More

    ಕಾಂಗ್ರೆಸ್, ಜೆಡಿಎಸ್ ಸದಸ್ಯರ ಮಾತಿನ ಜಟಾಪಟಿ

    ಅರಸೀಕೆರೆ: ನಗರಸಭೆ ಪ್ರಭಾರ ಅಧ್ಯಕ್ಷ ಆರ್.ಕಾಂತೇಶ್ ಉಪಸ್ಥಿತಿಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆ ನೂತನ ಬಡಾವಣೆ ನಿರ್ಮಾಣ ವಿಚಾರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಮಾತಿನ ಜಟಾಪಟಿಗೆ ಸಾಕ್ಷಿಯಾಯಿತು.
    ನಿಗದಿತ ಅಜೆಂಡಾದ 24 ವಿಷಯಗಳ ಮುಕ್ತಾಯದ ಬಳಿಕ ವಿಷಯ ಪ್ರಸ್ತಾಪಿಸಿದ ಎಂ.ಆರ್.ವೆಂಕಟಮುನಿ, ಯಾವುದೇ ನೀತಿ-ನಿಯಮವಿಲ್ಲದೆ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುತ್ತಿದೆ. ಕನಿಷ್ಠ ಸೌಜನ್ಯಕ್ಕಾದರೂ ಸದಸ್ಯರಿಗೆ ತಿಳಿಸುವ ಕೆಲಸ ಮಾಡುತ್ತಿಲ್ಲ. ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರ ಅನುಮೋದನೆ ಬಳಿಕವೇ ಖಾತೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕನಂತೆ ಅಬ್ಬರಿಸಿದರು.
    ಇದರಿಂದ ಕೆರಳಿದ ಸಮೀವುಲ್ಲಾ, ನೀವು ಬಂಡವಾಳ ಹಾಕಿ ಲೇಔಟ್ ಮಾಡಿ, ಕಷ್ಟ ಏನೆಂದು ಗೊತ್ತಾಗಲಿದೆ ಎಂದು ಏರುದನಿಯಲ್ಲಿ ಪ್ರತ್ಯುತ್ತರ ನೀಡಿದರಲ್ಲದೇ ನಿಯಮಾವಳಿಗಳ ಬಗ್ಗೆ ಹೇಳಲು ಮುಂದಾದರು. ಇದರಿಂದಾಗಿ ಕೆಲ ಕಾಲ ಸಾಮಾನ್ಯ ಸಭೆಯಲ್ಲಿ ಉಭಯ ಸದಸ್ಯರ ನಡುವೆ ಮಾತಿನ ಅಸ್ತ್ರ, ಪ್ರತ್ಯಸ್ತ್ರ ಸುರಿಮಳೆಗೊಂಡವು. ತಕ್ಷಣವೇ ಮಧ್ಯೆಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಈ ಸಂಬಂಧ ಜಿಲ್ಲಾಧಿಕಾರಿಗಳ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ವಿಷಯ ನಮೂದಿಸುವಂತೆ ಸೂಚಿಸಿ ವಾದ-ವಿವಾದಕ್ಕೆ ತೆರೆ ಎಳೆದರು.
    ಪೌರಕಾರ್ಮಿಕರನ್ನು ಕಾಯಂಗೊಳಿಸಲು ಹಣದ ಬೇಡಿಕೆಯಿಟ್ಟುರುವ ದೂರುಗಳು ಕೇಳಿಬಂದಿದ್ದು, ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಶಾಸಕ ಕೆಎಂಶಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಅಸಮಾಧಾನ: ನಗರದ ಸರ್ವತೋಮುಖ ಅಭಿವೃದ್ಧಿಗೆ 30 ಕೋಟಿ ರೂ.ವಿಶೇಷ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಆದರೆ ಇಲ್ಲಿನ ಬಿಜೆಪಿ ಮುಖಂಡರೊಬ್ಬರು ನಾನೇ ಅನುದಾನ ತಂದಿರುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವುದು ಸರಿಯಲ್ಲ. ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿದರೆ ಸಹಿಸುವುದಿಲ್ಲ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೆಸರು ಪ್ರಸ್ತಾಪಿಸದೆ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts