More

    ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲಲ್ಲ:ಉಸ್ತುವಾರಿ ರಾಧಮೋಹನ್ ದಾಸ್ ವಿಶ್ವಾಸ

    ಹಾಸನ: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ 25 ಹಾಗೂ ಜೆಡಿಎಸ್ 3 ಸ್ಥಾನ ಗೆಲ್ಲುವ ಮೂಲಕ 28ಕ್ಕೆ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲೂ ಸಹ ಗೆಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಮೋಹನ್‌ದಾಸ್ ಅಗರ್ವಾಲ್ ಭವಿಷ್ಯ ನುಡಿದರು.
    ಹಾಸನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ತಿಂಗಳಿನಿಂದ ಪ್ರವಾಸ ಮಾಡುತ್ತಿದ್ದೇನೆ. ಹಾಸನದ ವಾಸ್ತವ ಸ್ಥಿತಿ ತಿಳಿಯಲು ಬಂದಿದ್ದೇನೆ. ಎಲ್ಲಾ ಕಡೆ ಮೋದಿಯವರಿಗೆ ಅಭೂತಪೂರ್ವ ಬೆಂಬಲ ದೊರೆಕಿದೆ. ಜನರು ಮೋದಿ ಅವರಿಗೆ ಮತ ಹಾಕಲು ಹಾತೊರೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ತುಂಬಾ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಜೆಡಿಎಸ್‌ಗೆ ಪ್ರೀತಂ ಗೌಡ ಅವರ ಬೆಂಬಲದ ವಿಷಯವಾಗಿ ಮಾತನಾಡಿದ ಅವರು, ಪ್ರೀತಂಗೌಡ ಹಿಂದೆ ಶಾಸಕರಾಗಿದ್ದರು. ಈಗ ರಾಜ್ಯ ಪ್ರಧಾನ ಕಾರ್ಯದರ್ಶಿ. ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಶಾಸಕರಾಗಿ ಆಯ್ಕೆಯಾಗದಿದ್ದರೂ ಅವರ ಶಕ್ತಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿದೆ. ನಮ್ಮ ಕಾರ್ಯಕರ್ತರು ಬಹಳ ತಿಳಿವಳಿಕೆವುಳ್ಳವರು. ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವುದು ತಪ್ಪು. ನಮ್ಮ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯುತ್ತಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
    ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ಐದು ಲಕ್ಷ ಬಿಜೆಪಿ ಐದು ಲಕ್ಷ ಮತಗಳು ಸೇರಿ ಹತ್ತು ಲಕ್ಷ ಮತಗಳು ಸಿಗುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳುವ ಅಧಿಕಾರ ಇದೆ. ಅಭ್ಯರ್ಥಿ ಘೋಷಣೆಯಾಗುವ ಮುನ್ನವೇ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಬಿಜೆಪಿ ಕಾರ್ಯಕರ್ತರ ಭಾವನೆ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ. ಜೆಡಿಎಸ್ ಯಾವುದೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಾರೆ ಎಂದರು.
    ಕರ್ನಾಟಕದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಹಿಂದೆ ಔರಂಗಜೇಬ್ ಮಾಡುತ್ತಿದ್ದ. ಈಗ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರಾಜ್ಯಸಭೆಗೆ ಅವರ ಅಭ್ಯರ್ಥಿ ಆಯ್ಕೆಯಾದರೆ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲಿಸ್ ಹೇಳಿದರೆ ಗೂಂಡಾಗಳು ಬಂದು ಹೊಡೆಯುತ್ತಾರೆ. ಇಂತಹ ಸರ್ಕಾರದ ಬಗ್ಗೆ ಜನರಿಗೆ ಅರಿವಿದೆ. 2023ರ ಚುನಾವಣೆಯಲ್ಲಿ ಜನರಿಂದ ತಪ್ಪಾಗಿದೆ. ಆ ತಪ್ಪನ್ನು ಈಗ ಸರಿ ಮಾಡುತ್ತಾರೆ. ಜನರ ದೃಷ್ಟಿಯಲ್ಲಿ ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.
    ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಅಭ್ಯರ್ಥಿಗಳಿಗೆ ಗೊತ್ತಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಮಂತ್ರಿಗಳನ್ನು ಕರೆದು ನಿಮ್ಮ ಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನು ಮಂತ್ರಿ ಮಂಡಲದಿಂದ ವಜಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಸಚಿವರು ತಮ್ಮ ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಹಾಗಾಗಿ ಈ ಚುನಾವಣೆ ಮನೆಯಲ್ಲಿ ಕುಳಿತು ಗೆಲ್ಲಬಹುದಾದ ಯುದ್ಧ ಎಂದು ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ. ಜೂ.4ರ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನೀನು ನನ್ನ ಅಭ್ಯರ್ಥಿ ಸೋಲಿಸಿದೆ ಎಂದು ಹೊಡೆದಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ:
    ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಗಾಳಿ ಬೀಸುತ್ತಿದೆ. ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುವಾಗ ಡಿ.ಕೆ.ಶಿವಕುಮಾರ್ ಬೇರೆ ಯಾರನ್ನು ಗೆಲ್ಲಿಸುತ್ತಾರೆ? ಕಳೆದ ಚುನಾವಣೆಯಲ್ಲಿ ಅವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಿದೆ. ಈ ಬಾರಿ ಅದರ ಹತ್ತು ಪಟ್ಟು ಹಣ ಖರ್ಚು ಮಾಡಿದರೂ ಠೇವಣಿ ಕಳೆದುಕೊಳ್ಳುವುದನ್ನು ತಪ್ಪಿಸಲು ಆಗುವುದಿಲ್ಲ. ಜನರು ಸಿ.ಎನ್.ಮಂಜುನಾಥ್ ಅವರ ಪರ ನಿಂತಿದ್ದಾರೆ. ಬಿಜೆಪಿ ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲ್ಲ. ಕಾಂಗ್ರೆಸ್‌ನೊಳಗೆ ವಿರೋಧಗಳಿವೆ, ಗುಂಪುಗಳ ನಡುವೆ ದ್ವೇಷವಿದೆ. ಅವರಿಗೆ ಬಿಜೆಪಿಗಿಂತಲೂ ಅವರವರ ನಡುವೆಯೇ ದ್ವೇಷವಿದೆ. ಹೀಗಿರುವಾಗ ನಾವು ಯಾಕೆ ಸರ್ಕಾರವನ್ನು ಅಸ್ಥಿರಗೊಳಿಸಲಿ? ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪರಿಸ್ಥಿತಿ ಹದಗೆಡಲಿದೆ. ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರವೇ ಪತನವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts