಚ್ಚುವರಿ ಬೆಡ್ ನೀಡದೇ ಬೆಳಗಾವಿಗೆ ತಾರತಮ್ಯ ಮಾಡುತ್ತಿದೆ.

    ಇಂತಹ ತಾರತಮ್ಯ ನಾವು ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲಸಿಕೆಗಾಗಿ ಆನ್‌ಲೈನ್ ರಿಜಿಸ್ಟರ್ ಮಾಡಲು ಗ್ರಾಮೀಣ ಜನರಿಗೆ ಸಾಧ್ಯವಾಗುವುದಿಲ್ಲ. ಅದಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಬೇಕು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಬಿಮ್ಸ್ನಲ್ಲಿ 800 ಬೆಡ್‌ಗಳಿವೆ. ತಾಲೂಕು ಆಸ್ಪತ್ರೆಯಲ್ಲಿ 30 ಬೆಡ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಬೆಳಗಾವಿಗೆ ಬಾರದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮಾತ್ರ ಅವರು ಪತ್ರ ತೆಗೆದುಕೊಂಡು ಬಂದರೆ ಬಿಮ್ಸ್‌ನಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ರೆಮ್‌ಡೆಸಿವಿರ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.

    ಆಕ್ಸಿಜನ್ ಘಟಕ ಸ್ಥಾಪಿಸಿ: ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಅದನ್ನು ಸರಿದೂಗಿಸಬೇಕು ಎಂದರು. ಶೀಘ್ರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಜಿಲ್ಲಾಡಳಿತ ಆಕ್ಸಿಜನ್ ಘಟಕ ಸ್ಥಾಪಿಸಿದರೆ ಸರ್ಕಾರದ ಬಳಿ ಆಕ್ಸಿಜನ್ ಕೇಳುವ ಅವಶ್ಯಕತೆಯೇ ಬರುವುದಿಲ್ಲ ಎಂದು ಸಲಹೆ ನೀಡಿದರು. ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts