More

    ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ

    ಹನೂರು: ಜನರು ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವುದರಿಂದ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದು ಖಚಿತ ಎಂದು ಶಾಸಕ ಆರ್.ನರೇಂದ್ರ ವಿಶ್ವಾಸವ್ಯಕ್ತಪಡಿಸಿದರು.

    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆಯೋಜಿಸಿದ್ದ ಮತಯಾಚನೆ ಸಭೆಯಲ್ಲಿ ಮಾತನಾಡಿ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಜಾತಿ ಜಾತಿಯ ನಡುವೆ ವಿಷ ಬೀಜವನ್ನು ಬಿತ್ತುತ್ತಿದೆ. ರೈತರು ಹಾಗೂ ಗೋವುಗಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಗೋ ಶಾಲೆಯನ್ನು ತೆರೆದು ಸಹಾಯ ಮಾಡಬಹುದಿತ್ತು. ಆದರೆ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೊಳಿಸಿ ರೈತರನ್ನು ಸಂಕಷ್ಟಕ್ಕೆ ನೂಕಿದೆ ಎಂದು ದೂರಿದರು.

    ಔಷಧ, ಗ್ಯಾಸ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿ ಜನ ಸಾಮಾನ್ಯರನ್ನು ಸರ್ಕಾರ ತೊಂದರೆಗೆ ಸಿಲುಕಿಸಿದೆ. ಈ ಬಗ್ಗೆ ಜನತೆಗೆ ಈಗಾಗಲೇ ಮನದಟ್ಟಾಗಿದೆ. ಆದಾಗ್ಯೂ ಬಿಜೆಪಿ ಜನರನ್ನು ಓಲೈಸುವ ಕಾರ್ಯ ಮಾಡುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

    ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುಕುಂದವರ್ಮ ಮಾತನಾಡಿ, ಬಿಜೆಪಿಗೆ ಬಡವರು, ದೀನ ದಲಿತರು ಹಾಗೂ ಹಿಂದುಳಿದ ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಹಲವು ಹಗರಣದಲ್ಲಿ ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ. ಹಾಗಾಗಿ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದರು.

    ಬಳಿಕ ಚನ್ನಾಲಿಂಗನಹಳ್ಳಿ, ಜಿ.ಕೆ ಹೊಸೂರು, ಕಣ್ಣೂರು, ಎಡಳ್ಳಿದೊಡ್ಡಿ, ಅಲಗುಮೂಲೆ, ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ಹಲಗಾಪುರ, ಜಿ.ಆರ್.ನಗರ, ಅಣಗಳ್ಳಿದೊಡ್ಡಿ, ನಾಗನತ್ತ, ಭೈರನತ್ತ ಹಾಗೂ ಈ ಭಾಗದ ಇತರ ಗ್ರಾಮಗಳಲ್ಲಿ ಶಾಸಕರು ಮತಯಾಚಿಸಿದರು.

    ಇದೇ ವೇಳೆ ಚನ್ನಾಲಿಂಗನಹಳ್ಳಿ ಗ್ರಾಪಂ ಮಾಜಿ ಸದಸ್ಯ ಕೃಷ್ಣಪ್ಪ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯ ಸಂಪತ್‌ಕುಮಾರ್, ಗ್ರಾಪಂ ಸದಸ್ಯ ಸಿ.ಪ್ರಭು, ನಿವೃತ್ತ ಎಸೈ ಸಿದ್ದಲಿಂಗೇಗೌಡ, ಎಂಡಿಸಿಸಿ ನಿವೃತ್ತ ಮ್ಯಾನೇಜರ್ ಸೋಮಣ್ಣ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಮುಖಂಡರಾದ ಮಹದೇವಸ್ವಾಮಿ, ಲೋಕೇಶ್, ಪುಟ್ಟರಾಜು, ರವೀಂದ್ರ, ಚೆಲುವರಾಜು, ನಾಗೇಂದ್ರ, ಮಾದೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts