More

    ಕಾಂಗ್ರೆಸ್‌ಗೆ ರೇಣುಕಾಚಾರ್ಯ ಅನಿವಾರ್ಯವಲ್ಲ – ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿಕೆ

    ದಾವಣಗೆರೆ: ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಲ್ಲ ಹಾಗೂ ಅವಶ್ಯಕತೆಯೂ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸ್ಪಷ್ಟಪಡಿಸಿದರು.

    ಸಂವಿಧಾನ ವಿರೋಧಿ ಧೋರಣೆ ಹೊಂದಿರುವ ರೇಣುಕಾಚಾರ್ಯ ಹಾಗೂ ಕಾಂಗ್ರೆಸ್ ತತ್ವ, ಸಿದ್ಧಾಂತಗಳೇ ಬೇರೆಯಾಗಿವೆ. ಅವರನ್ನು ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ವಿರೋಧಿಸುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರೇಣುಕಾಚಾರ್ಯ ಅಭಿವೃದ್ಧಿ ಹೆಸರಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿಯಾಗಿ ಬ್ಲಾಕ್‌ಮೇಲ್ ತಂತ್ರ ಮಾಡುವ ಮೂಲಕ ಬಿಜೆಪಿಯಲ್ಲಿ ಅಧಿಕಾರ ಪಡೆಯುವ ಹವಣಿಕೆ ಹೊಂದಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮುಜುಗರ ತಂದಿದ್ದು, ಇದನ್ನು ಕೈಬಿಡಬೇಕು ಎಂದರು.
    ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಗಮನ ನೀಡದೆ ಕೇವಲ ಬ್ಲಾಕ್‌ಮೇಲ್ ರಾಜಕಾರಣ ನಡೆಸುತ್ತ ಬಂದ ರೇಣುಕಾಚಾರ್ಯಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಅವರಿಗೆ ಮತಿಭ್ರಮಣೆ ಆಗಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರು ಹಾಗೂ ಸಚಿವರು ನೋಡಿಕೊಳ್ಳುತ್ತಾರೆ. ಇವರಿಗೇನು ಸಂಬಂಧ? ಎಂದು ಪ್ರಶ್ನಿಸಿದರು.
    ರೇಣುಕಾಚಾರ್ಯ ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿ ವಿರುದ್ಧವೇ ಮಾತನಾಡುತ್ತಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಬುದ್ದಿ ಇರುವವರು. ಒಂದು ಕೋಮು ಹಾಗೂ ಜಾತಿ, ಧರ್ಮದ ಮತ ಕೇಳುವ ರೇಣುಕಾಚಾರ್ಯ ಸಾಮಾಜಿಕ ನ್ಯಾಯ ಪರಿಪಾಲನೆಯ ಕಾಂಗ್ರೆಸ್‌ಗೆ ಅವಶ್ಯಕತೆಯಿಲ್ಲ. ಅವರು ಪಕ್ಷ ಸೇರ್ಪಡೆಯಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕೆ.ಜಿ. ಶಿವಕುಮಾರ್, ಹರೀಶ್ ಬಸಾಪುರ, ಡೋಲಿ ಚಂದ್ರು, ರಾಜೇಶ್ವರಿ, ಆಲಿ ರೆಹಮಾನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts